'ಪ್ಯಾನ್ ಇಂಡಿಯಾ' ಮುಂದೆ 'ರಿಮೇಕ್ ಸಿನಿಮಾ'ಗಳಿಗೀಗ ಬೆಲೆ ಇಲ್ಲ- ಕಿಚ್ಚ ಸುದೀಪ್!
'ವಿಕ್ರಾಂತ್ ರೋಣ' ಸಿನಿಮಾ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. 'ಕೆಜಿಎಫ್ 2' ಹಾಗೂ '777 ಚಾರ್ಲಿ' ಬಳಿಕ ಕನ್ನಡದ ಮೂರನೇ ಪ್ಯಾನ್ ಇಂಡಿಯಾ ಬಿಡುಗಡೆ ಸಜ್ಜಾಗಿದೆ. ಕಳೆದೊಂದು ತಿಂಗಳಿನಿಂದ ಈ ಸಿನಿಮಾ ತಂಡ ಬಿಡದಂತೆ ಪ್ರಚಾರ ಮಾಡುತ್ತಿದೆ.
ಕಿಚ್ಚ ಸುದೀಪ್ ಹಿಂದೆಂದೂ ಇಂತಹ ಸಿನಿಮಾ ನಟಿಸಿರಲಿಲ್ಲ. ಈ ಕಾರಣಕ್ಕೆ ಕಿಚ್ಚನ ಅಭಿಮಾನಿಗಳಷ್ಟೇ ಅಲ್ಲ. ಇಡೀ ದೇಶವೇ ಕನ್ನಡದ ಮೂರನೇ ಪ್ಯಾನ್ ಇಂಡಿಯಾ ಸಿನಿಮಾವನ್ನು ಎದುರು ನೋಡುತ್ತಿದ್ದು, ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಗ್ಯಾಪ್‌ನಲ್ಲಿ ಸುದೀಪ್ ಇಡೀ ದೇಶವನ್ನೇ ಸುತ್ತಾಡುತ್ತಿದ್ದಾರೆ.
ಸದ್ಯ ಸುದೀಪ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಮೇಕ್ ಸಿನಿಮಾ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಕಿಚ್ಚ ಸುದೀಪ್ ಮಾತಾಡಿದ್ದಾರೆ. ಅಷ್ಟಕ್ಕೂ ಕಿಚ್ಚ ರಿಮೇಕ್ ಸಿನಿಮಾಗಳ ಬಗ್ಗೆ ಏನು ಹೇಳಿದ್ದಾರೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಕಿಚ್ಚ ಸುದೀಪ್ ಫುಲ್ ಬ್ಯುಸಿ
ಸ್ಯಾಂಡಲ್‌ವುಡ್ ಬ್ಯಾಕ್ ಟು ಬ್ಯಾಕ್ ಎರಡು ಸಕ್ಸಸ್‌ಫುಲ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನೀಡಿದೆ. ಈ ಕಾರಣಕ್ಕೆ ಮೂರನೇ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಗ್ಗೆನೂ ಎಲ್ಲರ ಕುತೂಹಲ ನೆಟ್ಟಿದೆ. 'ವಿಕ್ರಾಂತ್ ರೋಣ' ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ, ಇಂಗ್ಲಿಷ್ ಭಾಷೆಯಲ್ಲೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಕುತೂಹಲ ಕೆರಳಿಸಿದೆ. ಈ ಮಧ್ಯೆ ಸುದೀಪ್ ರಿಮೇಕ್ ಸಿನಿಮಾಗಳು ಅವನತಿಯತ್ತ ಸಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಲೆ ಕಳೆದುಕೊಳ್ಳುತ್ತಿವೆ ರಿಮೇಕ್ ಸಿನಿಮಾ
ಒಂದು ಕಾಲದಲ್ಲಿ ರಿಮೇಕ್ ಸಿನಿಮಾಗಳ ಸಂಖ್ಯೆ ಹೆಚ್ಚಿತ್ತು. ಪ್ಯಾನ್ ಇಂಡಿಯಾ ಸಿನಿಮಾಗೆ ಎಲ್ಲಾ ಕಡೆ ಸಕ್ಸಸ್ ಸಿಗುತ್ತಿರುವ ಬೆನ್ನಲ್ಲೇ ರಿಮೇಕ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಸಂಖ್ಯೆ ಕಡಿಮೆಯಾಗಿದೆ. ಪ್ಯಾನ್ ಇಂಡಿಯಾಗಳ ಟ್ರೆಂಡ್ ಅನ್ನು ನೋಡುತ್ತಿದ್ದರೆ, ರಿಮೇಕ್ ಸಿನಿಮಾಗಳು ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. " ಎಲ್ಲಾ ನಿಂತಿದೆ ಎಂದು ನನಗೆ ಅನಿಸುತ್ತಿದೆ. ತುಂಬಾ ರಿಮೇಕ್ ಸಿನಿಮಾಗಳು ಆಗುತ್ತಿಲ್ಲ. ಒಂದು ಸಿನಿಮಾ ಒಂದೇ ಭಾಷೆಯಲ್ಲಿ ಬರುತ್ತಿದ್ದರಿಂದ ಆ ಸಿನಿಮಾ ಎಲ್ಲಾ ಭಾಷೆಗೂ ಹೋಗುತ್ತಿತ್ತು. 6-7 ವರ್ಷಗಳ ಹಿಂದೆ ರಿಮೇಕ್ ಸಿನಿಮಾಗಳಿಗೆ ಬೆಲೆ ಇತ್ತು. ಈಗಲೂ ರಿಮೇಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ, ರಿಮೇಕ್ ಸಿನಿಮಾಗಳು ಮಾರುಕಟ್ಟೆಯನ್ನು ಕಳೆದುಕೊಂಡಿವೆ ಎಂದು ಅನಿಸುತ್ತಿದೆ." ಎಂದು ಸುದೀಪ್ ಹೇಳಿದ್ದಾರೆ.

ಕೇವಲ ಆಗುತ್ತಿದೆಯಷ್ಟೇ
ಈಗ ಕೇವಲ ಬರೀ ಸಿನಿಮಾ ಆಗುತ್ತಿದೆಯಷ್ಟೇ. ಒಂದ್ವೇಳೆ ಉತ್ತಮ ಕಂಟೆಂಟ್ ಇದ್ದರೆ ಮತ್ತು ಉತ್ತಮ ಮಾರುಕಟ್ಟೆ ಇದ್ದರೆ ಸಿನಿಮಾ ಟ್ರಾವೆಲ್ ಆಗುತ್ತೆ. ಇದು ಈಗ ಕೇವಲ ಕಂಟೆಂಟ್ ಅಷ್ಟೇ ಅಲ್ಲ. ಆದರೆ ಕಂಟೆಂಟ್ ಮತ್ತು ಪ್ರಚಾರಗಳು ಕೈಜೋಡಿಸಬೇಕಾಗಿದೆ." ಎಂದು ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಮೂಲಕ ರಿಮೇಕ್ ಸಿನಿಮಾಗಳ ಕಾಲ ಮುಗಿಯುತ್ತಿವೆ ಎಂದು ಕಿಚ್ಚ ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

4 ವರ್ಷಗಳಿಂದ ಮಾರ್ಕೇಟಿಂಗ್
" ನಾನು ಹಿಂದೆಂದೂ ಇಂತಹ ಸಿನಿಮಾ ಮಾಡಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿಲ್ಲ. ಈ ಕಾಲದ ಸಿನಿಮಾ, ಈ ತರಹದ ಪಾತ್ರ ನಾನು ಮಾಡಿಲ್ಲ. ನಾವು ಬಯಸಿದಂತೆಯೇ ಸಿನಿಮಾ ಮಾಡಿದ್ದು, ಆ ಸಿನಿಮಾವನ್ನು ನೋಡಿ ರೊಮಾಂಚನಗೊಂಡಿದ್ದೇವೆ." ಎಂದು ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಮೂಲಕಗಳ ಪ್ರಕಾರ, 'ವಿಕ್ರಾಂತ್ ರೋಣ' ಸಿನಿಮಾವನ್ನು ಕಳೆದ ನಾಲ್ಕು ವರ್ಷಗಳಿಂದ ಮಾರ್ಕೆಟ್ ಮಾಡಲಾಗುತ್ತಿದ್ದು, ಕೊನೆಗೂ ಈ ಸಿನಿಮಾ ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











