ದರ್ಶನ್‌ಗೆ ಮತ್ತೆ ಸಂಕಷ್ಟ; ದಾಸನ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ದರ್ಶನ್ ಜೈಲು ಸೇರಿದ್ದರು. ಕೆಲವು ದಿನಗಳು ಜೈಲು ವಾಸದ ಬಳಿಕ ಹೈ ಕೋರ್ಟ್‌ನಿಂದ ದರ್ಶನ್‌ಗೆ ರೆಗ್ಯೂಲರ್ ಜಾಮೀನು ಸಿಕ್ಕಿದೆ. ಆದರೆ, ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ಅರ್ಜಿ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ದರ್ಶನ್ ಇತ್ತೀಚೆಗೆ ರೆಗ್ಯೂಲರ್ ಜಾಮೀನು ಸಿಕ್ಕಿದ ಖುಷಿಯಲ್ಲಿ ಇದ್ದರು. ಡೆವಿಲ್ ಸಿನಿಮಾದ ಡಬ್ಬಿಂಗ್‌ನಲ್ಲಿಯೂ ಭಾಗಿಯಾಗಿದ್ದರು. ಆದರೆ, ಬೆಂಗಳೂರಿನ ಪೊಲೀಸರು ದರ್ಶನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

ಹಾಗಂತ ಕೇವಲ ದರ್ಶನ್ ಅಷ್ಟೇ ಅಲ್ಲ. ಇವರೊಂದಿಗೆ 7 ಮಂದಿ ಆರೋಪಿಗಳ ಜಾಮೀನು ರದ್ದು ಮಾಡುವಂತೆಯೂ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ನಿಟ್ಟುಸಿರು ಬಿಟ್ಟಿದ ದರ್ಶನ್ ಹಾಗೂ 7 ಮಂದಿ ಆರೋಪಿಗಳಿಗೆ ಮತ್ತೆ ನಡುಕ ಶುರುವಾಗಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಇನ್ನೊಂದು ವಾರದೊಳಗೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಜಾಮೀನಿನ ಮೇಲೆ ಜೈಲಿನಿಂದ ದರ್ಶನ್ ಬರುತ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆ ಕೇಸ್ ಮುಗಿದು ಹೋಯ್ತು ಎಂದೇ ಭಾವಿಸಲಾಗಿತ್ತು. ಆದರೆ, ಬೆಂಗಳೂರು ಪೊಲೀಸರು ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಮಧ್ಯಂತರ ಜಾಮೀನು ಸಿಕ್ಕಾಗಲೂ ಇದೇ ರೀತಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈಗ ರೆಗ್ಯೂಲರ್ ಬೇಲ್ ಸಿಕ್ಕದಕ್ಕೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಲಾಗಿದೆ.
ಇತ್ತ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ ವೈದ್ಯರು ನೀಡಿದ ಮಾಹಿತಿ ಪ್ರಕಾರ, ದರ್ಶನ್ ಬೆನ್ನು ನೋವು ಕಡಿಮೆ ಆಗದೇ ಹೋದರೆ, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತೆ ಎಂದಿದ್ದರು. ದರ್ಶನ್ ಕೂಡ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದೂ ವರದಿಯಾಗಿತ್ತು.

ಸಂಕ್ರಾಂತಿ ಬಳಿಕ ದರ್ಶನ್ ಶಸ್ತ್ರ ಚಿಕಿತ್ಸೆ ಮುಂದಾಗುತ್ತಾರೆ ಎಂದೂ ಹೇಳಲಾಗಿತ್ತು. ಒಂದು ಸರ್ಜರಿ ಆದರೆ, ಒಂದರಿಂದ ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಆದಾದ ಬಳಿಕ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಬಹುದು ಎಂದು ವೈದ್ಯರು ಹೇಳಿದ್ದರು. ಹೀಗಾಗಿ 'ಡೆವಿಲ್' ಸಿನಿಮಾದ ಶೂಟಿಂಗ್ ತಡವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೂ ಸುಪ್ರೀಂ ಕೋರ್ಟ್‌ನಲ್ಲಿ ಹೇಗೆಲ್ಲ ವಿಚಾರಣೆ ಹೇಗೆ ನಡೆಯುತ್ತೆ ಅನ್ನೋದರ ಮೇಲೆ ದರ್ಶನ್ ಜಾಮೀನು ರದ್ದಾಗುತ್ತಾ? ಇಲ್ವಾ ಅನ್ನೋದು ಗೊತ್ತಾಗಲಿದೆ.
'ಡೆವಿಲ್' ಶೂಟಿಂಗ್ ಆರಂಭ ಆದಲ್ಲಿಂದ ದರ್ಶನ್ ಯಾಕೋ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಇತ್ತ ನಿರ್ಮಾಪಕ ಕಮ್ ನಿರ್ದೇಶಕ ಮಿಲನ ಪ್ರಕಾಶ್ ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ದರ್ಶನ್ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಸದ್ಯ 'ಡೆವಿಲ್' ಸಿನಿಮಾ ಬಗ್ಗೆ ದರ್ಶನ್ ಆಪ್ತರಾಗಲಿ, ಮಿಲನ ಪ್ರಕಾಶ್ ಆಗಲಿ ಇನ್ನೂ ಮಾಹಿತಿಯನ್ನು ಹಂಚಿಕೊಂಡಿಲ್ಲ.


Click it and Unblock the Notifications











