ರೇಣುಕಾಸ್ವಾಮಿ ಅಪ್ಪ-ಅಮ್ಮನ ವಿಚಾರಣೆ.. ಈ ಕೇಸ್‌ನಲ್ಲಿ ದರ್ಶನ್‌ಗೆ ಏನೆಲ್ಲ ಅಂಶಗಳು ಕಂಟಕವಾಗಬಹುದು?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ರೇಣುಕಾಸ್ವಾಮಿ ಪ್ರಕರಣ ದೊಡ್ಡ ಚಾಲೆಂಜ್ ಆಗಿದೆ. ಈ ಕೇಸ್‌ನಿಂದ ಯಾವಾಗ ಮುಕ್ತಿ ಸಿಗುತ್ತೋ ಅಂತ ಎದುರು ನೋಡಿದ್ದರೆ, ಇನ್ನೊಂದು ಕಡೆ ಮತ್ತೇನು ಸಂಕಷ್ಟ ಎದುರಾಗುತ್ತೋ ಅನ್ನೋ ಆತಂಕ ಅವರ ಆಪ್ತರಲ್ಲಿ ಇದೆ. ಈ ಕೇಸ್‌ಗೆ ಸಂಬಂಧ ಪಟ್ಟಂತೆ, ಈಗಾಗಲೇ ಸಾಕಷ್ಟು ಘಟನೆಗಳು ನಡೆದಿವೆ. ಈ ಕೇಸ್ ವಿಚಾರವಾಗಿ ದರ್ಶನ್ ಜಾಮೀನು ಪಡೆದು ಹೊರಬಂದು, ಮತ್ತೆ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಶುರುವಾಗಿದೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ಆರಂಭ ಆಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ರೇಣುಕಾಸ್ವಾಮಿಯವರ ತಂದೆ-ತಾಯಿಯನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಚಾರ್ಜ್‌ಶೀಟ್‌ನಲ್ಲಿರುವ 7 ಮತ್ತು 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರ ವಿಚಾರಣೆ ನಡೆಸಲಾಗಿದೆ.

ಹೀಗಾಗಿ ಇಂದು (ಡಿಸೆಂಬರ್ 17) ರೇಣುಕಾಸ್ವಾಮಿ ತಂದೆ-ತಾಯಿಯ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಪವಿತ್ರಾ ಗೌಡ ಪರ ವಕೀಲರಾದ ಬಾಲನ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇತ್ತ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಟ್ರಯಲ್‌ಗೂ ಮುನ್ನ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಾಕ್ಷಿಗಳ ವಿಚಾರಣೆ ಆರಂಭ ಆಗಿದ್ದರಿಂದ ದರ್ಶನ್‌ಗೆ ಏನೆಲ್ಲ ಸಂಕಷ್ಟಗಳು ಎದುರಾಗಬಹುದು? ಎಂಬ ಲೆಕ್ಕಾಚಾರಗಳು ಶುರುವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್ ಹಾಗೂ ಪವಿತ್ರಾ ಗೌಡ ಪರ ಮತ್ತೊಬ್ಬರ ಹಿರಿಯ ವಕೀಲರಾದ ಬಾಲನ್ ಸಾಕ್ಷಿಗಳನ್ನು ಪ್ರಶ್ನೆ ಮಾಡಲಿದ್ದಾರೆ. ಈ ಹಂತದಲ್ಲಿ ಸಾಕಷ್ಟು ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಒಂದು ವೇಳೆ ಸಾಕ್ಷಿ ಕೊಟ್ಟಿರುವ ಉಲ್ಟಾ ಹೊಡೆದರೆ ಏನು? ಈ ಕೇಸ್ ಯಾವ ಹಾದಿ ಹಿಡಿಯುತ್ತೆ? ದರ್ಶನ್‌ಗೆ ಕಂಟಕ ಆಗುತ್ತಾ? ಇಲ್ಲ ಲಾಭ ಆಗುತ್ತಾ? ಈ ಗೊಂದಲ ಇದ್ದೇ ಇರುತ್ತೆ.
ಈ ಕೇಸ್‌ಗೆ ಸಂಬಂಧಪಟ್ಟಂತೆ ಪೊಲೀಸರು 1300 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಇದರಲ್ಲಿ 2 ಪ್ರತ್ಯಕ್ಷ ಸಾಕ್ಷಿಗಳು, 27 ಜನರಿಂದ 164 ಸ್ವ ಇಚ್ಚಾಶಕ್ತಿ ಹೇಳಿಕೆ ಪಡೆಯಲಾಗಿತ್ತು. 8 ಸರ್ಕಾರಿ ಅಧಿಕಾರಿಗಳು, 56 ಪೊಲೀಸರ ಹೇಳಿಕೆ ಸೇರಿ ಒಟ್ಟು 231 ಸಾಕ್ಷಿಯನ್ನು ದಾಖಲಿಸಲಾಗಿದೆ. ಹೀಗಾಗಿ ಈ ಹಂತ ತುಂಬಾನೇ ಮುಖ್ಯ. ಈ ಹಂತದಲ್ಲಿ ದರ್ಶನ್‌ಗೆ ಏನಲ್ಲ ಕಂಟಕಗಳು ಎದುರಾಗಬಹುದೆಂದು ನಿವೃತ್ತ ಪೊಲೀಸ್ ಅಧಿಕಾರಿ, ಲೋಕೇಶ್ವರ್ ಟಿವಿ5ಗೆ ನೀಡಿದ ಪ್ರತಿಕ್ರಿಯೆಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ.

"ದರ್ಶನ್‌ಗೆ ಕಂಟಕ ಆಗೋದು ಏನಂದ್ರೆ, ಪ್ರತ್ಯಕ್ಷ ಸಾಕ್ಷಿಗಳು. ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿನಿಂದ ಕರೆದುಕೊಂಡು ಬಂದಿದ್ದು ಕಂಟಕ ಆಗಬಹುದು. ಹಾಗೇ ಈ ಸ್ಪಾಟ್‌ಗೆ ಕರೆದುಕೊಂಡು ಬರುವ ವೇಳೆ ಸಿಸಿಟಿವಿ ದೃಶ್ಯಗಳು ಏನೇನು ಸಿಕ್ಕಿದ್ದಾವೆ, ಅವೆಲ್ಲವೂ ಅವರ ವಿರುದ್ಧವಾಗಿ ಹೋಗುತ್ತವೆ. ಬಾಡಿಯನ್ನು ಶಿಫ್ಟ್ ಮಾಡುವ ವೇಳೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು, ರೆಕಾರ್ಡ್ ಮಾಡಿರುವ ಸ್ಟೇಟ್ಮೆಂಟ್‌ಗಳು ಸ್ವಲ್ಪ ಸಮಸ್ಯೆ ಆಗುತ್ತೆ." ಎಂದು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಹೇಳಿದ್ದಾರೆ.
ಹಾಗೇ ಈ ಪ್ರಕರಣದಲ್ಲಿ ಆಗಿರುವ ತಪ್ಪುಗಳ ಬಗ್ಗೆನೂ ಅವರು ಪ್ರತಿಕ್ರಿಯಿಸಿದ್ದಾರೆ. "ಇವರು ಮಾಡಿರುವ ಕೆಲಸಗಳನ್ನು ಬೇರೆಯವರು ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಅದು ಅಕ್ಷಮ್ಯ ಅಪರಾಧ. ಆ ವೇಳೆ ಅಪರಾಧ ಒಪ್ಪಿಕೊಳ್ಳುವುದಕ್ಕೆ ಹಣ ಕೊಡುವುದಕ್ಕೆ ಹೋಗಿದ್ದು ತೊಂದರೆಗೆ ಸಿಕ್ಕಿಕೊಳ್ಳುವಂತೆ ಮಾಡುತ್ತೆ. ಹಾಗೆ ಇವರು ಹೊಡೆಯುತ್ತಿರುವ ದೃಶ್ಯಗಳು, ಆತ ಒದ್ದಾಡುತ್ತಿರುವ ಫುಟೇಜ್‌ಗಳು ಇವೆ ಎಂಬ ವಿಚಾರವಿದೆ. ಅವುಗಳಿಂದ ದರ್ಶನ್‌ಗೆ ಸಮಸ್ಯೆ ಆಗುತ್ತೆ" ಎಂದು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಒಂದು ವೇಳೆ ಸಾಕ್ಷಿಗಳು ಉಲ್ಟಾ ಹೊಡೆದರೆ, ಪ್ರತಿಕೂಲ ಸಾಕ್ಷಿ (ಹಾಸ್ಟೈಲ್ ವಿಟ್ನೆಸ್) ಇದೆ. ಆದರೆ, ಟೆಕ್ನಿಕಲ್ ಎವಿಡೆನ್ಸ್ ಅನ್ನು ದಾಟುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.


Click it and Unblock the Notifications











