"ಪ್ರೇಮಲೋಕ ಹಾಡು ಬಾರದಿದ್ದಕ್ಕೆ ಮಕ್ಕಳು ಟಿವಿನೇ ಒಡೆದು ಹಾಕ್ತಿದ್ರು, 22 ಸಾವಿರ ಕೊಟ್ಟು ಸಾಂಗ್ ಹಾಕ್ಸಿದ್ವಿ": ರವಿಚಂದ್ರನ್
ಇತ್ತೀಚೆಗೆ 'ಓ ನನ್ನ ಚೇತನ' ಮಕ್ಕಳ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮಗೂ ಹಾಗೂ ಮಕ್ಕಳಿಗೂ ಇರುವ ಬಾಂಧವ್ಯದ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ.
'ಓ ನನ್ನ ಚೇತನ' ಸಿನಿಮಾ ವೇದಿಕೆ ಮೇಲೆ ಪ್ರೇಮಲೋಕ ಸಿನಿಮಾ ಹಾಡುಗಳು, ಅದಕ್ಕಿದ್ದ ಕ್ರೇಜ್, ಮಕ್ಕಳು ಹಾಡು ಬಂದಿಲ್ಲ ಟಿವಿ ಒಡೆದು ಹಾಕುತ್ತಿದ್ದ ಘಟನೆಗಳನ್ನು ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದೂರದರ್ಶನದಲ್ಲಿ ದುಡ್ಡು ಕೊಟ್ಟು ಹಾಡು ಹಾಕಬೇಕಿದ್ದ ಸನ್ನಿವೇಶವನ್ನು ವಿವರಿಸಿದ್ದಾರೆ.

ತಮ್ಮೊಳಗೆ ಇನ್ನೂ ಮಗುವಿನ ಗುಣವಿದೆ. ಅದಕ್ಕೆ ಮಕ್ಕಳೊಂದಿಗೆ ತಮ್ಮ ಒಡನಾಟ ಹೆಚ್ಚು ಎಂದು ಕ್ರೇಜಿಸ್ಟಾರ್ ರವಿಂದ್ರನ್ ಹೇಳಿಕೊಂಡಿದ್ದಾರೆ. ಇದಕ್ಕೆ 'ಪ್ರೇಮಲೋಕ' ಹಾಗೂ 'ಶಾಂತಿ ಕ್ರಾಂತಿ' ಸಿನಿಮಾದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
80ರ ದಶಕದಲ್ಲಿ ಸಿನಿಮಾಗಳು ದೂರದರ್ಶನದಲ್ಲಿ ಪ್ರಸಾರ ಆಗಬೇಕಿದ್ದರೆ, ಸಿನಿಮಾ ತಂಡ ಹಣ ನೀಡಬೇಕಿತ್ತು. ಇಂತಿಷ್ಟು ಹಣ ಕಟ್ಟಿದ ಬಳಿಕ ದೂರದರ್ಶನ ಹಾಡುಗಳನ್ನು ಪ್ರಸಾರ ಮಾಡುತ್ತಿತ್ತು. ಆ ವೇಳೆ ಪ್ರೇಮಲೋಕ ಕ್ರೇಜ್ ಹೇಗಿತ್ತು ಅನ್ನೋದನ್ನು ಕ್ರೇಜಿಸ್ಟಾರ್ ಹೇಳಿದ್ದಾರೆ. "ಪ್ರೇಮಲೋಕ ಏನಾಗಿ ಹೋಯ್ತು ಅಂದರೆ, ಆ ಮಟ್ಟಕ್ಕೆ ಹಿಟ್ ಆಗ್ಬೇಕು ಅಂದರೆ, ಟಿವಿಯಲ್ಲಿ ದೂರದರ್ಶನದಲ್ಲಿ ಹಾಡು ಹಾಕುವುದಕ್ಕೆ ಶುರು ಮಾಡಿದ್ವಿ. ಆಗ ಟಿವಿಯಲ್ಲಿ ಹಾಡು ಹಾಕಬೇಕು ಅಂದರೆ, ನಾವು ದೂರದರ್ಶನಕ್ಕೆ ದುಡ್ಡು ಕೊಡಬೇಕಿತ್ತು. ಆಗ 22 ಸಾವಿರ ರೂಪಾಯಿ ದುಡ್ಡುಕೊಟ್ಟಿದ್ದೆವು." ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ಹಾಗೇ ಹಾಡು ದೂರದರ್ಶನದಲ್ಲಿ ಬಾರದೇ ಹೋದರೆ ಮಕ್ಕಳು ಟಿವಿಯನ್ನೇ ಒಡೆದು ಹಾಕುತ್ತಿದ್ದರಂತೆ, "ಅದೆಲ್ಲಿಂದ ಹುಚ್ಚು ಹಿಡಿತೋ ಗೊತ್ತಿಲ್ಲ. ಆ ಟೈಮ್‌ನಲ್ಲಿ ಶುಕ್ರವಾರ ಹಾಡು ಬಂದಿಲ್ಲ ಅಂದರೆ, ಚಿಕ್ಕ ಚಿಕ್ಕ ಹುಡುಗರು ಟಿವಿ ಒಡೆದು ಹಾಕಿಬಿಡೋರು. ಎಲ್ಲರೂ ಹೆದರಿಸಿ ಊಟ ಮಾಡಿಸೋದನ್ನು ನೋಡಿದ್ದೇವೆ. ಆದರೆ, ನನ್ನ ಹಾಡು ಬಂದರೆ, ಹಾಡು ತೋರಿಸಿ ಊಟ ಮಾಡಿಸೋರು." ಎಂದು ಹೇಳಿದ್ದಾರೆ.
ಕ್ರೇಜಿ ಮಾತುಗಳು 'ಪ್ರೇಮಲೋಕ'ಕ್ಕಷ್ಟೇ ಸೀಮಿತವಾಗಿರಲಿಲ್ಲ. 'ಶಾಂತಿ ಕ್ರಾಂತಿ'ಯಲ್ಲಿ ಮೂರು ಸಾವಿರ ಮಕ್ಕಳನ್ನು ಇಟ್ಕೊಂಡು ಶೂಟಿಂಗ್ ಮಾಡಿದ ಸನ್ನಿವೇಶವನ್ನು ನೆನೆದಿದ್ದಾರೆ."ಶಾಂತಿ ಕ್ರಾಂತಿ ಸಿನಿಮಾದಲ್ಲಿ ಮೂರು ಸಾವಿರ ಮಂದಿ ಮಕ್ಕಳು ಇರೋರು. ಅವರನ್ನು ಹ್ಯಾಂಡಲ್ ಮಾಡುವುದಕ್ಕೆ ಅಂತಾನೇ 500 ಮಂದಿ ಟೀಚರ್‌ಗಳು ಇರೋರು. ಏನೇ ಮಾಡಿದರೂ ಮಕ್ಕಳನ್ನು ಎರಡು ಸೆಕೆಂಡ್ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಅದೇನೋ ಗೊತ್ತಿಲ್ಲ. ಒಂದು ಸ್ಟೂಲ್ ಮೇಲೆ ನಿಂತು ರೆಡಿ ಚಿಲ್ಡ್ರನ್ ಅಂದರೆ ಸಾಕು. ಫುಲ್ ಸೈಲೆಂಟ್ ಆಗಿಬಿಡೋರು." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.
"ಜೂಹಿ ಚಾವ್ಲಾ ಸತ್ತಿರೋ ಸೀನ್ ತೆಗೆದಾಗ, ಇಡೀ ಪ್ಯಾಲೇಸ್‌ನಲ್ಲಿ ನಾವು 5 ಸಾವಿರ ಮಂದಿ ಇದ್ದೆವು. ಮೂರು ಸಾವಿರ ಮಕ್ಕಳು ನಿಂತುಕೊಂಡಿದ್ದಾರೆ. ಕ್ಯಾಮರಾ ಮೂರು ಕಡೆ ಇಟ್ಟಿದ್ದೀನಿ. ತುಂಬಾ ಸೀರಿಯಸ್ ಸಂದರ್ಭ ಅರ್ಥ ಮಾಡಿಕೊಳ್ಳಿ. ಯಾರೂ ಎಲ್ಲೂ ಅಲ್ಲಾಡಬಾರದು ಅಂತ ಹೇಳಿದ್ದೆ. ನೀವು ನಂಬುತ್ತಿರೋ ಇಲ್ವೋ ಗೊತ್ತಿಲ್ಲ. ಅವತ್ತು ಪ್ಯಾಲೇಸ್‌ನಲ್ಲಿ ಒಂದು ಕಾಗೆ ಕೂಡ ಶಬ್ದ ಮಾಡಿಲ್ಲ." ಎಂದು ತಮ್ಮ ಹಾಗೂ ಮಕ್ಕಳ ನಡುವಿನ ಒಡನಾಟದ ಬಗ್ಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.


Click it and Unblock the Notifications











