'ಕೌನ್‌ಬನೇಗಾ ಕರೋಡ್‌ಪತಿ'ಯಲ್ಲಿ ಅಮಿತಾಬ್ ಬಚ್ಚನ್ ಮುಂದೆ ಪಂಚೆ ಎತ್ತಿ ಕಟ್ಟಿದೆ ರಿಷಬ್: ಏನಂದ್ರು ಬಿಗ್ ಬಿ?
'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿ ಇನ್ನೇನು ಮೂರನೇ ವಾರಕ್ಕೆ ಕಾಲಿಡಲಿದೆ. ಈ ಎರಡು ವಾರಗಳಲ್ಲಿ ಸಿನಿಮಾ ದೇಶಾದ್ಯಂತ ಮೆಚ್ಚುಗೆ ಪಡೆದುಕೊಂಡಿದೆ. ಮತ್ತೊಮ್ಮೆ 'ಕಾಂತಾರ'ವನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂಬೈ ಸೇರಿದಂತೆ ಹಲವೆಡೆ ಸಿನಿಮಾ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ ರಿಷಬ್ ಶೆಟ್ಟಿ ತಮ್ಮ 'ಕಾಂತಾರ ಚಾಪ್ಟರ್ 1' ದಂತಕತೆಯನ್ನು ಬಾಲಿವುಡ್‌ನ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್‌ವರೆಗೂ ತೆಗೆದುಕೊಂಡಿದ್ದರು. ಅಕ್ಟೋಬರ್ 11ರಂದು ಬಿಗ್ ಬಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 17ರ ಸೆಟ್ಟಿನಲ್ಲಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಅಮಿತಾಬ್ ಬಚ್ಚನ್ ಜೊತೆ ರಿಷಬ್ ಶೆಟ್ಟಿಯನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದರು.

ಹೊಂಬಾಳೆ ಫಿಲ್ಮ್ ಫೋಟೋ ಶೇರ್ ಮಾಡುವುದರ ಜೊತೆಗೆ ಬಿಗ್ ಬಿಗೆ ಬರ್ತ್‌ಡೇ ವಿಶ್ ಕೂಡ ಮಾಡಿತ್ತು. ಈಗ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 17ರ ಈ ಸ್ಪೆಷಲ್ ಪ್ರೋಮೋವನ್ನು ಸೋನಿ ಟಿವಿ ಶೇರ್ ಮಾಡಿದೆ. ಈಗ ಆ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಅಮಿತಾಬ್ ಬಚ್ಚನ್ ಮುಂದೆ ರಿಷಬ್ ಶೆಟ್ಟಿ ಪಂಚೆ ಎತ್ತಿ ಕಟ್ಟಿದ್ದಾರೆ. ಈ ವಿಡಿಯೋಗೆ ಕಮೆಂಟ್‌ಗಳ ಸುರಿಮಳೆಯೇ ಆಗಿದೆ.
ಮೆಗಾ ಸ್ಟಾರ್ ಜೊತೆ ಡಿವೈನ್ ಸ್ಟಾರ್
ಬಾಲಿವುಡ್ ಮೆಗಾಸ್ಟಾರ್ ಜೊತೆ ಕಾಣಿಸಿಕೊಳ್ಳುವುದಕ್ಕೆ ಸೂಪರ್‌ಸ್ಟಾರ್‌ಗಳೇ ಕ್ಯೂನಲ್ಲಿ ನಿಲ್ಲುತ್ತಾರೆ. ಅದರಲ್ಲೂ ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ' ಕ್ವಿಜ್ ಶೋಗೆ ವಿಶ್ವದಾದ್ಯಂತ ವೀಕ್ಷಕರು ಇದ್ದಾರೆ. ಈ ಶೋನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಂದೇ ಸೆಟ್‌ನಲ್ಲಿ ಬಾಲಿವುಡ್ ಮೆಗಾಸ್ಟಾರ್ ಹಾಗೂ ಡಿವೈನ್ ಸ್ಟಾರ್ ಅನ್ನು ಮುಖಾಮುಖಿ ನೋಡುವುದಕ್ಕೆ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಅಮಿತಾಬ್ ಮುಂದೆ ಪಂಚೆ ಎತ್ತಿ ಕಟ್ಟಿದ ರಿಷಬ್
ಅಮಿತಾಬ್ ಬಚ್ಚನ್ ಮುಂದೆ ನಿಲ್ಲುವುದಕ್ಕೆ ಅವಕಾಶ ಸಿಗುವುದೇ ಕಮ್ಮಿ. ಅಂತಹದ್ರಲ್ಲಿ ರಿಷಬ್ ಶೆಟ್ಟಿ ಬಾಲಿವುಡ್ ಮೆಗಾಸ್ವಾರ್ ಮುಂದೆ ಪಂಚೆ ಎತ್ತಿ ಕಟ್ಟಿ ಡೈಲಾಗ್ ಬೇರೆ ಬಿಟ್ಟಿದ್ದಾರೆ. ಇದು ರಿಷಬ್ ಶೆಟ್ಟಿ ವೃತ್ತಿ ಬದುಕಿನಲ್ಲಿ ಎಂದೂ ಮರೆಯಲಾರದ ಕ್ಷಣಗಳಲ್ಲಿ ಒಂದಾಗಲಿದೆ. ಹಾಗೇ ಶೋನಲ್ಲಿ ಬಿಗ್ ಬಿಗೆ ರಿಷಬ್ ಶೆಟ್ಟಿ ಉಡುಗೊರೆಯನ್ನೂ ನೀಡಿದ್ದಾರೆ. ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.
ಏನಂದ್ರು ಅಮಿತಾಬ್ ಬಚ್ಚನ್
ರಿಷಬ್ ಶೆಟ್ಟಿ ಕೊಟ್ಟ ಉಡುಗೊರೆಯನ್ನು ಅಮಿತಾಬ್ ಬಚ್ಚನ್ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಬಳಿಕ "ರಿಷಬ್ ಶೆಟ್ಟಿಗೆ ನೀವು ಕೊಟ್ಟಿರುವುದನ್ನು ನಾನು ಧರಿಸುವುದಕ್ಕೂ ಮುನ್ನ ಕಲಿತುಕೊಳ್ಳಬೇಕು. ಇಲ್ಲದೇ ಹೋದರೆ, ಇಲ್ಲೇ ಏನಾದರೂ ಕಳಚಿ ಹೋಯ್ತು ಅಂದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತೆ" ಎಂದು ಹೇಳಿ ರಿಷಬ್ ಶೆಟ್ಟಿಗೆ ಹೇಳಿದ್ದಾರೆ. ಬಳಿಕ ಇಬ್ಬರೂ ನಕ್ಕು ಖುಷಿ ಪಟ್ಟಿದ್ದಾರೆ.
ಯಾವಾಗ ಎಲ್ಲಿ ನೋಡಬಹುದು?
ರಿಷಬ್ ಶೆಟ್ಟಿ ಬಾಲಿವುಡ್‌ನ ಲೆಜೆಂಡರಿ ಆಕ್ಟರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಕ್ಕೆ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ."ಶೆಟ್ರೆ ನಮ್ಮ ಕಾಂತಾರ ನಮ್ಮ ಹೆಮ್ಮೆ" ಎಂದು ನೆಟ್ಟಿಗರೊಬ್ಬರು ಹೇಳಿದರೆ, ಇನ್ನೊಬ್ಬರು "ಇವರು ಹಾಟ್ ಸೀಟ್‌ನಲ್ಲಿ ಕೂತಿದ್ದು ನಮ್ಮಲ್ಲೇ ಯಾರೋ ಒಬ್ಬರಿ ಹೋಗಿದ್ದಾರೇನೋ ಎನ್ನುವಂತಹ ಭಾವನೆ ಕೊಟ್ಟಿದ್ದಾರೆ" ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ವಾವ್ ನಮ್ಮ ಲೆಜೆಂಡ್ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದೇ ಅದ್ಭುತ ಎಂದು ಹೇಳಿದ್ದಾರೆ.


Click it and Unblock the Notifications











