ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಸಾವನ್ನಪ್ಪಿದವರಿಗೆ ರಮ್ಯಾ, ಸಪ್ತಮಿ ಗೌಡ ವಿಷಾದ!
18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಈ ವೇಳೆ ಸಂಭ್ರಮಾಚರಣೆ ಮಾಡುವುದಕ್ಕೆ ಅಭಿಮಾನಿಗಳು ಸಹಸ್ರಾರ ಸಂಖ್ಯೆಯಲ್ಲಿ ಸೇರಿದರು. ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಅಭಿಮಾನಿಗಳೊಂದಿಗೆ ಚೊಚ್ಚಲ ಟ್ರೋಫಿಯನ್ನು ಇಟ್ಟು ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಮುಂದಾಗಿತ್ತು. ಈ ಸಂಭ್ರಮದಲ್ಲಿ ಭಾಗಿಯಾಗಲು ಜನರು ಮುಗಿಬಿದ್ದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಆರ್‌ಸಿಬಿ ಅಭಿಮಾನಿಗಳು ಅಗತ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರಿಂದ ಕಾಲ್ತಿಳಿತಕ್ಕೆ ಒಳಗಾಗಿದ್ದರು. ಹೀಗಾಗಿ ಈ ಕಾಲ್ತುಳಿತದಲ್ಲಿ ಸುಮಾರು 11 ಮಂದಿ ಸಾವನ್ನಪ್ಪಿದ್ದರು. ಈ ದುರ್ಘಟನೆ ಬಗ್ಗೆ ಮೋಹಕಾತಾರೆ ರಮ್ಯಾ ಹಾಗೂ ಸಪ್ತಮಿ ಗೌಡ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಆಭಿಮಾನಿಗಳ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಬೆಂಗಳೂರು ತಂಡ ಟ್ರೋಫಿಯನ್ನು ಗೆದ್ದ ಕ್ಷಣದಿಂದ ಫ್ಯಾನ್ಸ್ ಸಂಭ್ರಮದ ಮೂಡ್‌ನಲ್ಲಿ ಇದ್ದರು. ಈ ದುರ್ಘಟನೆ ಬಗ್ಗೆ ರಮ್ಯಾ ಹಾಗೂ ಸಪ್ತಮಿ ಗೌಡ ಕಂಬನಿ ಮಿಡಿದ್ದಾರೆ. ಮೋಹಕತಾರೆ ವಿಷಾದ ವ್ಯಕ್ತಪಡಿಸಿದರೆ, ಅತ್ತ ಸಪ್ತಮಿ ಗೌಡ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಮೋಹಕತಾರೆ ರಮ್ಯಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ದುರ್ಘಟನೆಯ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ. "ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಜೀವವನ್ನು ಕಳೆದುಕೊಂಡವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಈ ದುರಂತ ಹೃದಯವನ್ನು ಚೂರು ಮಾಡಿದೆ" ಎಂದು ಮೋಹಕತಾರೆ ರಮ್ಯಾ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸಪ್ತಮಿ ಗೌಡ ಕೂಡ ಆರ್‌ಸಿಬಿ ಅಭಿಮಾನಿಗಳನ್ನು ಕೇರ್‌ಫುಲ್ ಆಗಿ ಇರುವಂತೆ ಕೇಳಿಕೊಂಡಿದ್ದರು. ನಾನು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ನನಗೆ ಒಳಗಡೆ ಹೋಗುವುದಕ್ಕೆ ಅನುಮತಿ ಇದ್ದರೂ ನಾನು ಒಳಗೆ ಹೋಗುವುದಕ್ಕೆ ಆಗಲಿಲ್ಲ. ಪೊಲೀಸರು ನಿಜವಾಗಿಯೂ ನಿಮ್ಮನ್ನು ರಕ್ಷಣೆ ಮಾಡುವುದಕ್ಕೆ ಹರಸಾಹಸ ಮಾಡುತ್ತಿದ್ದಾರೆ. ದಯವಿಟ್ಟು ಅವರೊಂದಿಗೆ ಸಹಕರಿಸಿ" ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು.

ಹಾಗೇ "ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ನಮ್ಮ ತಂಡದೊಂದಿಗೆ ಅಲ್ಲಿಗೆ ಹೋಗಿದ್ದೆವು. ಆದರೆ, ಆದರೆ ಅದು ಸಾಧ್ಯವಾಗಲಿಲ್ಲ. ಸ್ಟೇಡಿಯಂ ಹೊರಗಡೆ ಪರಿಸ್ಥಿತಿ ಗಂಭೀರವಾಗಿತ್ತು. ಈ ಗೆಲುವನ್ನು ಸ್ಟೆಡಿಯಂನಿಂದ ದೂರ ನಿಮ್ಮದೇ ಜನರೊಂದಿಗೆ ಸಂಭ್ರಮಿಸಬಹುದು. ನಿಮ್ಮ ಮನೆಯಿಂದಲೇ ಎಂಜಾಯ್ ಮಾಡಿ. ಸೇಫ್ ಆಗಿ ಮನೆಗೆ ಹೋಗಿ" ಎಂದು ಸಪ್ತಮಿ ಗೌಡ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳಬೇಕು ಎಂದು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹೇಗಾದರೂ ಮಾಡಿ ಸ್ಟೇಡಿಯಂ ಒಳಗೆ ಹೋಗಬೇಕು ಎಂಬ ಧಾವಂತದಲ್ಲಿ ನುಗುನುಗ್ಗಲಾಗಿತ್ತು. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಒಬ್ಬ ಮಹಿಳೆ ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. ಇವರೊಂದಿಗೆ ಸುಮಾರು 40ಕ್ಕೂ ಅಧಿಕ ಮಂದಿಗೆ ಗಾಯಗೊಂಡಿದ್ದಾಗಿ ವರದಿಯಾಗಿದೆ. ಆರ್‌ಸಿಬಿ ಅಭಿಮಾನಿಗಳನ್ನು ತಡೆಯುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಗಿ ಬಂದಿತ್ತು. ಆದರೂ, ಖುಷಿಯಿಂದ ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದು ಹೋಗಿದೆ.


Click it and Unblock the Notifications











