ದರ್ಶನ್ ಪರ ವಾದ ಮಾಡೋಕೆ ಬರಲಿಲ್ಲ ಕಪಿಲ್ ಸಿಬಲ್; ಬಂದವರು ಯಾರು? ವಿಚಾರಣೆಗೆ ಎಷ್ಟು ದಿನ ಕಾಲಾವಕಾಶ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಜಾಮೀನು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿತ್ತು. ಇದರ ಅಂತಿಮ ವಿಚಾರಣೆ ಇಂದು (ಜುಲೈ 22) ನಡೆಯಬೇಕಿತ್ತು. ದರ್ಶನ್ ಪರ ವಾದ ಮಾಡುತ್ತಿದ್ದ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕೋರ್ಟ್‌ಗೆ ಗೈರಾಗಿದ್ದಾರೆ.
ಇಂದು (ಜುಲೈ 22) ದರ್ಶನ್ ಜಾಮೀನು ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಕಪಿಲ್ ಸಿಬಲ್ ಗೈರು ಹಾಜರಾಗಿದ್ದರಿಂದ ದರ್ಶನ್ ಪರ ಸಿದ್ಧಾರ್ಥ್ ದವೆ ದರ್ಶನ್ ಪರವಾಗಿ ವಾದವನ್ನು ಮಂಡಿಸಲಿದ್ದಾರೆ. ಈ ಬೆಳವಣಿಗೆ ದರ್ಶನ್‌ಗೆ ಸಂಕಷ್ಟ ತಂದೊಡ್ಡಬಹುದು ಎಂದು ಲೆಕ್ಕ ಹಾಕಲಾಗಿತ್ತಿದೆ. ಹೀಗಾಗಿ ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ನಲ್ಲಿ ಇರುವ ದರ್ಶನ್‌ಗೆ ಟೆನ್ಷನ್ ಶುರುವಾಗಿದೆ.

ಇನ್ನು ಸುಪ್ರೀಂ ಕೋರ್ಟ್ ಮುಂದೆ ದರ್ಶನ್ ಪರ ವಾದ ಮಾಡುವುದಕ್ಕೆ ಹಾಜರಾಗಿದ್ದ ದರ್ಶನ್ ಪರ ವಕೀಲ ಸಿದ್ಧಾರ್ಥ್ ದವೆ ನ್ಯಾಯಾಧೀಶರ ಮುಂದೆ ಕಾಲಾವಕಾಶ ಕೋರಿದ್ದಾರೆ. ಕೇಸ್ ಅನ್ನು ಅಧ್ಯಯನ ಮಾಡುವುದಕ್ಕೆ ಕಾಲಾವಕಾಶ ಬೇಕಿದೆ ಎಂದು ಮನವಿ ಮಾಡಿದ್ದರು. ಹೀಗಾಗಿ ಕೇವಲ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ. ಹಾಗೇ ಲಿಖಿತ ರೂಪದಲ್ಲಿ ವಾದ ಮಂಡಿಸುವುದಕ್ಕೆ ಸೂಚನೆ ನೀಡಿ ಗುರುವಾರಕ್ಕೆ ವಾದವನ್ನು ಮುಂದೂಡಲಾಗಿದೆ.
ಕಳೆದ ವಾರ ದರ್ಶನ್‌ಗೆ ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಧಾನವನ್ನು ಹೊರ ಹಾಕಿತ್ತು. ದರ್ಶನ್ ಪರ ವಾದ ಮಂಡಿಸುವುದಕ್ಕೆ ಬಂದಿದ್ದ ಕಪಿಲ್ ಸಿಬಲ್‌ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು "ಜಾಮೀನನ್ನು ಯಾಕೆ ರದ್ದು ಮಾಡಬಾರದು?" ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ ಹೈಕೋರ್ಟ್ ಜಾಮೀನು ನೀಡದ್ದಕ್ಕೆ ಪರೋಕ್ಷವಾಗಿ ಅಸಮಧಾನ ಹೊರ ಹಾಕಿದ್ದರು. ಹೀಗಾಗಿ ದರ್ಶನ್‌ಗೆ ಜಾಮೀನು ರದ್ದಾಗುವ ಭೀತಿ ಎದುರಾಗಿದೆ.
ಈ ಮಧ್ಯೆ ದರ್ಶನ್ ಪರ ವಾದ ಮಂಡಿಸುತ್ತಿದ್ದ ಕಪಿಲ್ ಸಿಬಲ್ ಗೈರು ಹಾಜರಾಗಿದ್ದು ನಟನಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅದರಲ್ಲೂ ರಾಜ್ಯ ಸರ್ಕಾರ ಸಲ್ಲಿಸಿದ ದಾಖಲೆಯನ್ನು ಪರಿಶೀಲನೆ ಮಾಡಿದ್ದು, ಜಾಮೀನು ನೀಡುವಾಗ ಹೈಕೋರ್ಟ್ ವಿವೇಚನೆಯನ್ನು ಬಳಸಿಲ್ಲ ಎಂದು ನ್ಯಾಯಮೂರ್ತಿ ಪಾರ್ದಿವಾಲ ಅಭಿಪ್ರಾಯ ಪಟ್ಟಿದ್ದರು. ಹಾಗೇ ರಾಜ್ಯ ಸರ್ಕಾರದ ಪರ ವಕೀಲರು ಮಾಧ್ಯಮಗಳಿಗೆ ಗೆಲುವಿನ ಸೂಚನೆಯನ್ನು ನೀಡಿದ್ದರು. ಹೀಗಾಗಿ ಇಂದು ದರ್ಶನ್ ಜಾಮೀನು ರದ್ದಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡಲಾಗಿತ್ತು.

ಸದ್ಯ ದರ್ಶನ್ ಈಗ 'ಡೆವಿಲ್' ಸಿನಿಮಾದ ಶೂಟಿಂಗ್‌ನಲ್ಲಿ ಇದ್ದಾರೆ. ಕಳೆದ ಕೆಲವು ದಿನಗಳಿಂದ ಸಿನಿಮಾದ ಹಾಡುಗಳು ಹಾಗೂ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಹೀಗಾಗಿ ಗುರುವಾರ (ಜುಲೈ 24) ದರ್ಶನ್ ಜಾಮೀನು ರದ್ದಾದರೆ, 'ಡೆವಿಲ್' ಸಿನಿಮಾದ ಶೂಟಿಂಗ್ ಅನ್ನು ಮೊಟಕುಗೊಳಿಸಬೇಕಾಗುತ್ತಾ? ಫ್ಯಾಮಿಲಿ ಜೊತೆ ಇರುವ ದರ್ಶನ್ ಎಲ್ಲವನ್ನು ಬಿಟ್ಟು ಹಿಂತಿರುಗಬೇಕಾಗುತ್ತಾ? ಮತ್ತೆ 'ಡೆವಿಲ್' ಸಿನಿಮಾಗೆ ಸಂಕಷ್ಟ ಎದುರಾಗುತ್ತಾ? ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ದರ್ಶನ್ ಇನ್ನೂ ಕೆಲವು ದಿನಗಳ ಕಾಲ ಥೈಲ್ಯಾಂಡ್‌ನಲ್ಲಿ ಇರಬೇಕಾಗುತ್ತೆ. ಶೂಟಿಂಗ್ ಕೆಲಸ ಇನ್ನೂ ಬಾಕಿ ಉಳಿದಿದ್ದರಿಂದ ಕಮ್ಮಿ ಅಂದರೂ ನಾಲ್ಕೈದು ದಿನ ಅಲ್ಲೇ ಇರಬೇಕಾಗಿದೆ. ಅಲ್ಲದೆ ಕುಟುಂಬದ ಜೊತೆ ಹೋಗಿದ್ದರಿಂದ ಇನ್ನೊಂದು ದಿನ ಅಲ್ಲೇ ಉಳಿದುಕೊಂಡು ಬಳಿಕ ಹಿಂತಿರುಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಗುರುವಾರ (ಜುಲೈ 24)ರಂದು ದರ್ಶನ್‌ಗೆ ಪರ ವಕೀಲರು ಬಚಾವ್ ಮಾಡುತ್ತಾರಾ? ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications











