ರೇಣುಕಾಸ್ವಾಮಿ ಪ್ರಕರಣ; ವಾರಕ್ಕೆ 4 ದಿನ ವಿಚಾರಣೆ.. ನಟ ದರ್ಶನ್, ಪವಿತ್ರಾ ಗೌಡಗೆ ಢವ ಢವ
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ. ಕೆಲವು ತಿಂಗಳುಗಳಿಂದ ಇಬ್ಬರೂ ಜಾಮೀನು ಪಡೆದು ಜೈಲಿನಿಂದ ಹೊರ ಬರುವುದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ, ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಇತ್ತೀಚೆಗೆ 'ಟ್ರಯಲ್' ತಡವಾಗುತ್ತಿದೆ ಎಂದು ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಜಾಮೀನು ಸಿಗದೇ ಹೋದರೂ, ಒಂದು ವರ್ಷದ ಒಳಗಾಗಿ ವಿಚಾರಣೆಯನ್ನು ಮುಗಿಸಬೇಕು ಎಂದು ಸೂಚನೆಯನ್ನು ನೀಡಿತ್ತು. ಈ ಬೆನ್ನಲ್ಲೇ ಇಂದಿನಿಂದ (ಜೂನ್ 15) ವಿಚಾರಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ನ್ಯಾಯಾಲಯದಲ್ಲಿ ಅಧಿಕೃತ ವಿಚಾರಣೆ ಆರಂಭವಾಗಲಿದೆ. ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಆಧರಿಸಿ ಸಾಕ್ಷಿಗಳ ವಿಚಾರಣೆಯನ್ನು ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 59ನೇ ಸಿಸಿಎಚ್ ನ್ಯಾಯಾಲಯವು ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸುವುದಕ್ಕೆ ಕಟ್ಟುಕಟ್ಟಿನ ಕ್ರಮಕೊಂಡಿದೆ.

ರೇಣುಕಾಸ್ವಾಮಿ ಪ್ರಕರಣವನ್ನು ಇನ್ಮುಂದೆ ವಾರದಲ್ಲಿ ನಾಲ್ಕು ದಿನಗಳ ಕಾಲ ಸತತವಾಗಿ ಟ್ರಯಲ್ ನಡೆಸಲು 59ನೇ ಸಿಸಿಎಚ್ ನ್ಯಾಯಾಲಯ ಆದೇಶ ನೀಡಿದೆ. ಹಾಗೇ ಎಷ್ಟು ದಿನಗಳಲ್ಲಿ ವಿಚಾರಣೆಯನ್ನು ಮುಗಿಸಬೇಕು? ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಪ್ರತಿ ವಿಚಾರಣೆ ವೇಳೆನೂ ನ್ಯಾಯಾಲಯಕ್ಕೆ ಕರೆದುಕೊಂಡು ಬರಬೇಕೆ? ಈ ಎಲ್ಲಾ ವಿಷಯಗಳ ಬಗ್ಗೆನೂ ಚರ್ಚೆಯಾಗಿದೆ.
ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಆರಂಭ
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ 'ಟಯಲ್'ಗೆ ಚಾಲನೆ ಸಿಕ್ಕಿದೆ. ತನಿಖೆ ಮುಗಿದು ದೋಷಾರೋಪ ಪಟ್ಟಿ ಸಲ್ಲಿಯಾಗಿದ್ದು, ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಿದೆ. ಬಳಿಕ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ನ್ಯಾಯಾಧೀಶೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರ ಸಮ್ಮುಖದಲ್ಲಿ ವಿಚಾರಣೆ ಆರಂಭ ಆಗಲಿದೆ.
ಪ್ರಮುಖ ಸಾಕ್ಷಿಗಳ ವಿಚಾರಣೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಆಗಬೇಕಿದೆ. ಹೀಗಾಗಿ ಮೊದಲನೇ ಸಾಕ್ಷಿಯಿಂದ ಹಿಡಿದು ಈ ಎಲ್ಲಾ ಸಾಕ್ಷಿಗಳನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಒಳಪಡಲಾಗುತ್ತದೆ. ಇದೇ ವೇಳೆ ಹೈ-ಪ್ರೊಫೈಲ್ ಕೇಸ್‌ನ ಪ್ರಮುಖ ಆರೋಪಿಗಳಾಗಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ವಿಚಾರಣೆಗೆ ನ್ಯಾಯಾಲಯಕ್ಕೆ ಕರೆಸಿಕೊಳ್ಳಬೇಕೇ? ಇಲ್ಲವೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕರೆಸಿಕೊಳ್ಳಬೇಕೆ ಅನ್ನುವುದನ್ನು ಕೋರ್ಟ್ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ.

ತ್ವರಿತ ವಿಚಾರಣೆಗೆ ನ್ಯಾಯಾಲಯ ಸಜ್ಜು
ದರ್ಶನ್ ಪರ ವಕೀಲರು ಟ್ರಯಲ್ ತಡವಾಗುತ್ತಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ಒಂದು ವರ್ಷದ ಒಳಗೆ ವಿಚಾರಣೆಯನ್ನು ಮುಗಿಸುವಂತೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಾರಕ್ಕೆ ನಾಲ್ಕು ದಿನಗಳ ಕಾಲ ಸತತವಾಗಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಲು ಸಮಯವನ್ನು ನಿಗದಿ ಪಡಿಸಿದೆ. ಒಂದು ವರ್ಷಕ್ಕೆ 60 ಸಾಕ್ಷಿಗಳ ವಿಚಾರಣೆ ನಡೆಸಬೇಕಿರುವುದರಿಂದ ಎಸ್‌ಪಿಪಿ ಪ್ರಸನ್ನ ಕುಮಾರ್ ಯಾವುದೇ ಕಾರಣಕ್ಕೂ ಸಾಕ್ಷಿಗಳ ವಿಚಾರಣೆಯನ್ನು ಮುಂದೂಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಅಗತ್ಯ ಬಿದ್ದರೆ 5 ದಿನ ವಿಚಾರಣೆ
ಈಗಾಗಲೇ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ 59ನೇ ಸಿಸಿಎಚ್ ಕೋರ್ಟ್‌ಗೆ ವರ್ಗಾವಣೆಯಾಗಿದೆ. ಈ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ತ್ವರಿತಗತಿಯಲ್ಲಿ ವಿಚಾರಣೆ ಆಗಬೇಕಿದ್ದರಿಂದ ಪ್ರತಿ ದಿನವೂ ವಿಚಾರಣೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ವಾದ-ವಿವಾದಗಳನ್ನು ಆಲಿಸಿದ ಬಳಿಕ ವಾರಕ್ಕೆ ನಾಲ್ಕು ದಿನ ವಿಚಾರಣೆ ನಡೆಸುವುದಕ್ಕೆ ಅನುಮತಿ ಸಿಕ್ಕಿದ್ದು, ಅಗತ್ಯ ಬಿದ್ದರೆ, 5ನೇ ದಿನವೂ ವಿಚಾರಣೆಗೆ ಸಿದ್ಧರಿರಬೇಕೆಂದು ಸೂಚನೆಯನ್ನು ನೀಡಲಾಗಿದೆ.


Click it and Unblock the Notifications