ಹುಡುಗರು ಶರ್ಟ್ ಬಿಚ್ಚಿದ್ರೆ ರಶ್ಮಿಕಾಗೆ ಇಷ್ಟ ಆಗೋದಿಲ್ವಂತೆ
ಸಾನ್ವಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ಈಗ ಯಾರ ಕೈಗೂ ಸಿಗದಷ್ಟು ಬ್ಯುಸಿ. ಕನ್ನಡ ಭಾಷೆಯ ಸಿನಿಮಾದಲ್ಲಿ ನಟಿಸಲು ಸಮಯ ಸಿಗುತ್ತಿಲ್ಲ. ಸದ್ಯ ತೆಲುಗು, ತಮಿಳು, ಬಾಲಿವುಡ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಹೀಗಿದ್ರೂ, ಜಾಹೀರಾತು, ಸಂದರ್ಶನ ಅಂತ ರಶ್ಮಿಕಾ ಆಗಾಗ ಅಭಿಮಾನಿಗಳ ಮುಂದೆ ಬರುವುದನ್ನೂ ನಿಲ್ಲಿಸಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ಕೊಟ್ಟ ಹೇಳಿಕೆಗಳ ಬಗ್ಗೆ ಹುಡುಗರನ್ನು ಚಿಂತೆಗೀಡು ಮಾಡಿದೆ.
ಹುಡುಗಿರ ಮುಂದೆ ಸುಂದರ ಸುಂದರಾಂಗನಾಗಿ ಕಾಣಬೇಕು. ಹುಡುಗಿರ ಮನ ಕದಿಯಲು ಸಿಕ್ಸ್ ಪ್ಯಾಕ್ ಮಾಡಬೇಕು. ಅವರಿಂದ ಮೆಚ್ಚುಗೆ ಗಳಿಸಲು ದೇಹವನ್ನು ದಂಡಿಸಬೇಕು ಅಂತ ಬಹಳ ಕಷ್ಟ ಪಡುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ಕೊಟ್ಟ ಒಂದು ಹೇಳಿಕೆಯಿಂದ ಹುಡುಗಿರನ್ನು ಇಂಪ್ರೆಸ್ ಮಾಡಲು ಹೊರಟ ಹುಡುಗರು ಗೊಂದಲದಲ್ಲಿ ಬೀಳುವಂತಾಗಿದೆ. ಸದಾ ಜಿಮ್ಮಿನಲ್ಲೇ ಕಾಲಕಳೆಯುವ ಹುಡುಗರಿಗೆ ನಿರಾಸೆಯುಂಟು ಮಾಡಿದೆ. ಅಷ್ಟಕ್ಕೂ ನ್ಯಾಷನಲ್ ಕ್ರಶ್ ಅಂಥದ್ದೇನು ಹೇಳಿದ್ದಾರೆ? ಮಾಹಿತಿಗಾಗಿ ಮುಂದೆ ಓದಿ.
ಡೇಟಿಂಗ್ ಆಪ್ ಟಾಕ್ ಶೋನಲ್ಲಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೋ.. ಅಷ್ಟೇ ಜಾಹೀರಾತುಗಳಲ್ಲೂ ಬ್ಯುಸಿಯಾಗಿದ್ದಾರೆ. ರಶ್ಮಿಕಾ ರಾಯಬಾರಿಯಾಗಿರುವ ಜಾಹೀರಾತಿನ ಪ್ರಚಾರದಲ್ಲೂ ಭಾಗಿಯಾಗುತ್ತಾರೆ. ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಈಗ ಟಿಂಡರ್ ಅನ್ನುವ ಡೇಟಿಂಗ್ ಆಪ್‌ನಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಈ ವೇಳೆ ರಶ್ಮಿಕಾ ಟಿಂಡರ್ ಆಯೋಜಿಸಿದ್ದ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಡೇಟಿಂಗ್‌ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಪ್ರಶ್ನೆಗಳಿಗೆ ಕಿರಿಕ್ ಬೆಡಗಿ ನೇರಾನೇರ ಉತ್ತರ ಕೊಟ್ಟಿದ್ದಾರೆ. ಡೇಟಿಂಗ್ ಆಪ್‌ನಲ್ಲಿ ಹುಡುಗರು ತಮ್ಮ ಪ್ರೊಫೈಲ್‌ನಲ್ಲಿ ಶರ್ಟ್‌ಲೆಸ್ ಫೋಟೊ ಹಾಕುತ್ತಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳಾಗಿತ್ತು. ಇಂತಹ ಟ್ರಿಕ್ಕಿ ಪ್ರಶ್ನೆಗಳಿಗೆ ರಶ್ಮಿಕಾ ಚಾಣಾಕ್ಷ ಉತ್ತರ ನೀಡಿದ್ದಾರೆ.

'ಹುಡುಗರು ಶರ್ಟ್‌ಲೆಸ್ ಫೋಟೊ ಯಾಕೆ ಹಾಕಬೇಕು?'
"ಹುಡುಗರು ಚೆನ್ನಾಗಿ ವರ್ಕ್‌ಔಟ್ ಮಾಡಿ, ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಳ್ಳುವವರನ್ನು ಅಭಿನಂದಿಸುತ್ತೇನೆ. ಅದು ಅವರ ಡೆಡಿಕೇಷನ್ ಅನ್ನು ತೋರಿಸುತ್ತದೆ. ಆದರೆ, ಡೇಟಿಂಗ್ ಆಪ್‌ನಲ್ಲಿ ಅವರು ಶರ್ಟ್ ಬಿಚ್ಚಿದ ಫೋಟೊವನ್ನು ಯಾಕೆ ಹಾಕುತ್ತಾರೆ? ನನಗೆ ಇದು ಮಾತ್ರ ಅರ್ಥ ಆಗಲ್ಲ. ಈ ವಿಚಾರದಲ್ಲಿ ನಾನು ಹಳೆಯ ಕಾಲದವರ ಹಾಗೆ ಯೋಚಿಸುತ್ತೇನೆ." ಎಂದು ಟಾಕ್ ಶೋ ನಲ್ಲಿ ಹೇಳಿದ್ದಾರೆ. ಈ ಮಾತಿನಿಂದ ಜಿಮ್‌ನಲ್ಲೇ ಕಾಲ ಕಳೆಯೋ ಪಡ್ಡೆ ಹುಡುಗರಿಗೆ ಖಂಡಿತಾ ಬೇಸರ ಆಗಿರುತ್ತೆ.

ಹುಡುಗರನ್ನು ನೋಡಿದರೆ ಡೇಟಿಂಗ್ ಅಂತಿದ್ರು
"ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದಿರುವ ನನಗೆ, ಅಲ್ಲಿ ಒಬ್ಬ ಹುಡುಗನನ್ನು ನೇರವಾಗಿ ನೋಡಿದರೆ ಸಾಕು ಅದನ್ನೇ ಡೇಟಿಂಗ್ ಎನ್ನುತ್ತಿದ್ದರು" ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ನಿಮಗಿಂತ ಚಿಕ್ಕವರೊಂದಿಗೆ ಡೇಟಿಂಗ್ ಹೋಗುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. " ಡೇಟಿಂಗ್ ಮಾಡಲು ವಯಸ್ಸು ಮುಖ್ಯ ಆಗುವುದಿಲ್ಲ. ವ್ಯಕ್ತಿ ಮುಖ್ಯ ಆಗುತ್ತಾನೆಂದು" ಎಂದು ರಶ್ಮಿಕಾ ಮಂದಣ್ಣ ಉತ್ತರ ಕೊಟ್ಟಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿ
ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಿಡುಗಡೆಗೆ ಸಿದ್ಧವಾಗಿದೆ. ಇದೇ ಚಿತ್ರ ಪಾರ್ಟ್ 2 ನಲ್ಲಿ ಚಿತ್ರೀಕರಣ ನಡೆಯಬೇಕಿದೆ. ಬಾಲಿವುಡ್‌ನಲ್ಲಿ ಎರಡು ಸಿನಿಮಾ ಸೆಟ್ಟೇರಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್‌ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವು ಸಿಕ್ಕಾಗ ಜಾಹೀರಾತು, ಟಾಕ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.


Click it and Unblock the Notifications











