ರವಿಚಂದ್ರನ್ ನಾಯಕಿಗೂ ಹೊಂದಾಣಿಕೆ ಮಾಡಿಕೊಳ್ಳುವಂತೆ ನಿರ್ದೇಶಕ ಹೇಳಿದ್ನಂತೆ: ನಟಿಯ ಆರೋಪವೇನು?
ನಿಮಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಜಾಣ' ಸಿನಿಮಾದ "ಪ್ರೇಮಲೋಕದ ಪಾರಿಜಾತವೇ.." ಹಾಡು ನೆನಪಿದ್ಯಾ? ಆ ಹಾಡಿನಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ನಾಯಕಿಯ ಹೆಸರು ಕಸ್ತೂರಿ ಶಂಕರ್. ಜಾಣ ನಂತರವೂ 'ಹಬ್ಬ', 'ತುತ್ತಾ ಮುತ್ತಾ' ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಹೆಚ್ಚಾಗಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೇ ಕಸ್ತೂರಿ ಬ್ಯುಸಿಯಾಗಿದ್ರು. 80-90ರ ದಶಕಗಳಲ್ಲಿ ಕಸ್ತೂರಿ ಬಹು ಬೇಡಿಕೆಯ ನಟಿ. ಧಾರಾವಾಹಿಗಳ ಮೂಲಕ ಈಗಲೂ ಬ್ಯುಸಿಯಾಗಿರುವ ಈಕೆ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಹೇಮಾ ಸಮಿತಿ ವರದಿಯದ್ದೇ ಚರ್ಚೆ ನಡೆಯುತ್ತಿದೆ. ಬೇರೆ ಭಾಷೆಗಳ ಚಿತ್ರರಂಗದಲ್ಲೂ ಇಂಥದ್ದೇ ಒಂದು ವರದಿ, ವಿಚಾರಣೆ, ಚಿತ್ರರಂಗದಲ್ಲಿ ಕೆಲಸ ಮಾಡುವ ಹಣ್ಣುಮಕ್ಕಳ ಸುರಕ್ಷತೆಗಾಗಿ ನಿಯಮಗಳು ಬರಬೇಕು ಎಂಬೆಲ್ಲಾ ವಿಚಾರಗಳು ವ್ಯಾಪಕವಾಗಿ ಚರ್ಚೆಯಾಗ್ತಿದೆ. ಜೊತೆಗೆ ಹಿಂದೆ ತಮಗೂ ನಡೆದ ದೌರ್ಜನ್ಯಗಳ ಬಗ್ಗೆ ಅನೇಕ ಹಿರಿಕಿರಿಯ ನಟಿಯರು ಮಾತನಾಡುತ್ತಿದ್ದಾರೆ.

ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ನಟಿ ಕಸ್ತೂರಿ ಶಂಕರ್ ಸದಾ ತಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾತನಾಡುವ ಸ್ವಭಾವದವರು. ತಮ್ಮ ಎರಡನೇ ಸಿನಿಮಾದಲ್ಲೇ ತಮಗೂ ಒಂದು ಕೆಟ್ಟ ಅನುಭವವಾಗಿತ್ತು. ಆ ಸಿನಿಮಾದ ನಿರ್ದೇಶಕರು ತನಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದ್ದರು. ನಾನು ನಿರಾಕರಿಸಿದ್ದರಿಂದಾಗಿ ತನ್ನ ದೇಹದ ಬಗ್ಗೆ ತಪ್ಪಾಗಿ ಮಾತನಾಡಿ ಸಿನಿಮಾದಿಂದ ತನ್ನನ್ನು ಕೈ ಬಿಡಲಾಗಿತ್ತು ಎಂದು ಕಸ್ತೂರಿ ತನ್ನ ಅನುಭವ ಹಂಚಿಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನಟಿ ಕಸ್ತೂರಿ ಇತ್ತೀಚೆಗೆ ಸಂದರ್ಶನ ನೀಡಿದ್ದಾರೆ. ಅಲ್ಲಿ ಈ ವಿಚಾರ ಬಂದಾಗ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. "ನನ್ನ ಎರಡನೇ ಸಿನಿಮಾದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ನಿರ್ದೇಶಕರು ಕೇಳಿದ್ದರು. ಆದರೆ ನಾನು ಒಪ್ಪಲಿಲ್ಲ. ಹಾಗಾಗಿ ಸಿನಿಮಾದ ಒಂದು ಶೆಡ್ಯೂಲ್ ಶೂಟಿಂಗ್ ಮುಗಿದಿದ್ದರೂ ನನ್ನನ್ನು ಆ ಸಿನಿಮಾದಿಂದ ಕೈಬಿಡಲಾಗಿತ್ತು. ಕಾರಣ ಕೇಳಿದ್ದಕ್ಕೆ ನಾನು ತೆಳ್ಳಗಿದ್ದೇನೆ, ಹಾಗಾಗಿ ಆ ಪಾತ್ರಕ್ಕೆ ಸೂಟ್ ಆಗಲ್ಲ ಎಂದಿದ್ದರು. ಸಾಮಾನ್ಯವಾಗಿ ಯಾವುದೇ ಸಿನಿಮಾ ಶುರು ಮಾಡಿದಾಗಲೇ ಆಡಿಷನ್ ಮಾಡುತ್ತಾರೆ. ಆಗಲೇ ನಾನು ತೆಳ್ಳಗಿದ್ದೇನೆ ಎಂದು ಅವರಿಗೆ ಕಂಡಿರಲಿಲ್ವಾ? ನಂತರ ನನ್ನ ದೇಹದ ಬಗ್ಗೆ ಹೀಗೆಲ್ಲಾ ಕಮೆಂಟ್ ಮಾಡಿ ಚಿತ್ರದಿಂದಲೇ ಕೈಬಿಟ್ಟರು" ಎಂದು ನಟಿ ಕಸ್ತೂರಿ ಶಂಕರ್ ವಿವರವಾಗಿ ತಿಳಿಸಿದ್ದಾರೆ.

"ಒಂದು ವೇಳೆ ನನಗೆ ನಟನೆಯೇ ಸರಿಯಾಗಿ ಬರೋದಿಲ್ಲ ಅಂತಲೋ ಅಥವಾ ಡ್ಯಾನ್ಸ್ ಮಾಡೋಕೆ ಬರೋದಿಲ್ಲ ಹಾಗಾಗಿ ಸಿನಿಮಾದಿಂದ ನಿನ್ನನ್ನು ಡ್ರಾಪ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದರೂ ನನಗೆ ಬೇಜಾರಾಗುತ್ತಿರಲಿಲ್ಲ, ಸಮಾಧಾನವಾಗಿರುತ್ತಿತ್ತು. ಆದರೆ ಇಂಥಾ ನೀಚ ಕಾರಣ ಹೇಳಿ ನನ್ನನ್ನು ಸಿನಿಮಾದಿಂದ ಹೊರಗೆ ಕಳುಹಿಸಿದ್ದು ನಿಜಕ್ಕೂ ತಪ್ಪು. ನಾನು ವಿದ್ಯಾವಂತ, ಶ್ರೀಮಂತ ಕುಟುಂಬದಿಂದ ಬಂದವಳು. ನನ್ನ ತಾಯಿ ವಕೀಲರು. ಇಂಥಾ ನನಗೇ ಈ ರೀತಿಯ ಅನುಭವವಾಗಿದೆ. ಇನ್ನು ಪಾಪ ಅನೇಕ ಮುಗ್ಧ ಯುವತಿಯರು ಸಿನಿಮಾದಲ್ಲೇ ಬದುಕು ಕಟ್ಟಿಕೊಳ್ಳುವ ಆಸೆಯಿಂದ ಬಂದಿರುತ್ತಾರೆ. ಅಂಥವರನ್ನೆಲ್ಲಾ ಇಲ್ಲಿನ ನೀಚರು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ತಾರೋ ಯೋಚಿಸುವಂತಾಗುತ್ತದೆ. ಏನೇ ಆದರೂ ಚಿತ್ರರಂಗಕ್ಕೆ ಬರಲು ಇಚ್ಛಿಸುವ ಹೆಣ್ಣುಮಕ್ಕಳು ತಮ್ಮ ಎಚ್ಚರಿಕೆಯಲ್ಲಿ ತಾವು ಇರುವುದು ಒಳ್ಳೆಯದು" ಎಂದು ನಟಿ ಕಸ್ತೂರಿ ಶಂಕರ್ ಇದೇ ಸಂದರ್ಭದಲ್ಲಿ ಹೇಳಿದರು.
ಕಸ್ತೂರಿ ಶಂಕರ್ ಹೇಳಿರುವ ಈ ಮಾತುಗಳು ಸದ್ಯ ಚರ್ಚೆಯಾಗುತ್ತಿದೆ. ಆ ನಿರ್ದೇಶಕ ಯಾರು, ಮುಂದೆ ಯಾರಿಗೂ ಹೀಗಾಗದಂತೆ ತಡೆಯಲು ಏನು ಮಾಡಬಹುದು ಎನ್ನುವ ವಿಚಾರಗಳು ಸಾರ್ವಜನಿಕವಾಗಿ ಎಲ್ಲೆಡೆ ಚರ್ಚೆ ಆಗುತ್ತಿರುವುದಂತೂ ಸತ್ಯ.


Click it and Unblock the Notifications











