'ಹರಿಕಥೆ ಅಲ್ಲ ಗಿರಿಕಥೆ'ಯ ಟ್ರೈಲರ್‌ನಲ್ಲಿ ರಿಷಭ್ ಶೆಟ್ಟಿ ಡೈರೆಕ್ಟರ್ ಗಿರಿ..!
ಸ್ಯಾಂಡಲ್ ವುಡ್ ಸದ್ದು ಮಾಡ್ತಿದ್ದ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಥಿಯೇಟರ್‌ಗೆ ಬರೋಕೆ ಸಜ್ಜಾಗಿದೆ. ಚಿತ್ರತಂಡವೂ ಪ್ರಚಾರದ ಭರಪೂರ ಸಿದ್ಧತೆಯಲ್ಲಿ ಮುಳುಗಿದೆ. ಈಗಾಗಲೇ ಗಾಂಧಿನಗರದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಈ ಚಿತ್ರದ ಟ್ರೈಲರ್ ಹೇಗಿರುತ್ತೆ ನೋಡಣ ಅಂತ ಕಾದಿದ್ದ ಸಿನಿಪ್ರಿಯರಿಗೆ ಚಿತ್ರತಂಡ ವಿಭಿನ್ನ ಹಾಗೂ ಬಂಪರ್ ಟ್ರೈಲರ್ ರಿಲೀಸ್ ಮಾಡಿದೆ. ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರ ನಾನಾ ದಿಕ್ಕುಗಳ ಮೂಲಕ ಚರ್ಚೆಗಳನ್ನು ಹುಟ್ಟುಹಾಕಿತ್ತು. ಈಗಲೂ ಸಹ ಗೊತ್ತಿದ್ದೂ ಗೊತ್ತಾಗದೇ ಒಂದು ವಿಭಿನ್ನ ಎಳೆಯ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಿತ್ರ ಇದೇ ತಿಂಗಳ 23ರಂದು ತೆರೆ ಕಾಣಲಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸಂದೇಶ್ ಅವರು ನಿರ್ಮಾಣ ಮಾಡಿರುವ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗ್ತಿದ್ದಂತೆ ಮೆಚ್ಚುಗೆಯೊಂದಿಗೆ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡುವ ಕಾತುರತೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲೇ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರ ಕಾಮಿಡಿಯೊಂದಿಗೆ ಮೂರು 'ಗಿರಿ'ಗಳ ಸುತ್ತ ನಡೆಯೋ ಕಥಾನಕ ಎಂಬಂಥಾ ಸಣ್ಣ ಸುಳಿವನ್ನಷ್ಟೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಇದೀಗ ಅದ್ಯಾವ ಗಿರಿಗಳು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಎಲ್ಲ ವಿಧದಲ್ಲಿಯೂ ನಿರೀಕ್ಷೆ ಮೂಡಿಸುವ ಪರಿಣಾಮಕಾರಿ ಟ್ರೈಲರ್ ಮೂಲಕ.
ಇಲ್ಲಿ ರಿಷಭ್ ಶೆಟ್ಟಿ ನಿರ್ದೇಶಕನಾಗೋ ಕನಸು ಹೊತ್ತು ತಿರುಗಾಡುವ ಡೈರೆಕ್ಟರ್ ಗಿರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ಸುಳಿವು ಸಿಕ್ಕಿದೆ. ಅದರ ಜೊತೆ ಜೊತೆಗೆ ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ ಮುಂತಾದವರ ಪಾತ್ರಗಳೂ ಕೂಡಾ ಸಣ್ಣ ಮಟ್ಟದಲ್ಲಿ ತಮ್ಮ ಪಾತ್ರದ ಪರಿಚಯ ಬಿಟ್ಟುಕೊಟ್ಟಿವೆ. ಆದರೆ, ಈ ಮೊದಲು ಚಿತ್ರದ ತುಣುಕುಗಳನ್ನು ನೋಡಿ ನಾವಂದುಕೊಂಡಂದ್ದಿಕ್ಕಿಂತ ಹೆಚ್ಚಿನದ್ದೇ ಕಥೆ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿದೆ ಅನ್ನೋ ನಂಬಿಕೆ ಟ್ರೈಲರ್‌ನಲ್ಲಿ ಕಂಡಿದೆ.

ಸಿನಿಮಾ ಕಥೆ ಇಟ್ಟುಕೊಂಡು ಒಂದೊಳ್ಳೆ ಸಿನೆಮಾ ಮಾಡ್ಬೇಕು ಎಂದು ಕನಸು ಹೊತ್ತು ಗಾಂಧಿನಗರದಲ್ಲಿ ಸುಳಿದಾಡುವವರ ಕಥೆಗಳು ಈಗಾಗಲೇ ಸಾಕಷ್ಟು ಕಾಣಿಸಿಕೊಂಡಿವೆ. ಆದರೆ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿರೋದು ಡಿಫರೆಂಟಾದ ಕಥೆ ಎಂಬುದನ್ನು ನಿರ್ದೇಶಕರಾದ ಕರಣ್ ಅನಂತ್ ಮತ್ತು ಅನಿರುದ್ದ್ ಮಹೇಶ್ ಟ್ರೈಲರ್‌ನಲ್ಲೇ ಹೇಳಹೊರಟಿದ್ದಾರೆ. ಇದೇ ಈ ಟ್ರೈಲರ್‌ನ ನಿಜವಾದ ಪ್ಲಸ್ ಪಾಯಿಂಟ್ ಅಂದ್ರೆ ತಪ್ಪಲ್ಲ.

ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ 'ಹರಿಕಥೆ ಅಲ್ಲ ಗಿರಿಕಥೆ'. ಓರ್ವ ನಟನಾಗಿ, ನಿರ್ದೇಶಕನಾಗಿ ಛಾಪು ಮೂಡಿಸಿರುವ ರಿಷಭ್ ಶೆಟ್ಟಿ ವೃತ್ತಿ ಬದುಕಿನ ಮಹತ್ವದ ಚಿತ್ರವಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಈಗಾಗಲೇ ತನ್ನ ಝಲಕ್ ತೋರಿಸಿದೆ. ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಹೊನ್ನವಳ್ಳಿ ಕೃಷ್ಣ ಮುಂತಾದವರ ತಾರಾಗಣದಿಂದ 'ಹರಿಕಥೆ ಅಲ್ಲ ಗಿರಿಕಥೆ' ಸಖತ್ ಆಗಿ ಮೂಡಿಬಂದಿರೋದರ ಜೊತೆಗೆ ಈ ಚಿತ್ರ ಕೇವಲ ಕಥೆಯ ದಿಕ್ಕಿನಿಂದ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆಯಂತೆ. ಅದರ ಲಕ್ಷಣಗಳು ಈ ಟ್ರೈಲರ್‌ನಲ್ಲೂ ಕಾಣಿಸಿವೆ. ಇನ್ನುಳಿದಂತೆ ರಿಲೀಸ್ ಆದ ಟ್ರೈಲರ್‌ಗೆ ಎಲ್ಲೆಡೆಯಿಂದ ವ್ಯಾಪಕ ಪ್ರತಿಕ್ರಿಯೆ ದೊರೆಯುತ್ತಿದ್ದು, ಸಿನಿಮಾ ಗೆಲ್ಲುವ ಎಲ್ಲಾ ಕುರುಹುಗಳು ನಿಖರವಾಗಿವೆ ಅಂದರೆ ತಪ್ಪಾಗೋದಿಲ್ಲ.


Click it and Unblock the Notifications











