ವಿಜಯ್ ಮಲ್ಯ RCB ಖರೀದಿಸಿದ್ದು ಬೆಂಗಳೂರು ಮೇಲಿನ ಪ್ರೀತಿಯಿಂದಲ್ಲ ಅಲ್ಲ; ಗುಟ್ಟು ಬಿಚ್ಚಿಟ್ಟ ಮಾಜಿ ಮಾಲೀಕ
ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟಿ ಪರಾರಿಯಾಗಿದ್ದು ಹೊಸ ವಿಷಯವೇನಲ್ಲ. ಒಂದು ಕಾಲದಲ್ಲಿ ಕಿಂಗ್ ಆಫ್ ಗುಡ್ ಟೈಮ್ಸ್ ಅಂತಲೇ ಕರೆಸಿಕೊಳ್ಳುತ್ತಿದ್ದ ವಿಜಯ್ ಮಲ್ಯ ತನ್ನ ಬ್ರ್ಯಾಂಡ್ ಅನ್ನು ಬಿಟ್ಟು ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆಗತಾನೇ ಸದ್ದು ಮಾಡುತ್ತಿದ್ದ ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸುವುದಕ್ಕೆ ಮುಂದಾಗಿದ್ದರು. ಅಂದು ವಿಜಯ್ ಮಲ್ಯ ಖರೀದಿಸಿದ್ದ ಆರ್‌ಸಿಬಿ ಇಂದು ಹೆಮ್ಮರವಾಗಿ ಬೆಳೆದಿದೆ.
ಸಾಲ ಮಾಡಿ ಲಂಡನ್‌ನಲ್ಲಿ ಅಡಗಿ ಕೂತಿರುವ ವಿಜಯ್ ಮಲ್ಯ ಅವರನ್ನು ಯೂಟ್ಯೂಬರ್ ರಾಜ್ ಶಮಾನಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ವಿಜಯ್ ಮಲ್ಯ ಆರ್‌ಸಿಬಿಯನ್ನು ಖರೀದಿ ಮಾಡಿದ್ದರ ಅಸಲಿ ಕಾರಣವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಕಳೆದ 18 ವರ್ಷಗಳಲ್ಲಿ ಆರ್‌ಸಿಬಿ ಕೇವಲ ಒಂದು ಫ್ರಾಂಚೈಸಿಯಾಗಿ ಉಳಿದಿಲ್ಲ. ಆರ್‌ಸಿಬಿನೇ ಖುದ್ದು ಒಂದು ಬ್ರ್ಯಾಂಡ್ ಆಗಿ ಬೆಳೆದಿದೆ. ವಿಶ್ವದಲ್ಲಿ ಯಾವುದೇ ಕ್ರಿಕೆಟ್ ಫ್ರಾಂಚೈಸಿಗೆ ಇಲ್ಲದಷ್ಟು ಅಭಿಮಾನಿ ಬಳಗ ಈ ತಂಡಕ್ಕಿದೆ. ಆದರೆ, ವಿಜಯ್ ಮಲ್ಯ ಆರ್‌ಸಿಬಿಯನ್ನು ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಖರೀದಿ ಮಾಡಿರಲಿಲ್ಲ. ಒಬ್ಬ ಉದ್ಯಮಿಯಾಗಿ ಈ ತಂಡವನ್ನು ತನ್ನ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವುದಕ್ಕೆ ಖರೀದಿಸಿದ್ದರು. ಆದರೆ, ಈಗ ಅದೇ ಒಂದು ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಈ ಸಂದರ್ಶನದಲ್ಲಿ ಆರ್‌ಸಿಬಿ ಹುಟ್ಟಿದ್ದೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಶನದ ಝಲಕ್ ಇಲ್ಲಿದೆ.
ವಿಜಯ್ ಮಲ್ಯ ಆಗಷ್ಟೇ ರಾಯಲ್ ಚಾಲೆಂಜರ್ಸ್ ವಿಸ್ಕಿ ಬ್ರ್ಯಾಂಡ್ ಅನ್ನು ಖರೀದಿಸಿದ್ದರು. ಇದನ್ನು ಬ್ರ್ಯಾಂಡಿಂಗ್ ಮಾಡುವುದಕ್ಕೆ ಹೊಸ ಮಾರ್ಕೆಂಟಿಂಗ್ ತಂತ್ರವನ್ನು ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಐಪಿಎಲ್. ಆಗ ವಿಜಯ್ ಮಲ್ಯ ಕರ್ನಾಟಕ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿದ್ದರು. "ಆಗತಾನೇ ನಾನು ಷಾ ವಾಲೆಸ್ ಬ್ರ್ಯಾಂಡ್ ಅನ್ನು ಖರೀದಿ ಮಾಡಿದ್ದೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ವಿಸ್ಕಿ ಬ್ರ್ಯಾಂಡ್ ಕೂಡ ಒಂದಾಗಿತ್ತು. ಆಗ ನಾನು ರಾಯಲ್ ಚಾಲೆಂಜರ್ಸ್ ವಿಸ್ಕಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದೆ. ಅದಕ್ಕಾಗಿ ಸಾಕಷ್ಟು ಮಾರ್ಕೆಂಟಿಂಗ್ ಹಾಗೂ ಹೊಸ ಐಡಿಯಾಗಳು ಬೇಕಿತ್ತು. ಆ ಸಮಯದಲ್ಲಿ ಐಪಿಎಲ್ ಆರಂಭ ಆಗುವುದರಲ್ಲಿ ಇತ್ತು. ಆ ವೇಳೆ ನಾನು ಬಿಸಿಸಿಐ ಕಮಿಟಿಯಲ್ಲಿ ಕರ್ನಾಟಕ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್‌ನ ಪ್ರತಿನಿಧಿಯಾಗಿದ್ದೆ. ಆ ವೇಳೆ ಲಲಿತ್ ಮೋದಿ ಕೊಟ್ಟ ಐಡಿಯಾ ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಹೈಲೈಟ್ಸ್
112 ಮಿಲಿಯನ್ ಡಾಲರ್‌ಗೆ ವಿಜಯ್ ಮಲ್ಯ RCB ಖರೀದಿ
ಹೆಚ್ಚು ಕಡಿಮೆ ಅಂದಿಗೆ 600 ಕೋಟಿ ರೂ.ಗೆ ಸಮ
ವಿರಾಟ್ ಕೊಹ್ಲಿಯನ್ನು ₹20ಕ್ಕೆ ಖರೀದಿಸಿದ್ದ ವಿಜಯ್ ಮಲ್ಯ
ಅಂಡರ್ 19 ವಿಶ್ವಕಪ್ ಆಡುತ್ತಿದ್ದ ವಿರಾಟ್ ಕೊಹ್ಲಿ
ಐಪಿಎಲ್ ಟೀಮ್‌ಗೆ ಹರಾಜು ಪ್ರಕ್ರಿಯೆ ಶುರುವಾದಾಗ ಒಂದಲ್ಲ ಎರಡು ತಂಡ ಖರೀದಿಗೆ ವಿಜಯ್ ಮಲ್ಯ ಮುಂದಾಗಿದ್ದರು. ಆದರೆ, ಬಿಸಿಸಿಐ ಅನುಮತಿ ನೀಡಲಿಲ್ಲ ಎಂದು ಹೇಳಿದ್ದಾರೆ. "ಒಂದು ದಿನ ಬಿಸಿಸಿಐನವರು ನನಗೆ ಕರೆ ಮಾಡಿದರು, ಟೀಮ್‌ಗಳನ್ನು ಹರಾಜು ಹಾಕುತ್ತೇವೆ ಎಂದರು. ಆಗ ನನಗೆ ಅನಿಸಿತು. ಈ ದೇಶದಲ್ಲಿ ಕ್ರಿಕೆಟ್ ಅನ್ನೋದು ಒಂದು ಧರ್ಮವೇ ಆಗಿದೆ. ನನ್ನ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುವುದಕ್ಕೆ ಇದಕ್ಕಿಂತ ಒಳ್ಳೆಯ ವೇದಿಕೆ ಇನ್ಯಾವುದಿದೆ ಅಂತ ಅನಿಸಿತ್ತು. ನನಗೆ ಕಿಂಗ್‌ಫಿಶರ್ ಬ್ರ್ಯಾಂಡ್‌ಗೆ ಒಂದು, ರಾಯಲ್ ಚಾಲೆಂಜರ್ಸ್ ಬ್ರ್ಯಾಂಡ್‌ಗೆ ಒಂದು ಟೀಮ್ ಬೇಕಿತ್ತು. ಆಗ ಬಿಸಿಸಿಐನವರು ಎರಡು ತಂಡಗಳನ್ನು ಖರೀದಿಸುವುದಕ್ಕೆ ಅವಕಾಶವಿಲ್ಲ ಎಂದರು. ಬಿಡ್ಡಿಂಗ್ ಸಮಯ ಬಂತು. ಆ ವೇಳೆ ನಾನು ನನ್ನ ಬ್ರ್ಯಾಂಡ್‌ಗಳನ್ನು ಐಪಿಎಲ್ ಟೀಮ್ ಪ್ರಮೋಟ್ ಮಾಡುವುದಕ್ಕೆ ಉತ್ಸುಕನಾಗಿದ್ದೆ." ಎಂದಿದ್ದಾರೆ.
ವಿಜಯ್ ಮಲ್ಯ ಆರ್‌ಸಿಬಿಯನ್ನು ಬೆಂಗಳೂರು ಮೇಲಿನ ಪ್ರೀತಿಗೋ, ಕ್ರಿಕೆಟ್ ಮೇಲಿನ ಕ್ರೇಜ್‌ಗಾಗಿಯೋ ಖರೀದಿ ಮಾಡಿರಲಿಲ್ಲ. ಅವರಿಗೆ ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡುವುದಕ್ಕೆ ಹೆಚ್ಚು ಕಡಿಮೆ 600 ಕೋಟಿ ರೂಪಾಯಿ ಕೊಟ್ಟು ಆರ್‌ಸಿಬಿ ತಂಡವನ್ನು ಖರೀದಿಸಿದ್ದರು. "ನಾನು ಮೂರು ಫ್ರಾಂಚೈಸಿಗೆ ಬಿಡ್ ಮಾಡಿದ್ದೆ. ನಾನು ಮುಂಬೈ ಅನ್ನು ಅತೀ ಕಡಿಮೆ ಅಂತರದಿಂದ ಕಳೆದುಕೊಂಡೆ. ಅಂಬಾನಿ ಆ ತಂಡವನ್ನು ಖರೀದಿಸಿದ್ದು ನನಗೆ ಅಚ್ಚರಿವೇನು ಅನಿಸಲಿಲ್ಲ. ನಾನು ಮೂರಕ್ಕೆ ಬಿಡ್ ಮಾಡಿದ್ದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ನಾನು ಬೆಂಗಳೂರನ್ನು ಆಯ್ಕೆ ಮಾಡಿಕೊಂಡೆ. ಅದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಇಟ್ಟಿದ್ದೆ. ಹಾಗೆ ಆರ್‌ಸಿಬಿ ಹುಟ್ಟಿಕೊಳ್ತು" ಎಂದು ವಿಜಯ್ ಮಲ್ಯ ಸಂದರ್ಶನದಲ್ಲಿ ಹೇಳಿದ್ದಾರೆ.
"ಮಾಧ್ಯಮಗಳಲ್ಲಿ ವಿಜಯ್ ಮಲ್ಯಗೆ ಕ್ರಿಕೆಟ್ ಮೇಲೆ ಪ್ರೀತಿ. ಅದಕ್ಕೆ ಖರೀದಿ ಮಾಡಿದ್ದಾರೆ ಅಂತೆಲ್ಲ ಬಂತು. ಆದರೆ, ರಾಯಲ್ ಚಾಲೆಂಜರ್ಸ್ ವಿಸ್ಕಿಯನ್ನು ಪ್ರಮೋಟ್ ಮಾಡುವುದಕ್ಕೆ ಅಂತಾನೇ ಆರ್‌ಸಿಬಿಯನ್ನು ಖರೀದಿ ಮಾಡಿದ್ದೆ. ಈ ತಂಡವನ್ನು ಖರೀದಿಸಿದ ಬಳಿಕ ವಿಸ್ಕಿ ಬ್ರ್ಯಾಂಡ್ ವಾಲ್ಯೂ ಭಾರಿ ಪ್ರಮಾಣದಲ್ಲಿ ಏರಿಕೆ ಆಯ್ತು. ಇಂದು ಆರ್‌ಸಿಬಿಗೆ ಬಿಡ್ಡಿಂಗ್ ಮಾಡಿದರೆ, ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕೆಎಲ್ ರಾಹುಲ್ ಖರೀದಿಸುತ್ತೇನೆ" ಎಂದು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











