"ನಾನು ಐದು ತಿಂಗಳು ಪ್ರೆಗ್ನೆಂಟ್ ಇದ್ದೀನಿ. ಗಂಡನ ಕಳ್ಕೊಂಡು ಹೇಗೆ ಜೀವನ ಮಾಡ್ಬೇಕು"; ರೇಣುಕಾಸ್ವಾಮಿ ಪತ್ನಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಆರೋಪ ದರ್ಶನ್ ಹಾಗೂ ಅವರ ಗ್ಯಾಂಗ್ ಮೇಲೆ ಇದೆ. ಈ ಸಂಬಂಧ ದರ್ಶನ್ ಅವರನ್ನು ಈಗಾಗಲೇ ವಿಚಾರಣೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ನ್ಯಾಯಾಧೀಶರು 6 ದಿನಗಳ ಕಾಲ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ಅನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಇತ್ತ ಪತಿ ರೇಣುಕಾಸ್ವಾಮಿಯನ್ನು ಕಳೆದುಕೊಂಡಿರು ಸಹನಾ ಬದುಕೀಗ ಬೀದಿಗೆ ಬಂದಂಗೆ ಆಗಿದೆ. ಪತಿಯನ್ನು ಕಳೆದುಕೊಂಡ ನೋವಿನಲ್ಲಿ ದರ್ಶನ್ ಹಾಗೂ ಅವರ ಸಹಚರಿಗೆ ಶಿಕ್ಷೆ ಆಗಬೇಕು. ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ರೇಣುಕಾಸ್ವಾಮಿಯ ಮೃತ ದೇಹವನ್ನು ನೋಡಿ ಗುರುತಿ ಹಿಡಿಯುವುದಕ್ಕೆ ಆಗಲಿಲ್ಲ. ಆ ಮಟ್ಟಿಗೆ ಹಿಂಸೆ ಕೊಟ್ಟು ಕೊಲೆ ಮಾಡುವಂತಹದ್ದು ಏನಿತ್ತು? ವಾರ್ನಿಂಗ್ ಕೊಟ್ಟು ಬಿಡಬಹುದಿತ್ತಲ್ಲ. ಎಷ್ಟು ದೊಡ್ಡ ನಟನಾದರೆ ನಮಗೇನು? ನನಗೆ ನನ್ನ ಗಂಡನನ್ನು ಕೊಂದಿದ್ದಕ್ಕೆ ನ್ಯಾಯ ಬೇಕು ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
"ಅವರು ದರ್ಶನ್ ಅಭಿಮಾನಿಯೇನಲ್ಲ. ಅವರಾಯ್ತು.. ಅವರ ಕೆಲಸ ಆಯ್ತು ಅಷ್ಟೇ. ಹಾಗೇನಾದರೂ ತಪ್ಪು ಮಾಡಿದ್ರೆ ವಾರ್ನಿಂಗ್ ಮಾಡಿ ಬಿಡಬೇಕಿತ್ತು. ನಿನ್ನೆ ನಮ್ಮ ಮನೆಯವರ ಬಾಡಿ ನೋಡಿ ನಮ್ಮ ಮನೆಯವರು ಅಂತಾನೇ ಅನಿಸಲಿಲ್ಲ. ಹಾಗೇ ವಿಕಾರವಾಗಿ ಕೊಲೆ ಮಾಡುವಂತಹದ್ದೇನಿತ್ತು. ಎಲ್ಲರೂ ತಪ್ಪು ಮಾಡೋದು ಸಹಜ. ವಾರ್ನಿಂಗ್ ಬಿಟ್ಟಿದ್ದರೆ ಆಗೋದು. ಇಷ್ಟು ದೊಡ್ಡ ನಟರಾಗಿ ಅವರೇ ಹೀಗೆ ಮಾಡಿದರೆ ಹೇಗೆ? ನಾನು ಐದು ತಿಂಗಳು ಪ್ರೆಗ್ನೆಂಟ್ ಇದ್ದೀನಿ. ಗಂಡನ ಕಳ್ಕೊಂಡು ಹೇಗೆ ಜೀವನ ಮಾಡ್ಬೇಕು ಮುಂದೆ ಹೇಳಿ" ಎಂದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದಾರೆ.
ರೇಣುಕಾಸ್ವಾಮಿ ಶನಿವಾರ ಟೀ ಕುಡಿದು ಮನೆಯಿಂದ ಹೊರಟಿದ್ದರು. ಆ ಮೇಲೆ ಏನಾಯ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ಟೀ ಕುಡಿದುಕೊಂಡು ಡ್ಯೂಟಿ ಹೋಗುತ್ತೀನಿ ಅಂತ ಹೋದರು. ಅಲ್ಲಿಂದಲೇ ಹಾಗೇ ಕರೆದುಕೊಂಡು ಹೋಗಿದ್ದಾರೆ ನೋಡಿ. ಅವರಿಗೆ ಹೆಂಡತಿ ಮಕ್ಕಳು ಇಲ್ಲವೇನ್ರಿ. ವಾರ್ನಿಂಗ್ ಕೊಟ್ಟಿದ್ದರೆ ಆಗುತ್ತಿತ್ತು. ನನಗೆ ನ್ಯಾಯ ದೊರಕುವ ಹಾಗೆ ಮಾಡ್ರಿ." ಎಂದು ಸಹನ ಕಣ್ಣೀರು ಹಾಕಿದ್ದಾರೆ.
ಸ್ನೇಹಿತರೊಂದಿಗೆ ಊಟಕ್ಕೆ ಹೋಗುತ್ತಿದ್ದೇನೆ ಎಂದು ಹೇಳುವುದಕ್ಕೆ ರೇಣುಕಾಸ್ವಾಮಿ ಪತ್ನಿಗೆ ಎರಡು ಬಾರಿ ಫೋನ್ ಮಾಡಿದ್ದರು. ಆದರೆ, ಫೋನ್ ಸೈಲೆಂಟ್‌ನಲ್ಲಿ ಇದ್ದಿದ್ದರಿಂದ ಎತ್ತಿರಲಿಲ್ಲ. ಹೀಗಾಗಿ ಅವರ ಅಮ್ಮನಿಗೆ ಫೋನ್ ಮಾಡಿ ನಾಲ್ಕು ಮಂದಿ ಹಳೆಯ ಸ್ನೇಹಿತರು ಸಿಕ್ಕಿದ್ದಾರೆ. ಅವರೊಂದಿಗೆ ಊಟಕ್ಕೆ ಹೋಗುತ್ತಿದ್ದೇನೆ. ಮನೆಗೆ ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದನ್ನು ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿಕೊಂಡಿದ್ದಾರೆ.
ದರ್ಶನ್ ಅದೆಷ್ಟೇ ದೊಡ್ಡ ಮನುಷ್ಯ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕು. ಮತ್ತೆ ನನ್ನ ಗಂಡ ಸಿಗ್ತಾನಾ? ಏನೇ ಆದರೂ ಅವರಿಗೆ ಶಿಕ್ಷೆ ಆಗಲೇ ಬೇಕು. ತನ್ನ ಪತಿಯನ್ನು ವಿಕಾರವಾಗಿ ಕೊಲೆ ಮಾಡಿದ್ದಾರೆ. ಅವರನ್ನು ಗುರುತು ಹಿಡಿಯದ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ತನ್ನ ಪತಿ ಒಳ್ಳೆಯವರಿದ್ದರು. ಹಾಗೇನಾದರೂ ತಪ್ಪು ಮಾಡಿದ್ದರೆ ಪೊಲೀಸರಿಗೆ ಹೇಳಿದ್ದರೆ ಆಗುತ್ತಿತ್ತುಎಂದು ಭಾವುಕರಾಗಿದ್ದಾರೆ.


Click it and Unblock the Notifications











