ಕಾಂತಾರ ಅಣಕಿಸಿದ್ದ ರಣ್‌ವೀರ್.. ಎಲ್ಲಾ ಮರೆತು 'ಧುರಂಧರ್ 2' ಅನ್ನು ಹಾಡಿ ಹೊಗಳಿದ ರಿಷಬ್ ಶೆಟ್ಟಿ
'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಯುಗಾದಿ ಹಬ್ಬಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಹಲ್‌ಚಲ್ ಎಬ್ಬಿಸಿತ್ತು. ಈ ವರ್ಷದ ಅತೀ ದೊಡ್ಡ ಸಿನಿಮಾ ಆಗುತ್ತೆ ಅನ್ನೋದನ್ನು ರಿಲೀಸ್‌ಗೂ ಮುನ್ನವೇ ಸಾಬೀತು ಮಾಡಿತ್ತು. ಆದಿತ್ಯ ಧರ್ ನಿರ್ದೇಶಿಸಿದ್ದ 'ಧುರಂಧರ್'ಗೆ ಪ್ರೇಕ್ಷಕರು ಮನ ಸೋತಿದ್ದರು. ದೇಶ ಪ್ರೇಮ ಉಕ್ಕಿ ಬಂದಿತ್ತು. ಅದೇ ನಿರೀಕ್ಷೆಯಲ್ಲಿ ಇದ್ದಿದ್ದರಿಂದ ವಿಶ್ವದೆಲ್ಲೆಡೆ 'ಧುರಂಧರ್ 2' ಕ್ರೇಜ್ ಹೆಚ್ಚಾಗಿತ್ತು.
ರಣ್‌ವೀರ್ ಸಿಂಗ್ ನಟಿಸಿದ 'ಧುರಂಧರ್ 2' ಸಿನಿಮಾಗೆ ವಿಶ್ವದೆಲ್ಲೆಡೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಹಳೆ ದಾಖಲೆಗಳನ್ನೆಲ್ಲ ಹೊಡೆದು ಹಾಕುತ್ತಿದೆ. ಈ ಬೆನ್ನಲ್ಲೇ ದಕ್ಷಿಣ ಭಾರತದ ತಾರೆಯರಿಂದ ಇಡೀ ಸಿನಿಮಾ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಇಡೀ ತಂಡಕ್ಕೆ ಬಹುಪರಾಕ್ ಹೇಳಿದ್ದಾರೆ.

ಈಗ ರಿಷಬ್ ಶೆಟ್ಟಿಯ ಸರದಿ. 'ಧುರಂಧರ್ 2' ಸಿನಿಮಾದ ಯಶಸ್ಸಿಗೆ ರಿಷಬ್ ಶೆಟ್ಟಿ ಕೂಡ ಮನ ಸೋತಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಸದ್ದು ಮಾಡುತ್ತಿರುವ ಈ ಸಮಯದಲ್ಲಿ ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಧುರಂಧರ್ 2' ತಂಡದ ನಾಯಕ ರಣ್‌ವೀರ್ ಸಿಂಗ್, ನಿರ್ದೇಶಕ ಆದಿತ್ಯ ಧರ್, ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಳೆದ ವರ್ಷ 'ಧುರಂಧರ್' ರಿಲೀಸ್‌ಗೂ ಮುನ್ನ ರಣ್‌ವೀರ್ ಸಿಂಗ್ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಗೋವಾ ಫಿಲ್ಮ್ ಇವೆಂಟ್‌ನಲ್ಲಿ ರಿಷಬ್ ಶೆಟ್ಟಿಯ ಮುಂದೆ 'ಕಾಂತಾರ'ದ ಪಾತ್ರವನ್ನು ಹೊಗಳುವ ಭರಾಟೆಯಲ್ಲಿ ಅಣಕಿಸಿದ್ದರು. ಅಲ್ಲದೆ ತುಳುನಾಡಿನ ದೈವವನ್ನು ದೆವ್ವ ಎಂದು ಕರೆದಿದ್ದರು. ಆ ಬಳಿಕ ತುಳುನಾಡಿನಲ್ಲಿ ರಣ್‌ವೀರ್ ಸಿಂಗ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ರಣ್‌ವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿತ್ತು.
ಈ ವಿವಾದದ ಬಗ್ಗೆ ರಣ್‌ವೀರ್ ಸಿಂಗ್ ಪ್ರತಿಕ್ರಿಯೆ ನೀಡಿರಲಿಲ್ಲ.ಇನ್ನು ರಿಷಬ್ ಶೆಟ್ಟಿ ಅಣಕಿಸುವುದು ಬೇಡ ಎಂದು ಹೇಳುತ್ತಿರುವ ವಿಡಿಯೋ ಅದೇ ಸಮಯದಲ್ಲಿ ರಿಲೀಸ್ ವೈರಲ್ ಆಗಿತ್ತು. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿರಬಹುದೆಂಬ ಎಲ್ಲರೂ ಭಾವಿಸಿದ್ದರು. ಈಗ ರಿಷಬ್ ಶೆಟ್ಟಿಯೇ ಆ ಮೌನವನ್ನು ಮುರಿದು ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಅನ್ನು ಹಾಡಿ ಹೊಗಳಿಸಿದ್ದಾರೆ.

ರಿಷಬ್ ಶೆಟ್ಟಿಗೆ 'ಧುರಂಧರ್ 2' ಸಿನಿಮಾದ ಮೇಕಿಂಗ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈಗಾಗಾಗಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಧುರಂಧರ್ 2' ಟೀಮ್‌ಗೆ ಶುಭಾಶಯಗಳನ್ನು ಹೇಳಿದ್ದಾರೆ. " ಧುರಂಧರ್ ದಿ ರಿವೇಂಜ್ ಸಿನಿಮಾದ ಮೊಟ್ಟ ಮೊದಲ ದೃಶ್ಯವೇ ನಿಮ್ಮನ್ನು ಸಿನಿಮಾದೆಡೆಗೆ ಎಳೆಯುತ್ತೆ. ಹಾಗೇ ಎಲ್ಲಿಯೂ ಹೋಗುವುದಕ್ಕೆ ಬಿಡುವುದಿಲ್ಲ. ಪ್ರತಿಯೊಂದು ಸಿನಿಮಾವೂ ಯುದ್ಧದಂತೆ ಕಾಣುತ್ತದೆ. ಇದೊಂದು ಕೇವಲ ಸೀಕ್ವೆಲ್ ಅಷ್ಟೇ ಅಲ್ಲ. ಇದೊಂದು ಸ್ಟೇಟ್ಮೆಂಟ್. ಅದ್ಭುತವಾಗಿ ಸ್ಟೋರಿಯನ್ನು ಹೇಳಲಾಗಿದೆ. ಅದಿತ್ಯಧರ್ ಅವರ ಡಿಲಿಂಗ್ ತುಂಬಾನೇ ಇಷ್ಟ ಆಯ್ತು. ಪ್ರತಿಯೊಬ್ಬರ ಪರ್ಫಾಮೆನ್ಸ್ ಕೂಡ ತುಂಬಾನೇ ಇಷ್ಟ ಆಯ್ತು" ಎಂದು ರಿಷಬ್ ಶೆಟ್ಟಿ ಸಿನಿಮಾ ಕಲಾವಿದರಿಗೆ ಟ್ಯಾಗ್ ಮಾಡಿದ್ದಾರೆ.
ರಣ್‌ವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅರ್ಜುನ್ ರಾಮ್‌ಪಾಲ್, ಆರ್. ಮಾಧನವ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದರೊಂದಿಗೆ ಛಾಯಾಗ್ರಹಣ ಹಾಗೂ ಮ್ಯೂಸಿಕ್ ಅನ್ನೂ ರಿಷಬ್ ಶೆಟ್ಟಿ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಮುನ್ನ ಟಾಲಿವುಡ್‌ನ ಅಲ್ಲು ಅರ್ಜುನ್, ಮಹೇಶ್ ಬಾಬು ಸೇರಿದಂತೆ ಎಸ್ ಎಸ್ ರಾಜಮೌಳಿ ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.


Click it and Unblock the Notifications















