'ಪೊನ್ನಿಯಿನ್ ಸೆಲ್ವನ್', 'ವಿಕ್ರಂ ವೇದ'ಕ್ಕಿಂತ 'ಕಾಂತಾರ'ಗೆ ಬಹುಪರಾಕ್: 7ನೇ ದಿನದ ಕಲೆಕ್ಷನ್ ಇಷ್ಟು?
ನವರಾತ್ರಿ ಸಂಭ್ರಮದಂದು ಐದು ಬಿಗ್ ಬಜೆಟ್ ಸಿನಿಮಾಗಳು ಅಖಾಡಕ್ಕೆ ಇಳಿದಿದ್ದವು. ಇವುಗಳಲ್ಲಿ ಕನ್ನಡದ ಎರಡು ಸಿನಿಮಾಗಳೂ ಪೈಪೋಟಿಗೆ ಬಿದ್ದಿದ್ದವು. ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಹಾಗೂ ನವರಸ ನಾಯಕ ಜಗ್ಗೇಶ್ ಸಿನಿಮಾ 'ತೋತಾಪುರಿ'.
ಮಣಿರತ್ನಂ ನಿರ್ದೇಶನ 'ಪೊನ್ನಿಯಿನ್ ಸೆಲ್ವನ್-1', ಹೃತಿಕ್ ರೋಷನ್, ಸೈಫ್ ಅಲಿಖಾನ್ ಸಿನಿಮಾ 'ವಿಕ್ರಂ ವೇದ' ಹಾಗೂ ಧನುಷ್ ಅಭಿನಯದ 'ನಾನೇ ವರುವೇನು' ಸಿನಿಮಾಗಳು ರಿಲೀಸ್ ಆಗಿದ್ದವು. ಈ ಐದು ಸಿನಿಮಾಗಳ ಪೈಕಿ ಕನ್ನಡಿಗರು 'ಕಾಂತಾರ'ಗೆ ಬಹುಪರಾಕ್ ಎಂದಿದ್ದಾರೆ.
'ಕಾಂತಾರ' ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಇದೂವರೆಗೂ ಜಗ್ಗಲೇ ಇಲ್ಲ. ನಾಡ ಹಬ್ಬ ಮುಗಿದರೂ 'ಕಾಂತಾರ' ಹವಾ ಇನ್ನೂ ಜೋರಾಗಿಯೇ ಇದೆ. ಅಷ್ಟಕ್ಕೂ ನಾಡದ ಸಂಭ್ರಮದಲ್ಲಿ 'ಕಾಂತಾರ' ಸಿನಿಮಾ ಗಳಿಸಿದ್ದೆಷ್ಟು? ಏಳು ದಿನ ಕಲೆಕ್ಷನ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

7ನೇ ದಿನ 'ಕಾಂತಾರ' ಎಷ್ಟು?
'ಕಾಂತಾರ' ಸಿನಿಮಾ ಥಿಯೇಟರ್ ಲಗ್ಗೆ ಇಟ್ಟಲ್ಲಿಂದ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಆರು ಹಾಗೂ ಏಳನೇ ದಿನ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಬ್ಯಾಕ್ ಟು ಬ್ಯಾಕ್ ರಜೆ 'ಕಾಂತಾರ' ಅಡ್ವಾಂಟೇಜ್ ಆಗಿದೆ. ಆರನೇ ದಿನ ಸಿನಿಮಾ ಸುಮಾರು 8.50 ಕೋಟಿ ರೂ. ಗಳಿಸಿದೆ ಎನ್ನಲಾಗಿತ್ತು. ಹಾಗೇ ಏಳನೇ ದಿನದ ಕಲೆಕ್ಷನ್ 6.30 ಕೋಟಿ ರೂ. ಎಂದು ವಿತರಕರ ವಲಯದಿಂದ ಹರಿದಾಡುತ್ತಿದೆ.

'ಕಾಂತಾರ' ವಾರದ ಕಲೆಕ್ಷನ್ ಎಷ್ಟು?
ನಾಡಹಬ್ಬಕ್ಕೆಂದೇ ರಿಲೀಸ್ ಆಗಿದ್ದ 'ಕಾಂತಾರ'ಗೆ ಮೌತ್ ಪಬ್ಲಿಸಿಟಿ ಸಿಕ್ಕಿತ್ತು. ಸಿನಿಮಾ ನೋಡಿ ಇನ್ನೂ ಆ ಹ್ಯಾಂಗೋವರ್‌ನಿಂದ ಇನ್ನೂ ಹೊರ ಬರೋಕೆ ಪ್ರೇಕ್ಷಕರು ಒದ್ದಾಡುತ್ತಿದ್ದಾರೆ. ಮತ್ತೆ ಕೆಲವರು ಈ ಸಿನಿಮಾವನ್ನು ಎರಡು ಮೂರು ಬಾರಿ ನೋಡಿ ಆನಂದಿಸಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸಿದೆ. ಕಳೆದ ಏಳು ದಿನಗಳಲ್ಲಿ 'ಕಾಂತಾರ' ಸುಮಾರು 46.80 ಕೋಟಿ ರೂ. ಗಳಿಕೆ ಕಂಡಿದ್ದು, ಇಂದು (ಆಕ್ಟೋಬರ್ 06) 50 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗಿದೆ.

'ಕಾಂತಾರ' ಶೋ ಹೆಚ್ಚಳ
'ಕಾಂತಾರ' ಸಿನಿಮಾಗೆ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಶೋಗಳ ಸಂಖ್ಯೆಯಲ್ಲೂ ಏರಿಕೆ ಕಂಡಿದೆ. ಬೆಂಗಳೂರು ಒಂದರಲ್ಲೇ ಸುಮಾರು 320 ಶೋಗಳ ಹಾಕಿದ್ದು, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲೂ ಶೋಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎನ್ನಲಾಗುತ್ತಿದೆ. ಹಾಗೇ ಈ ಸಿನಿಮಾವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡಲಾಗಿತ್ತು. ಅಲ್ಲೂ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಜೊತೆಗೆ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ ಎಂದು ಹೇಳಲಾಗುತ್ತಿದೆ.

'ಕಾಂತಾರ' ಬೇರೆ ಭಾಷೆಗಳಿಗೆ ಡಬ್
'ಕಾಂತಾರ' ಕರ್ನಾಟಕದಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಈ ಬಗ್ಗೆ ಈಗಾಗಲೇ ರಿಷಬ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿದ್ದಾರೆ. ಸದ್ಯ ಹೊಂಬಾಳೆ ಫಿಲ್ಮ್ಸ್ ಟೀಮ್ ಈ ಬಗ್ಗೆ ಅಧಿಕೃತವಾಗಿ ಹೇಳಿಕೆಗಳನ್ನು ರಿಲೀಸ್ ಮಾಡಬೇಕಿದೆ. ಶೀಘ್ರದಲ್ಲಿಯೇ ಹೊಂಬಾಳೆ ನಿರ್ಮಾಣ ಸಂಸ್ಥೆ ಕನ್ನಡಿಗರಿಗೆ ಖುಷಿ ವಿಷಯವನ್ನು ಹಂಚಿಕೊಳ್ಳಲಿದೆ. ಸದ್ಯ 'ಕಾಂತಾರ' ಅಬ್ಬರ ಬಾಕ್ಸಾಫೀಸ್‌ನಲ್ಲಿ ನಿಲ್ಲೋ ಹಾಗೆ ಕಾಣಿಸುತ್ತಿಲ್ಲ.


Click it and Unblock the Notifications











