'ಕಾಂತಾರ ಚಾಪ್ಟರ್ 1' 24 ಗಂಟೆಯಲ್ಲಿ ಬರೆದ ದಾಖಲೆಗಳೇನು? ಯಾವ್ಯಾವ ಭಾಷೆಯ ಟ್ರೈಲರ್‌ಗೆ ಎಷ್ಟೆಷ್ಟು ವೀವ್ಸ್?
ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1'. ರಿಷಬ್ ಶೆಟ್ಟಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟ 'ಕಾಂತಾರ'ದ ಬಳಿಕ ಅದ್ಧೂರಿಯಾಗಿ ರಿಲೀಸ್ ಆಗುತ್ತಿರುವ ಸಿನಿಮಾವಿದು. ಹೊಂಬಾಳೆ ಫಿಲ್ಮ್ಸ್ ಇದೂವರೆಗೂ ನಿರ್ಮಿಸಿದ ಸಿನಿಮಾಗಳಲ್ಲೇ ದುಬಾರಿ ಸಿನಿಮಾ. ಈ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ (ಸೆಪ್ಟೆಂಬರ್ 22) ರಿಲೀಸ್ ಆಗಿದೆ. ಐದು ಭಾಷೆಗಳಲ್ಲಿ ಟ್ರೈಲರ್ ಹೊರಬಿದ್ದಿದ್ದು ದಾಖಲೆ ಬರೆದಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್ 1' ಅನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ' ಎಲ್ಲರಿಗೂ ಚಿರಪರಿಚಿತವಾಗಿದ್ದರಿಂದ ಈ ಸಿನಿಮಾ ಬಗ್ಗೆ ಸಹಜವಾಗಿ ಕುತೂಹಲವಿತ್ತು. ಅಲ್ಲದೆ ಸಿನಿಮಾ ಬಿಡುಗಡೆಗೆ 10 ದಿನಗಳು ಇರುವಾಗಲೂ ತುಣುಕುಗಳನ್ನು ರಿವೀಲ್ ಮಾಡಿರಲಿಲ್ಲ. ನೇರವಾಗು ಟ್ರೈಲರ್ ಬಿಟ್ಟು ಜನರ ಗಮನ ಸೆಳೆದಿದೆ.

'ಕಾಂತಾರ' ಹೊಂಬಾಳೆ ಫಿಲ್ಮ್ಸ್‌ಗೆ ಹೊಸ ಇಮೇಜ್ ಕೊಟ್ಟಿತ್ತು. ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡಿತ್ತು. ಅದೇ ನಂಬಿಕೆಯ ಮೇಲೆ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವದ ಗಮನ ಸೆಳೆಯುವುದಕ್ಕೆ ಹೊರಟಿದ್ದಾರೆ. ಹೀಗಾಗಿ ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾ ರಿಲೀಸ್ ಆಗುವುದಕ್ಕೆ ಎದುರು ನೋಡುತ್ತಿದೆ. ಸದ್ಯ ಟ್ರೈಲರ್ 24 ಗಂಟೆಗಳಲ್ಲಿಯೇ ಹೊಸ ದಾಖಲೆಗಳನ್ನು ಬರೆದಿದೆ.
ನಿರೀಕ್ಷೆ ಹುಟ್ಟಾಕಿದ ಟ್ರೈಲರ್
'ಕಾಂತಾರ ಚಾಪ್ಟರ್ 1' ಟ್ರೈಲರ್ ರಿಲೀಸ್ ಅನ್ನೇ ಅದ್ಧೂರಿಯಾಗಿ ಮಾಡಲಾಗಿತ್ತು. ಕನ್ನಡದಲ್ಲಿ ಕನ್ನಡಿಗರು ಈ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದರು. ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಂತೆ ಸುಮಾರು 44,331 ಮಂದಿ 'ಕಾಂತಾರ ಚಾಪ್ಟರ್ 1' ಟ್ರೈಲರ್ ಅನ್ನು 280 ಸೆಕೆಂಡ್‌ಗಳಲ್ಲಿ ಲಾಂಚ್ ಮಾಡಿದ್ದರು. ಇನ್ನು ತೆಲುಗು ಟ್ರೈಲರ್ ಅನ್ನು ರೆಬೆಲ್‌ಸ್ಟಾರ್ ಪ್ರಭಾಸ್, ಹಿಂದಿ ಟ್ರೈಲರ್ ಅನ್ನು ಹೃತಿಕ್ ರೋಷನ್, ತಮಿಳು ಟ್ರೈಲರ್ ಅನ್ನು ಶಿವ ಕಾರ್ತಿಕೇಯನ್ ಹಾಗೂ ತಮಿಳು ಟ್ರೈಲರ್ ಅನ್ನು ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದರು. ಹೀಗಾಗಿ ವೇಗವಾಗಿ ದೇಶದ ಜನರಿಗೆ ಈ ಸಿನಿಮಾದ ಟ್ರೈಲರ್ ರೀಚ್ ಆಗಿದೆ.
ಟ್ರೈಲರ್ ಬರೆದ ದಾಖಲೆ ಏನು?
'ಕಾಂತಾರ ಚಾಪ್ಟರ್ 1' ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾದ ಟ್ರೈಲರ್ ಅನ್ನು ಒಟ್ಟಿಗೆ ಸೇರಿಸಿ 110 ಮಿಲಿಯನ್ ಡಿಜಿಟಲ್ ವೀವ್ಸ್ ಆಗಿದೆ. ಹಾಗೇ ಸುಮಾರು 34 ಲಕ್ಷ ಮಂದಿ ಟ್ರೈಲರ್‌ಗೆ ಲೈಕ್ಸ್ ಕೊಟ್ಟಿದ್ದಾರೆ. ಇದು ಇತ್ತೀಚೆಗೆ ಕನ್ನಡ ಸಿನಿಮಾದ ಟ್ರೈಲರ್‌ವೊಂದಕ್ಕೆ ಸಿಕ್ಕಿದ ಭಾರೀ ರೆಸ್ಪಾನ್ಸ್ ಎಂದು ಹೇಳಲಾಗಿದೆ.
ಯಾವ್ಯಾವ ಭಾಷೆಯ ಟ್ರೈಲರ್ ಎಷ್ಟು ವೀವ್ಸ್?
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಹಿರಿಯ ನಟ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಟ್ರೈಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಐದು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯಾವ್ಯಾವ ಭಾಷೆಯ ಟ್ರೈಲರ್‌ಗೆ ಎಷ್ಟೆಷ್ಟು ಸಿಕ್ಕಿದೆ ಅಂತ ನೋಡುವುದಾದರೇ,
ಕಾಂತಾರ- ಕನ್ನಡ 16 ಮಿಲಿಯನ್
ಕಾಂತಾರ- ತೆಲುಗು 14 ಮಿಲಿಯನ್
ಕಾಂತಾರ- ತಮಿಳು 10 ಮಿಲಿಯನ್
ಕಾಂತಾರ- ಮಲಯಾಳಂ 6.1 ಮಿಲಿಯನ್
ಕಾಂತಾರ- ಹಿಂದಿ 26 ಮಿಲಿಯನ್
'ಕಾಂತಾರ ಚಾಪ್ಟರ್ 1' ಟ್ರೈಲರ್ ರಿಲೀಸ್ ಆದ ಬಳಿಕ ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಡುಗಡೆಗೂ ಮುನ್ನ ಸಾಂಗ್ಸ್ ರಿಲೀಸ್ ಮಾಡಬಹುದಾ? ಇಲ್ಲವೇ ಇನ್ನೊಂದು ಟ್ರೈಲರ್ ರಿಲೀಸ್ ಆಗಬಹುದಾ? ಎಂಬ ನಿರೀಕ್ಷೆಯಲ್ಲಿ ಜನರು ಇದ್ದಾರೆ.


Click it and Unblock the Notifications











