Rishab Shetty: 'ಕಾಂತಾರ' ಮೂಲಕ ಜಗತ್ತು ಗೆದ್ದ ರಿಷಬ್ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?
ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ದೇಶಾದ್ಯಂತ ಹೊಸ ಕ್ರೇಜ್ ತಂದು ಕೊಟ್ಟವರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರು. ಕಳೆದ ವರ್ಷ 'ಕಾಂತಾರ' ದೇಶ ಅಷ್ಟೇ ಅಲ್ಲ, ದೇಶವನ್ನೂ ದಾಟಿ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ನಿರ್ದೇಶನಕ್ಕೆ ನಟನೆಗೆ ಅಭಿಮಾನಿಗಳು ಮಾರು ಹೋಗಿದ್ದರು.
'ಕಾಂತಾರ' ಸಿನಿಮಾಗೂ ಮುನ್ನ ಚಿಕ್ಕ ಪುಟ್ಟ ಸಿನಿಮಾಗಳಲ್ಲಿ ನಟಿಸುತ್ತಿದ್ದ, ನಿರ್ದೇಶನದಿಂದ ಗಮನ ಸೆಳೆದಿದ್ದ ರಿಷಬ್ ಏಕಾಏಕಿ ಸ್ಟಾರ್ ಪಟ್ಟಕ್ಕೆ ಏರಿದರು. ಇಡೀ ಜಗತ್ತೇ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿಕೊಂಡಾಡುವುದಕ್ಕೆ ಶುರು ಮಾಡಿತ್ತು.

'ಕಾಂತಾರ' ಸಿನಿಮಾ ಬರುವವರೆಗೂ ಕೇವಲ ಕನ್ನಡಿಗರಿಗಷ್ಟೇ ಗೊತ್ತಿಲ್ಲ ರಿಷಬ್, ದೇಶದ ಮೂಲೆ ಮೂಲೆಯಲ್ಲಿರೋ ಸಿನಿಪ್ರೇಮಿಗಳಿಗೂ ಚಿರಪರಿಚಿತರಾದರು. ಆಗಲೇ ರಿಷಬ್ ಶೆಟ್ಟಿ ಬಗ್ಗೆ ಜನರು ಹುಡುಗಾಡುವುದಕ್ಕೆ ಶುರು ಮಾಡಿದ್ದರು. ಆಗಲೇ ರಿಷಬ್ ಬಗ್ಗೆ ಗೊತ್ತಿಲ್ಲದೆ ಕೆಲವು ಸಂಗತಿಗಳು ಹೊರಬಿದ್ದಿದ್ದವು. ಆ ವಿಷಯಗಳು ಯಾವುವು? ಅನ್ನೋದನ್ನು ನೋಡೋಣ.
ಲಾಕ್‌ಡೌನ್‌ನಲ್ಲಿ ಹೊಳೆದ ಐಡಿಯಾ 'ಕಾಂತಾರ'
ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯವಾಗಿದ್ದರು. ಹೀಗಾಗಿ 'ಕಾಂತಾರ' ಹೇಗೆ ಶುರುವಾಯ್ತು ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ. ಲಾಕ್‌ಡೌನ್ ಸಮಯದಲ್ಲಿ ಸ್ನೇಹಿತನ ಮನೆಗೆ ಹೋಗಿದ್ದಾಗ, ಅಲ್ಲಿ ಹೊಳೆದಿದ್ದ ಕಥೆಯಿದು. ಸ್ನೇಹಿತ ಹೇಳಿದ ರಿಯಲ್ ಲೈಫ್ ಘಟನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಶುರುವಾದ ಕಥೆ ನಾಲ್ಕು ತಿಂಗಳ ಅಂತರದಲ್ಲಿ ಮುಗಿದು ಹೋಗಿತ್ತು.

ರಿಷಬ್ ಶೆಟ್ಟಿ ಶೈಕ್ಷಣಿಕ ಹಿನ್ನೆಲೆಯೇನು?
ರಿಷಬ್ ಶೆಟ್ಟಿಗೆ ಸಿನಿಮಾ ಕಡೆಗೆ ಹೆಚ್ಚು ಒಲವಿತ್ತು. ಹೀಗಾಗಿ ಫಿಲ್ಮ್ಸ್ ಇನ್ಸ್‌ಟ್ಯೂಟ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಸರ್ಕಾರಿ ಫಿಲ್ಮ್ ಹಾಗೂ ಟಿವಿ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಸಿನಿಮಾಗೆ ಬರುವುದಕ್ಕೂ ಮುನ್ನ ಬೇರೆ ಬೇರೆ ಕೆಲಸವನ್ನು ಮಾಡಿದ್ದರು. ಮಿನರಲ್ ವಾಟರ್ ಮಾರುತ್ತಿದ್ದರು. ಹೋಟೆಲ್‌ಗಳಲ್ಲಿ ಸಹಾಯಕರಾಗಿದ್ದರು. ಕಟ್ಟಡ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಆ ಬಳಿಕವೇ ಸಿನಿಮಾ ಕಡೆ ಮುಖ ಮಾಡಿದ್ದರು. 'ತುಘಲಕ್' ಅಂತಹ ಸಿನಿಮಾಗೆ ಸಹಾಯಕರಾಗಿ ಕೆಲಸ ಮಾಡಿದ್ದರು.

6ನೇ ತರಗತಿಯಿಂದಲೇ ಯಕ್ಷಗಾನ ಆರಂಭ
ರಿಷಬ್ ಶೆಟ್ಟಿ ಬಾಲ್ಯದಿಂದಲೇ ಯಕ್ಷಗಾನ ಮಾಡುತ್ತಿದ್ದರು. ಅಲ್ಲಿಂದಲೇ ಅವರಿಗೆ ನಟನೆಯ ಗೀಳು ಬೆಳೆದಿತ್ತು. ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಹೀಗೆ ಹೇಳಿದ್ದರು "6ನೇ ತರಗತಿಯಿಂದ ಪಿಯುಸಿವರೆಗೂ ಯಕ್ಷಗಾನ ಮಾಡಿದ್ದೇನೆ. ಮೊದಲು ನಾನು ಆರ್ಟಿಸ್ಟ್ ಅಂತ ಆಗಿದ್ದು ಅಲ್ಲಿಂದಲೇ. ಯಕ್ಷಗಾನದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅಲ್ಲಿಂದಲೇ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆದಿತ್ತು.

ರಿಷಬ್ ಶೆಟ್ಟಿ ಅಸಲಿ ಹೆಸರೇನು?
ಚಿತ್ರರಂಗಕ್ಕೆ ರಿಷಬ್ ಶೆಟ್ಟಿ ಅಂತಲೇ ಫೇಮಸ್. ಆದರೆ, ರಿಷಬ್ ಅಸಲಿ ಹೆಸರು ಪ್ರಶಾಂತ್ ಶೆಟ್ಟಿ. ಸಂಖ್ಯಾಶಾಸ್ತ್ರದ ಅನುಗುಣವಾಗಿ ಪ್ರಶಾಂತ್ ಶೆಟ್ಟಿ ಅನ್ನೋ ಹೆಸರನ್ನು ರಿಷಬ್ ಶೆಟ್ಟಿ ಅಂತ ಬದಲಾಯಿಸಲಾಯ್ತು. ಸಂದರ್ಶನವೊಂದರಲ್ಲಿ ರಿಷಬ್ ತಂದೆ ಹೆಸರನ್ನು ಬದಲಾಯಿಸಿದ್ದಾಗಿ ಹೇಳಿಕೊಂಡಿದ್ದರು. ಆ ಬಳಿಕವೇ ಅದೃಷ್ಟ ಒಲಿದು ಬಂದಿದ್ದಾಗಿ 'ಕಾಂತಾರ' ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.

ಕರ್ನಾಟಕದ ಸಂಸ್ಕೃತಿಯನ್ನು ತೋರಿಸುವ ಬಯಕೆ
ಕರ್ನಾಟಕದ ಮೂಲೆ ಮೂಲೆಯಲ್ಲಿ ನಾನಾ ತರಹದ ಸಂಸ್ಕೃತಿಗಳಿವೆ. ಇವುಗಳನ್ನು ಇಂದಿನ ಪೀಳಿಗೆ ತಿರಸ್ಕಾರದ ಭಾವನೆಯಿಂದ ನೋಡುತ್ತಿದ್ದಾರೆ. ಹೀಗಾಗಿ ಇವುಗಳನ್ನು ಸಿನಿಮಾದಲ್ಲಿ ತಂದು, ಅವುಗಳನ್ನು ಜೀವಂತವಾಗಿ ಇರಿಸಬೇಕು ಅನ್ನೋದು ರಿಷಬ್ ಶೆಟ್ಟಿ ಬಯಕೆ. ಆ ಕಾರಣಕ್ಕಾಗಿಯೇ 'ಕಾಂತಾರ' ಸಿನಿಮಾವನ್ನು ನಿರ್ದೇಶನ ಮಾಡಿದ್ದು ಹಲವು ಸಂದರ್ಶಗಳಲ್ಲಿ ಹೇಳಿಕೆ ನೀಡಿದ್ದಾರೆ.


Click it and Unblock the Notifications











