'ರೈಡರ್' ನಿಖಿಲ್ ಕುಮಾರ್ ಮಗನನ್ನು ಪ್ರೀತಿಯಿಂದ ಏನಂತಾ ಕರೀತಾರೆ?:
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ 'ರೈಡರ್' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಇದೇ ಡಿಸೆಂಬರ್ 24ರಂದು ನಿಖಿಲ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿಖಿಲ್ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್‌ಗಳಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗಾಗಿಯೇ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ 'ರೈಡರ್' ಸಿನಿಮಾ ಗೆದ್ದೇ ಗೆಲ್ಲುತ್ತೆ ಎನ್ನುವ ಭರವಸೆಯಲ್ಲಿ ನಿಖಿಲ್ ಕುಮಾರ್ ಇದ್ದಾರೆ.
ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ನಿಖಿಲ್ ಕುಮಾರ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಒಂದು ಕಡೆ ಸಿನಿಮಾ. ಮತ್ತೊಂದು ಕಡೆ ರಾಜಕೀಯ. ಇನ್ನೊಂದು ಕಡೆ ಪತ್ನಿ ಮಗ, ಕುಟುಂಬ. ಎಲ್ಲದಕ್ಕೂ ಸಮಯವನ್ನು ನೀಡಲೇ ಬೇಕಾಗಿದೆ. ಈ ಬಗ್ಗೆ ನಿಖಿಲ್ ಕುಮಾರ್ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ಎರಡೂವರೆ ತಿಂಗಳ ಮುದ್ದದ ಮಗನನ್ನು ಏನೆಂದು ಕರೆಯುತ್ತಾರೆಂಬುದನ್ನೂ ರಿವೀಲ್ ಮಾಡಿದ್ದಾರೆ.

ಮಗನೊಂದಿಗೆ ನಿಖಿಲ್ ಹೆಚ್ಚು ಸಮಯ ಕಳೀತಾರೆ
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ ಸಿನಿಮಾ, ರಾಜಕೀಯ ಅಂತ ಬ್ಯುಸಿಯಾಗಿದ್ದಾರೆ. 'ರೈಡರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿರುವುದರಿಂದ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂದರ್ಶನ, ಅಭಿಮಾನಿಗಳ ಭೇಟಿ ಅಂತ ನಿಖಿಲ್ ಓಡಾಡಿಕೊಂಡಿದ್ದಾರೆ. ಹೀಗಿದ್ದರೂ ಈ ಗ್ಯಾಪ್‌ನಲ್ಲಿಯೇ ಯುವರಾಜ ತಮ್ಮ ಕುಟುಂಬದ ಕಡೆಗೂ ಗಮನ ಹರಿಸಿದ್ದಾರೆ. ಅದರಲ್ಲೂ ಎರಡೂವರೆ ತಿಂಗಳ ಮುದ್ದಾದ ಮಗನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ರೈಡರ್ ಮಗನನ್ನು ನೋಡಲು ಹೊರಟು ಬಿಡುತ್ತಾರೆ.

ನಿಖಿಲ್ ಮಗನಿಗೆ ಏನಂತಾ ಕರೀತಾರೆ?
ನಿಖಿಲ್ ಪತ್ನಿ ರೇವತಿ ಸದ್ಯ ಬಾಣಂತಿಯಾಗಿರುವುದರಿಂದ ತವರು ಮನೆಯಲ್ಲಿ ಇದ್ದಾರೆ. ಹೀಗಾಗಿ ನಿಖಿಲ್ ತಮ್ಮ ಸಿನಿಮಾ ಪ್ರಚಾರ ಹಾಗೂ ರಾಜಕೀಯದ ಕೆಲಸಗಳ ಒತ್ತಡದ ನಡುವೆಯೂ ಪತ್ನಿ ಹಾಗೂ ಮಗನಿಗೆ ಅಂತ ಸಮಯ ಮೀಸಲಿಟ್ಟಿದ್ದಾರೆ. ಅದರಲ್ಲೂ ಎರಡೂವರೆ ತಿಂಗಳ ಮಗನಿಗೆ ಇನ್ನೂ ನಾಮಕರಣ ಮಾಡಿಲ್ಲ. ಹೀಗಾಗಿ ಪ್ರೀತಿಯಿಂದ ಮಗನೇ ಅಂತ ಕರೆಯುತ್ತಾರಂತೆ. ಯಾಕಂದ್ರೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೂಡ ನಿಖಿಲ್‌ರನ್ನು ಮಗನೇ ಎಂದು ಕರೆಯುತ್ತಾರೆ. ಹೀಗಾಗಿ ತಾನೂ ಕೂಡ ನನ್ನ ಮಗನನ್ನು ಮಗನೇ ಅಂತ ಕರೆಯುತ್ತೇನೆ ಎಂದಿದ್ದಾರೆ.

ಮರಿ ಮೊಮ್ಮಗನೊಂದಿಗೆ ಹೆಚ್‌ಡಿ ದೇವೇಗೌಡರು ಹೇಗಿರುತ್ತಾರೆ?
ಎಚ್‌ಡಿ ಕುಮಾರಸ್ವಾಮಿ ಹಾಗೂ ಎಚ್‌ಡಿ ದೇವೇಗೌಡರು ಇಬ್ಬರಿಗೂ ರಾಜಕೀಯ ಒತ್ತಡಗಳಿವೆ. ಆದರೂ, ಸಿಕ್ಕ ಬಿಡುವಿನ ವೇಳೆಯಲ್ಲೇ ದೇವೇಗೌಡರು ಕಾಲ ಕಳೆಯುತ್ತಾರೆ. " ಮರಿಮೊಮ್ಮಗನ ಜೊತೆ ಆಟ ಆಡಲೆಂದೇ ಬಿಡುವು ಮಾಡಿಕೊಂಡು ಬರುತ್ತಾರೆ. ಮಗನೊಂದಿಗೆ ಕೂಡ ಅವರೂ ಮಗು ರೀತಿ ಆಗಿಬಿಡುತ್ತಾರೆ. ಅದನ್ನು ನೋಡುವುದೇ ಒಂದು ಪುಣ್ಯ. ನಮ್ಮ ಮನೆಯವರಿಗೆ ಫೋನ್ ಮಾಡಿ, ಮಗ ಮಲಗಿದ್ದಾನಾ? ಎದ್ದಿದ್ದಾನಾ? ಅಂತ ಕೇಳಿಕೊಂಡು ಬರುತ್ತಾರೆ? ಇದು ನನ್ನ ಮಗನ ಪುಣ್ಯ" ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ಪತ್ನಿ ಜೊತೆ ಹೆಜ್ಜೆ ಹಾಕಿದ್ದ ನಿಖಿಲ್
ನಿಖಿಲ್ ಕುಮಾರ್ 'ರೈಡರ್' ಸಿನಿಮಾ ಪ್ರಚಾರದಲ್ಲಿದ್ದರೂ, ಪತ್ನಿ ಜೊತೆ ಇದೇ ಸಿನಿಮಾದ ಡವಾ ಡವಾ ಹಾಡಿಗೆ ಹೆಜ್ಜೆ ಹಾಕಿದ್ದರು. ರೇವತಿಯೊಂದಿಗೆ ಸ್ಟೆಪ್ ಹಾಕಿದ್ದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದರು. 'ರೈಡರ್' ಇದೇ ಡಿ.24ರಂದು ತೆರೆಗೆ ಬರುತ್ತಿದ್ದು, ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪ್ರಸ್ತುತ ಈ ಚಿತ್ರದ ಟ್ರೈಲರ್‌ಗೆ 63 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. ಮೋಹಕತಾರೆ ರಮ್ಯಾ ನಿಖಿಲ್ ಕುಮಾರ್ 'ರೈಡರ್'ಗೆ ವಿಶ್ ಮಾಡಿದ್ದಾರೆ.


Click it and Unblock the Notifications











