"ಈಗ ಹುಡುಗಿ ಹಿಡ್ಕೊಂಡ್ರೆ 63ನೇ ವಯಸ್ಸಲ್ಲಿ ಹಿಡ್ಕೊಂಡ ಅಂತಾರೆ"; ಹಂಸಲೇಖಗೆ ಕ್ರೇಜಿ ಉತ್ತರ
ರವಿಚಂದ್ರನ್ ಹಾಗೂ ಹಂಸಲೇಖ.. ಈ ಜೋಡಿ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಜೋಡಿ. ಇವರು ಒಟ್ಟಾಗಿ ಕೊಟ್ಟ ಹಿಟ್ ಸಿನಿಮಾಗಳು ಒಂದೆರೆಡಲ್ಲ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಒಂದೊಂದು ಹಾಡುಗಳನ್ನು ಇಂದಿನ ಪೀಳಿಗೆ ಕೂಡ ಮೆಲುಕು ಹಾಕುತ್ತೆ. ಆದರೆ, ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡದೇ ಇರುವುದಕ್ಕೆ ನಿರ್ಧರಿಸಿ ದೂರವಾಗಿದ್ದಾರೆ. ಆದರೆ, ಸ್ನೇಹ ಮಾತ್ರ ಹಾಗೇ ಉಳಿದುಕೊಂಡಿದೆ.
ಹಂಸಲೇಖ 74ನೇ ವಯಸ್ಸಿನಲ್ಲಿ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ಹುಮ್ಮಸ್ಸು ಇನ್ನೂ ಕಮ್ಮಿಯಾಗಿಲ್ಲ. ಹುಟ್ಟುಹಬ್ಬದಂದೇ 'OK'ಎನ್ನುವ ಸಿನಿಮಾಗೆ ಮುಹೂರ್ತ ಮಾಡಿರುವ ಹಂಸಲೇಖ ಕ್ರೇಜಿಸ್ಟಾರ್‌ಗೆ ವಿಶೇಷ ಆಹ್ವಾನ ನೀಡಿದ್ದರು. ಈ ವೇಳೆ ಹಂಸಲೇಖ ನೀವ್ಯಾಕೆ 'ರಾಮಾಚಾರಿ', 'ಹಳ್ಳಿ ಮೇಷ್ಟ್ರು' ಅಂತಹ ಸಿನಿಮಾ ಮಾಡಲ್ಲ ಎಂದು ಪ್ರಶ್ನೆ ಹಾಕಿದ್ದರು. ಅದಕ್ಕೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ ಹೇಗಿದೆ ಅಂತ ಮುಂದೆ ಓದಿ.

ನನ್ನ ಕೈಗೆ ಗಿಟಾರ್ ಕೊಟ್ರು
"ನನ್ನ ಇವರ ಜರ್ನಿ ಶುರುವಾಗಿದ್ದು ಎನ್ ಎಸ್ ರಾವ್ ಅವರಿಂದ. ಒಂದು ಗಿಟಾರ್ ಹಿಡ್ಕೊಂಡು ಬರ್ತಾರೆ. ಆ ಗಿಟಾರ್ ಅನ್ನು ನನ್ನ ಕೈಗೆ ಕೊಡುತ್ತಾರೆ. ಅದನ್ನು ನಾನು ಬಾರಿಸಿಕೊಂಡು ಹೊರಟಿರೋದು ಇಷ್ಟು ದೂರದ ಜರ್ನಿಯಾಗಿದೆ. ಬಹುಶ: ನನ್ನ ಅವರ ಸ್ನೇಹ ಕಲ್ಮಶ ಇಲ್ಲದ ಸ್ನೇಹ. ನಾವ್ಯಾತ್ತೂ ಹೆಗಲ ಮೇಲೆ ಕೈ ಹಾಕೊಂಡು ಆಗಲಿ, ಇಲ್ಲಾ ಬಾರ್‌ನಲ್ಲಿ ಆಗಲಿ, ನಾವೇನು ಮಾಡಿಲ್ಲ. ಬರೀ ಸಿನಿಮಾ.. ಸಿನಿಮಾ.. ಅಂತ ಅಷ್ಟೇ ಯೋಚನೆ ಮಾಡಿದ್ವಿ." ಎಂದು ಹಂಸಲೇಖ ಹಾಗೂ ಅವರ ಸ್ನೇಹದ ಬಗ್ಗೆ ರವಿಚಂದ್ರನ್ ಮಾತಾಡಿದ್ದಾರೆ.
ಕಾರ್ಡ್ಸ್ ಆಡಿ ಸಿನಿಮಾಗೆ ಮೋಸ ಮಾಡಲ್ಲ
"ನೀವು ಬಂದಾಗ ಕಾರ್ಡ್ಸ್ ಆಡುತ್ತಿದ್ದೆ ಅಂದ್ರಿ. ನೀವು ನುಗ್ಗಿರುತ್ತೀರ. ನೀವು ಬಂದಾಗ ನಾನು ಕಾರ್ಡ್ಸ್ ಆಡೋದಿಲ್ಲ. ನಿಮ್ಮನ್ನು ಕರೆದು ಕಂಪೋಸ್ ಮಾಡುವ ವೇಳೆ ಕಾರ್ಡ್ಸ್ ಆಡುವ ಹುಚ್ಚು ನನಗೆ ಇಲ್ಲ. ನಿಮ್ಮನ್ನು ಕರೆಸಿ ಕಾರ್ಡ್ಸ್ ಆಡಿ, ಸಿನಿಮಾಗೆ ಮೋಸ ಮಾಡುವುದಿಲ್ಲ. ಸಿನಿಮಾದಷ್ಟು ಹುಚ್ಚು ಕಾರ್ಡ್ಸ್ ಬಗ್ಗೆ ಇಲ್ಲವೇ ಇಲ್ಲ ನನಗೆ. ನಮ್ಮಿಬ್ಬರ ಕಂಪೋಸಿಂಗ್ ಇದ್ದಿದ್ದು ಬೆಳಗಿನ ಜಾವ ನಾಲ್ಕೂವರೆಗೆ. ನೀವು ಆಗ ತುಂಬಾ ಬ್ಯುಸಿಯಾಗಿದ್ರಿ. ನಾನು ಕಾರ್ಡ್ಸ್ ಆಡುವ ಸಮಯದಲ್ಲಿ ನೀವು ನುಗ್ಗಿರುತ್ತೀರ." ಎಂದು ರವಿಚಂದ್ರನ್ ಹಂಸಲೇಖ ಅವರ ಕಾಲೆಳೆದಿದ್ದಾರೆ.
ಕಾರ್ಡ್ಸ್ ಆಡಿದ ದುಡ್ಡಿಂದ 'ಸಿಪಾಯಿ' ಆಯ್ತು
"ಸಿಪಾಯಿ ಸಿನಿಮಾ ನಾನು ಕಾರ್ಡ್ಸ್ ಆಡಿರೋದ್ರಲ್ಲೇ ಮುಗಿದು ಹೋಯ್ತು. ಆ ಘಳಿಗೆ ಅಷ್ಟು ಚೆನ್ನಾಗಿತ್ತು. ಕೆಲವೊಮ್ಮೆ ಅಂತಹ ಘಳಿಗೆಯಲ್ಲಿ ನಡೆಯುತ್ತಿರುತ್ತೆ. ಕ್ಯಾಸಿನೋದಲ್ಲಿ ಕೂತುಕೊಂಡು, ಒಂದು ವರ್ಷ ಅದೇ ದುಡ್ಡಲ್ಲಿ ಬದುಕಿದ್ದೀನಿ. ನಾನು ಗ್ಯಾಂಬ್ಲಿಂಗ್ ಆಡಿ ಈಗ ಎರಡು ವರ್ಷ ಆಯ್ತು. ಈಗ ಸಿನಿಮಾ ಮಾಡಬೇಕು ಅಷ್ಟೇ. ಹುಚ್ಚಿರುವುದು ಸಿನಿಮಾ ಬಗ್ಗೆ ಅಷ್ಟೇ." ಎಂದಿದ್ದಾರೆ.
63ರಲ್ಲಿ ಹುಡುಗಿ ಹಿಡ್ಕೊಂಡ ಅಂತಾರೆ
"ಅವರು ಕೇಳಿದರು ನೀವ್ಯಾಕೆ ರಾಮಾಚಾರಿ ಮಾಡುವುದಕ್ಕೆ ಆಗಲಿಲ್ಲ, ಹಳ್ಳಿ ಮೇಷ್ಟ್ರು ಮಾಡುವುದಕ್ಕೆ ಆಗಲಿಲ್ಲ ಅಂತ. ಈಗ ಹುಡುಗಿಯನ್ನು ಹಿಡಿದು ಕೊಂಡರೆ, 63ರಲ್ಲಿ ಹುಡುಗಿ ಹಿಡ್ಕೊಂಡ ಅಂತಾರೆ. ಹಿಡ್ಕೊಂಡಿಲ್ಲ ಅಂದರೆ, ನೀನು ಹಿಡಿದುಕೊಂಡಿಲ್ಲ ಅಂದರೆ, ಮತ್ಯಾರು ಹಿಡಿದುಕೊಳ್ತಾರೆ ಅಂತಾರೆ. ಈ ವಯಸ್ಸಲ್ಲಿ ಬೇಕಾ ಇವನಿಗೆ ಅಂತಾರೆ. ನನಗೆ ವಯಸ್ಸೇ ಆಗಿಲ್ಲ ಅಂತ ಇವತ್ತಿಗೂ ನಾನು ಅಂದುಕೊಂಡಿರೋದು. ಸಿನಿಮಾ ವಿಷಯ ಬಂದಾಗ ನನಗೆ ವಯಸ್ಸು ಆಗಿಲ್ಲ. ಆಯಸ್ಸೂ ಆಗಿಲ್ಲ." ಎಂದಿದ್ದಾರೆ ಕ್ರೇಜಿಸ್ಟಾರ್.
ಸಕ್ಸಸ್ ಅಂದರೆ ನಮ್ಮದು
"ಸಕ್ಸಸ್ ಅಂದರೆ, 86ನಲ್ಲಿ ನಾವು ಕೊಡುವುದಕ್ಕೆ ಶುರು ಮಾಡಿದ್ವಲ್ಲ ಅದು. ನಾವು ಒಂದು ದಿನಾನೂ ಸಕ್ಸಸ್ ಅನ್ನು ಹೆಗಲ ಮೇಲೆ ಹಾಕೊಂಡು ಹೋಗಲೇ ಇಲ್ಲ. ಯಾಕಂದ್ರೆ ಒಂದು ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಇನ್ನೊಂದು ಶುರುವಾಗಿ ಬಿಡೋದು. ಇನ್ನೊಂದು ಮಾಡುತ್ತಿದ್ದಂತೆ ಮತ್ತೊಂದು ಶುರುವಾಗುತ್ತಿತ್ತು. ನಾವು ಯಾವಾಗಲೂ ಸಿನಿಮಾದ ಜೊತೆ ಪ್ರಯಾಣ ಮಾಡುತ್ತಿದ್ವಿ. ಕನಸು ಕಟ್ಟುತ್ತಲೇ ಇದ್ವಿ. ಕನಸುಗಳನ್ನು ಮಾರುತ್ತಲೇ ಇದ್ವಿ. ನಾವು ಇಷ್ಟು ದೂರ ಟ್ರಾವೆಲ್ ಮಾಡಿದರೂ, ಲೆಕ್ಕಾಚಾರ ಹಾಕದೆ ಕೆಲಸ ಮಾಡಿದ್ವಿ." ಎಂದು ಇವರಿಬ್ಬರ ಜರ್ನಿಯನ್ನು ಮೆಲುಕು ಹಾಕಿದ್ದಾರೆ.


Click it and Unblock the Notifications











