"ದರ್ಶನ್ ಬರ್ತ್‌ಡೇಗೆ ಹೋದಾಗ ಅವಮಾನ ಆಯ್ತು, ಊಟ ಮಾಡದೆ ಬಂದ್ಬಿಟ್ಟೆ"; ರವಿಚೇತನ್
ದರ್ಶನ್ ಸುತ್ತಮುತ್ತ ಯಾವಾಗಲೂ ಸಿನಿಮಾ ಮಂದಿನೇ ಕಾಣಿಸಿಕೊಳ್ಳುತ್ತಿದ್ದರು. ಅವರು ದರ್ಶನ್ ಆತ್ಮೀಯರಂತೆ ಗುರುತಿಸಿಕೊಂಡಿದ್ದರು. ನಟರು, ತಂತ್ರಜ್ಞರ ದೊಡ್ಡ ತಂಡವೇ ಇರುತ್ತಿತ್ತು. ಆದರೆ ಕಾಲ ಕ್ರಮೇಣ ದರ್ಶನ್ ಗ್ಯಾಂಗ್‌ನಲ್ಲಿ ಮೊದಲಿದ್ದವರೆಲ್ಲ ಒಬ್ಬೊಬ್ಬರಾಗಿಯೇ ಕಾಣೆಯಾಗುತ್ತಾ ಹೋದರು. ಒಂದು ಕಾಲದಲ್ಲಿ ಆತ್ಮೀಯರಾಗಿದ್ದವರ ಜಾಗದಲ್ಲಿ ಮತ್ಯಾರೋ ಬಂದಿದ್ದರು. ಹೊಸ ಗ್ಯಾಂಗ್‌ಗೂ ಹಳೆ ಗ್ಯಾಂಗ್‌ಗೂ ವೈಮನಸ್ಸು ಶುರುವಾಗಿತ್ತು.
ದರ್ಶನ್‌ಗೆ ಇದೆಲ್ಲ ಅರಿವಿತ್ತೋ? ಇಲ್ವೋ? ಆ ಎಲ್ಲರೂ ಹೇಳಿಕೊಂಡಿಲ್ಲ. ರೇಣುಕಾಸ್ವಾಮಿ ಪ್ರಕರಣ ನಡೆಯುವ ವೇಳೆಗಾಗಲೇ ದರ್ಶನ್ ಹಳೆ ಗ್ಯಾಂಗ್ ಒಬ್ಬೊಬ್ಬರಾಗಿಯೇ ದೂರ ಸರಿದಿದ್ದರು. ಅಂತಹವರಲ್ಲಿ ಒಬ್ಬರು ನಟ ರವಿ ಚೇತನ್. ದರ್ಶನ್ ನಟಿಸಿದ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ನಟಿಸಿದ 'ಕಾಟೇರ' ಸಿನಿಮಾದಲ್ಲಿಯೂ ರವಿ ಚೇತನ್ ನಟಿಸಿದ್ದರು.

ರವಿ ಚೇತನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಕೇವಲ ತೆರೆಮೇಲಷ್ಟೇ ಅಲ್ಲ. ತೆರೆಯ ಹಿಂದೆ ಕೂಡ ಅತ್ಮೀಯರಾಗಿದ್ದರು. ಆದರೆ, ಇತ್ತೀಚೆಗೆ ಯಾಕೋ ಹೆಚ್ಚು ಒಡನಾಟವಿರಲಿಲ್ಲ. ಅದಕ್ಕೆ ಕಾರಣವೇನು ಅನ್ನೋದನ್ನು ಖುದ್ದಾಗಿ ರವಿ ಚೇತನ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಬರ್ತ್‌ಡೇ ದಿನದ ನಡೆದ ಘಟನೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಮದುವೆ ಗಂಡು ತಂದೆ ರೇಗಿಸುತ್ತಿದ್ದರು
ದರ್ಶನ್ ಸಿನಿಮಾದಲ್ಲಿ ರವಿ ಚೇತನ್‌ಗೆ ಒಂದಲ್ಲ ಒಂದು ಪಾತ್ರ ಇರುತ್ತಿತ್ತು. ದರ್ಶನ್ ನಟಿಸಿದ ಅರ್ಧದಷ್ಟು ಸಿನಿಮಾದಲ್ಲಿ ರವಿ ಚೇತನ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರವಿ ಚೇತನ್ ಪಾತ್ರ ನೋಡಿ ಸ್ವತ: ದರ್ಶನ್ ಮದುವೆ ಗಂಡು ಅಂತ ರೇಗಿಸುತ್ತಿದ್ದರಂತೆ. "ದರ್ಶನ್ ಯಾವಾಗಲೂ ಒಂದು ಜೋಕ್ ಮಾಡೋರು. ಈಗಲೂ ನನಗೆ ಮದುವೆ ಗಂಡು ಅಂತಾನೇ ರೇಗಿಸುತ್ತಾರೆ. ಯಾವಾಗಲೂ ಅಷ್ಟೇ ಹೀರೋಯಿನ್ ಮೇಲೆ ಕಣ್ಣು ಹಾಕುತ್ತಿದ್ದೆ. ಅವಳನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿಗೆ ಬಂದು ಫೈಟ್ ಮಾಡಿ ಕರೆದುಕೊಂಡು ಹೋಗೋರು. ಏಯ್ ಆ ಪಿಕ್ಚರ್‌ನಲ್ಲಿ ಹೊಡೆದು ಕಳಿಸಿದ್ದೆ. ಮತ್ತೆ ಇಲ್ಲಿಗೆ ಬಂದಿದ್ದೀಯಾ ಅನ್ನೋರು. ಈತರ ಒಂದು ಬಾಂಡಿಂಗ್ ಇತ್ತು. ಅವರೂ ಅಷ್ಟೇ ಬಿಗ್ ಸ್ಟಾರ್ ಆಗಿದ್ದರೂ ತುಂಬಾನೇ ಫ್ರೆಂಡ್ಲಿಯಾಗಿದ್ದರು." ಎಂದು ಆ ದಿನಗಳನ್ನು ರವಿ ಚೇತನ್ ನೆನಪಿಸಿಕೊಂಡಿದ್ದಾರೆ.
ಯಾರ್‍ಯಾರೋ ಬಂದು ಸೇರಿಕೊಂಡರು
ದರ್ಶನ್ ಬರ ಬರುತ್ತಾ ಹಳೇ ಗ್ಯಾಂಗ್ ಜೊತೆ ಸಂಪರ್ಕ ಕಡಿದುಕೊಳ್ಳುವುದಕ್ಕೆ ಶುರು ಮಾಡಿದ್ದರು. ಅದಕ್ಕೆ ಕಾರಣ ಅವರೊಂದಿಗೆ ಇತ್ತ ನಾಲ್ಕೈದು ಮಂದಿ ಎಂದು ರವಿ ಚೇತನ್ ಹೇಳುತ್ತಾರೆ. "ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕೆಲವು ಘಟನೆಗಳು ನಡೀತು. ನಮಗೂ ಕೆಲವು ಇಷ್ಟ ಆಗಿಲ್ಲ. ಯಾರ್‍ಯಾರೋ ಬಂದು ಸೇರಿಕೊಂಡರು. ಇವೆಲ್ಲವನ್ನು ದರ್ಶನ್ ಹತ್ತಿರ ಮಾತಾಡಿಕೊಳ್ಳಬೇಕು ಅಂತ ಡಿಸೈಡ್ ಮಾಡಿದ್ದೆ. ಅಷ್ಟರಲ್ಲಿ ಈತರ ಎಲ್ಲಾ ಆಗಿ ಹೋಯ್ತು. ಅವರು ಅರೆಸ್ಟ್ ಆದ್ಮೇಲೆ ಯಾರೂ ಅವರ ಬಗ್ಗೆ ಮಾತಾಡಿರಲಿಲ್ಲ. ಸರ್ ನೀವೇ ಸರ್ ಮೊದಲು ಮಾತಾಡುತ್ತಿರೋದು ಅಂತ ಮಾಧ್ಯಮದವರು ಹೇಳಿದ್ದರು. ನಾನು ಕಂಡ ದರ್ಶನ್ ಅಲ್ಲ ಇದು. ನೀವ್ಯಾಕೆ ಹೀಗೆ ಬಿಂಬಿಸುತ್ತಿದ್ದೀರ ಅಂತ ಹೇಳಿದ್ದೆ." ಎಂದಿದ್ದಾರೆ ನಟ ರವಿ ಚೇತನ್.
ಬರ್ತ್‌ಡೆಗೆ ಹೋದಾಗ ಅವಮಾನ ಆಯ್ತು
"ದರ್ಶನ್ ಅವರು ಆಚೆ ಬಂದಾಗ ನಾನು ಹೇಳಿರುವುದನ್ನು ನೋಡಿದ್ದಾರೋ ಇಲ್ವೋ ಗೊತ್ತಿಲ್ಲ. ನೋಡಿದ್ದರೆ, ಒಂದು ಮೆಚ್ಚಿಕೊಳ್ಳಬೇಕಿತ್ತು. ಇನ್ನೊಂದು ಬೈಯ್ಯಬೇಕಿತ್ತು. ಎರಡನ್ನೂ ಮಾಡಿಲ್ಲ. ಹಾಗಾಗಿ ನಾನು ಸುಮ್ಮನೆ ಇದ್ದೇನೆ. ಕಳೆದ ಬಾರಿ ಬರ್ತ್‌ಡೇಯಲ್ಲಿ ಅವರನ್ನು ಭೇಟಿ ಮಾಡಿದ್ದೆ ಅಷ್ಟೇ. ಆಮೇಲೆ ಮಾಡಲಿಲ್ಲ. ಕಳೆದ ಬಾರಿ ಬರ್ತ್‌ಡೇಗೆ ಹೋದಾಗ ನನಗೂ ಒಂದು ಕಹಿ ಅನುಭವ ಆಯ್ತು. ಅದೇನು ಅಂತ ಹೇಳುವುದಕ್ಕೆ ಆಗುವುದಿಲ್ಲ. ಹುಟ್ಟುಹಬ್ಬಕ್ಕೆ ಹೋದರೆ ಊಟ ಮಾಡದೆ ಬಂದಿದ್ದೇ ಇಲ್ಲ. ಅವತ್ತು ಊಟ ಮಾಡಲಿಲ್ಲ. ಹಾಗೇ ಬಂದು ಬಿಟ್ಟೆ. ಆಗ ಈ ವಿಷಯವನ್ನು ಹೇಳೋಣ ಅಂತಿದ್ದೆ. ಅಷ್ಟರಲ್ಲಿ ಹೀಗೆಲ್ಲ ಮಾಡಿಕೊಂಡರು. ಸುತ್ತಮುತ್ತ ಇರುವ ಜನ ಸರಿಯಿಲ್ಲ. ಕುರುಕ್ಷೇತ್ರನೇ ಕೊನೆ. ಅವರ ಸ್ನೇಹಿತರೆಲ್ಲ ಜೊತೆಯಲ್ಲಿ ಇರೋರು. ಸಿನಿಮಾ ಜೊತೆಗೆ ಇರೋರು. ಡೈರೆಕ್ಟರ್, ಪ್ರಡ್ಯೂಸರ್ ಜೊತೆ ಇರೋರು. ಕೂತರೂ ನಿಂತಲೂ ಸಿನಿಮಾ ಬಗ್ಗೆನೇ ಮಾತಾಡೋರು. ಅದೇನೋ ಒಂದು ಮೂರು ನಾಲ್ಕು ಜನ ಸೇರಿಕೊಂಡರು. ಅವರ ಸ್ನೇಹಿತರು ಒಂದಿಷ್ಟು ಜನ ಬಿಟ್ಟು ಹೋದರು. ಏನೇನೋ ಆಯ್ತು. ನಾನು ಹೋಗುವುದು ಕಮ್ಮಿ ಮಾಡಿದೆ. ಬರ್ತ್‌ಡೇ ಹೋದಾಗ ನನಗೂ ಅವಮಾನ ಆಯ್ತು. ನನಗೂ ಅದು ಬೇಜಾರಾಯ್ತು. ಆಮೇಲೆ ನಾನು ಅವರ ಹತ್ತಿರ ಹೋಗಿಲ್ಲ." ಎಂದು ಸಂದರ್ಶನದ ವೇಳೆ ನಟ ರವಿ ಚೇತನ್ ಹೇಳಿದ್ದಾರೆ.


Click it and Unblock the Notifications











