ಡಿಫರೆಂಟ್ ಸ್ಟೈಲ್‌ನಲ್ಲಿ ಕಥೆ ಹೇಳಲು ರೆಡಿಯಾಗಿದೆ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರತಂಡ
ವಿಭಿನ್ನ ಟೈಟಲ್, ಕಥೆ, ಚಿತ್ರಕತೆಯ ಜೊತೆಗೆ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲು ಸಜ್ಜಾಗಿದೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ. ಸಿನಿಮಾವೊಂದಕ್ಕೆ ಟೈಟಲ್ ಫಿಕ್ಸ್ ಆದ ದಿನದಿಂದ್ಲೇ ಕುತೂಹಲ ಹಾಗೂ ನಿರೀಕ್ಷೆಗಳು ಗರಿಗೆದರುತ್ತವೆ. ನಂತರ ಟೀಸರ್, ಟ್ರೈಲರ್, ಸಾಂಗ್ಸ್ ಎಲ್ಲವೂ ನಿರೀಕ್ಷೆ, ಕುತೂಹಲಗಳನ್ನು ಮತ್ತಷ್ಟು ಹೆಚ್ಚಿಸುತ್ತೆ. ಅದೇ ರೀತಿ ಸಿನಿಮಾಗೆ ಟೈಟಲ್ ಫಿಕ್ಸ್ ಆದ ದಿನದಿಂದ್ಲೇ ಪ್ರತೀ ಹಂತದಲ್ಲೂ ಕ್ಯೂರಿಯಾಸಿಟಿ ಹೆಚ್ಚಿಸುತ್ತಾ ಬರುತ್ತಿರುವ ಸಿನಿಮಾ ರಿಷಭ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ. ಇದೇ ತಿಂಗಳ 23ಕ್ಕೆ ಈ ಚಿತ್ರ ತೆರೆ ಕಾಣಲಿದೆ.
'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾಗೆ ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ತಮ್ಮ ಸಿನಿಮಾದ ಟ್ರೈಲರ್ ಅನ್ನು ರಿವೀಲ್ ಮಾಡಿದ್ದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಇಲ್ಲಿ ನಾಯಕ ಗಿರಿಗೆ ತಾನೊಬ್ಬ ಸಿನಿಮಾ ನಿರ್ದೇಶಕನಾಗ್ಬೇಕು ಅನ್ನೋ ಕನಸಿರುತ್ತೆ. ಯಾವುದೋ ಕಾರಣಕ್ಕೆ ಪೊಲೀಸ್ ಸ್ಟೇಶನ್ ಸೇರಿರುವ ನಾಯಕ ಗಿರಿ ಅಲ್ಲಿ ತನ್ನ ಟೀಮ್ ಜೊತೆಗೆ ಕುಳಿತು ಪೊಲೀಸ್ ಆಫೀಸರ್‌ಗೆ ಕಥೆ ಹೇಳ್ತಾನೆ. ಆದರೆ ಆ ಕಥೆ ಅವನ ರಿಯಲ್ ಲೈಫ್ ಸ್ಟೋರಿಯೋ ಅಥವಾ ತನ್ನ ಸಿನಿಮಾ ಸ್ಟೋರಿಯೋ ಅನ್ನೋ ಗೊಂದಲ ಮೂಡುತ್ತೆ. ಟ್ರೈಲರ್‌ನಲ್ಲಿ ಇಂತಹದ್ದೊಂದು ಕನ್ಫ್ಯೂಶನ್ ಕ್ರಿಯೇಟ್ ಮಾಡಿರೋ ನಿರ್ದೇಶಕರು ನಾಯಕನ ಕಥೆ ಏನು ಅನ್ನೋದನ್ನು ಸಖತ್ ಡಿಫರೆಂಟ್ ಆಗಿ ತಮ್ಮ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಪ್ರತಿಯೊಂದು ಪಾತ್ರಗಳಲ್ಲೂ ತಮ್ಮ ಸಹಜ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವ ರಿಷಭ್ ಇಲ್ಲೂ ಸಿನಿಮಾ ನಿರ್ದೇಶಕನಾಗಿ ಮತ್ತೆ ಮೋಡಿ ಮಾಡಲು ಬರ್ತಿದ್ದಾರೆ. ನಟಿಯರಾದ ತಪಸ್ವಿನಿ ಹಾಗೂ ರಚನಾ ಇಂದರ್ ಇಬ್ಬರೂ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ನಾಯಕನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ನಟ ಪ್ರಮೋದ್ ಪೊಲೀಸ್ ಆಫೀಸರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ಇನ್ನೂ ಹಲವಾರು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದ ಹಾಡುಗಳೆಲ್ಲವೂ ಈಗಾಗ್ಲೇ ಹೆಚ್ಚು ಜನಪ್ರಿಯತೆ ಗಳಿಸಿವೆ. ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸ್ಯಾಂಪಲ್ಸ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರ ಇನ್ನೇನು ಕೆಲ ದಿನಗಳಲ್ಲೇ ಬಿಡುಗಡೆಯಾಗಲಿದ್ದು, ಬಿಗ್ ಸ್ಕ್ರೀನ್‌ನಲ್ಲಿ ಗಿರಿಯ ಅಸಲಿ ಕಥೆ ಅನಾವರಣಗೊಳ್ಳಲಿದೆ.



Click it and Unblock the Notifications