ಬಾಲಿವುಡ್ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ; "ಯಶಸ್ಸು ತಾತ್ಕಾಲಿಕ, ಮಹಿಳೆಯ ಸೊಂಟ ಚಿವುಟುವುದು ಶಾಶ್ವತ" ಎಂದು ನೆಟ್ಟಿಗರ ಕಿಡಿ
'ಕಾಂತಾರ' ಸಿನಿಮಾದ ಅದ್ಭುತ ನಟನೆಗೆ ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಖುಷಿಯಲ್ಲಿ ಇರುವಾಗಲೇ ತಮ್ಮ ಸಂಸ್ಥೆಯಿಂದ ನಿರ್ಮಾಣ ಆಗಿರುವ 'ಲಾಫಿಂಗ್ ಬುದ್ಧ' ಸಿನಿಮಾದ ಬಿಡುಗಡೆಗೆ ಮುಂದಾಗಿದ್ದಾರೆ. ಹೀಗಾಗಿ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಮೆಟ್ರೋ ಸಾಗಾಗೆ ನೀಡಿದ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ರಿಷಬ್ ಶೆಟ್ಟಿ ಈ ಸಂದರ್ಶನದಲ್ಲಿ ಬಾಲಿವುಡ್ ಚಿತ್ರರಂಗದ ಬಗ್ಗೆ ಕಾಮೆಂಟ್ ಮಾಡಿದ್ದರು. ಬಾಲಿವುಡ್ ಮಂದಿ ಭಾರತವನ್ನು ಕೆಟ್ಟದಾಗಿ ತೋರಿಸಿದ್ದಾರೆಂದು ಹೇಳಿಕೆ ಕೊಟ್ಟಿದ್ದರು. ದಕ್ಷಿಣ ಭಾರತದವರು ರಿಷಬ್ ಶೆಟ್ಟಿಯ ಬೆಂಬಲಕ್ಕೆ ನಿಂತಿದ್ದರೆ, ಅದೇ ಇನ್ನೊಂದು ಕಡೆ ಬಾಲಿವುಡ್ ಸಿನಿಮಾ ಪ್ರಿಯರು ಕಾಂತಾರ ನಟನ ವಿರುದ್ಧ ತಿರುಗಿಬಿದ್ದಿದ್ದಾರೆ.

ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾ ಬಗ್ಗೆ ಹೇಳಿದ್ದೇನೆ? ಅದಕ್ಕೆ ಬಾಲಿವುಡ್ ಸಿನಿಮಾ ಪ್ರಿಯರ ಕಣ್ಣುಗಳು ಕೆಂಪಗಾಗಿದ್ದು ಯಾಕೆ? ಮತ್ತೆ ಉತ್ತರ ಭಾರತದ- ದಕ್ಷಿಣ ಭಾರತ ಅಂತ ಚರ್ಚೆಯಾಗುತ್ತಿರುವುದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.
ಮೆಟ್ರೋ ಸಾಗಾಗೆ ನೀಡಿದ ಸಂದರ್ಶನದನಲ್ಲಿ ರಿಷಬ್ ಶೆಟ್ಟಿ ಬಾಲಿವುಡ್ ಭಾರತವನ್ನು ಕೆಟ್ಟಾಗಿ ತೋರಿಸುತ್ತಿದೆ ಎಂದು ಹೇಳಿದ್ದರು. "ಬಾಲಿವುಡ್ ಸಿನಿಮಾಗಳಲ್ಲಿ ಭಾರತದ ಬಗ್ಗೆ ತುಂಬಾ ಕೆಟ್ಟದಾಗಿ ತೋರಿಸಿ, ಆರ್ಟ್ ಫಿಲ್ಮ್ಸ್ ಎಂದು ಹೇಳಿ ಹೊರ ದೇಶಗಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಅವಾರ್ಡ್ ಗೆದ್ದು ರೆಡ್ ಕಾರ್ಪೆಟ್‌ಗೆ ಹೋಗಿ ಬಂದಿರುವುದು ನೋಡಿದ್ದೇನೆ. ಆದರೆ, ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ. ನನ್ನ ಭಾಷೆ ನನ್ನ ಹೆಮ್ಮೆ. ಹಾಗಾಗಿ ನಾನ್ಯಾಕೆ ಅದನ್ನು ಪಾಸಿಟಿವ್ ಆಗಿ ತೋರಿಸಬಾರದು. ನಮ್ಮಲ್ಲಿರುವ ವಿಚಾರಗಳನ್ನು ಪಾಸಿಟಿವ್ ಆಗಿಯೇ ತೋರಿಸಬಹುದಲ್ಲ ಎಂದುಕೊಳ್ಳುತ್ತೇನೆ" ಎಂದು ಹೇಳಿಕೆ ನೀಡಿದ್ದರು.
'ಕಾಂತಾರ' ಸೀನ್ ತೋರಿಸಿ ಟ್ರೋಲ್
ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ರಿಷಬ್ ನಟಿಸಿದ 'ಕಾಂತಾರ' ಸಿನಿಮಾ ಸೀನ್ ಅನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ನೆಟ್ಟಿಗರೊಬ್ಬರು ರಿಷಬ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದು, "ಯಶಸ್ಸು ಅನ್ನೋದು ತಾತ್ಕಾಲಿಕ ಆದರೆ, ಮಹಿಳೆಯ ಸೊಂಟ ಚಿವುಟುವುದು ಹಾಗೂ ಬಾಲಿವುಡ್ ಬಗ್ಗೆ ಕೆಟ್ಟದಾಗಿ ಮಾತಾಡುವುದು ಶಾಶ್ವತ" ಎಂದು ರಿಷಬ್ ಶೆಟ್ಟಿಯ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.
ದಕ್ಷಿಣ ಭಾರತದ ತಾರೆಯರು ಕಪಟಿಗಳು
ರಿಷಬ್ ಶೆಟ್ಟಿಯ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನೆಟ್ಟಿಗರು ದಕ್ಷಿಣ ಭಾರತದ ತಾರೆಯರನ್ನು ವಿರೋಧಿಸುವುದಕ್ಕೆ ಶುರು ಮಾಡಿದ್ದಾರೆ. "ಇದೇ ಕಾರಣಕ್ಕೆ ನಾನು ದಕ್ಷಿಣ ಭಾರತದ ಬಹುತೇಕ ಸ್ಟಾರ್‌ಗಳನ್ನು ಕಪಟಿಗಳು ಎಂದು ಕರೆಯುತ್ತೇನೆ. ಅವರಿಗೆ ಅವರ ಭಾಷೆಯ ಬಗ್ಗೆ ಮಾತ್ರ ಕಾಳಜಿ" ಎಂದು ಮತ್ತೊಬ್ಬರ ನೆಟ್ಟಿಗ ದಕ್ಷಿಣ ಭಾರತದ ತಾರೆಯರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಮರಾಠಿ, ಪಂಜಾಬಿ ಚಿತ್ರರಂಗವನ್ನು ಹಾಳು ಮಾಡಿದ್ದೀರಿ
ಆದರೆ, ಈ ಕಾಮೆಂಟ್ ದಕ್ಷಿಣ ಭಾರತದವರಿಗೆ ಇಷ್ಟ ಆಗಿಲ್ಲ. ತಿರುಗೇಟು ಕೊಡುವುದಕ್ಕೆ ಮುಂದಾಗಿದ್ದಾರೆ. ಬಾಲಿವುಡ್ ಎಷ್ಟು ಭಾಷೆಯ ಸಿನಿಮಾರಂಗವನ್ನು ನಾಶ ಮಾಡಿತು ಅನ್ನೋದನ್ನು ಪಟ್ಟಿ ಮಾಡಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. " ನಾವು ನಿಮ್ಮನ್ನು ನಮ್ಮ ಚಿತ್ರರಂಗ ಹಾಳು ಮಾಡುವುದಕ್ಕೆ ಬಿಡುವುದಿಲ್ಲ. ಮರಾಠಿ, ಬಂಗಾಳಿ, ಭೋಜ್‌ಪುರಿ ಹಾಗೂ ಪಂಜಾಬಿ ಸಿನಿಮಾರಂಗವನ್ನು ಈಗಾಗಲೇ ಹಾಳು ಮಾಡಿದ್ದೀರಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ರಿಷಬ್ ಶೆಟ್ಟಿ ಕೊಟ್ಟಿರುವ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುವಂತೆ ಮಾಡುತ್ತಿದೆ. ಹಲವು ಮಂದಿ ರಿಷಬ್ ಶೆಟ್ಟಿಯ ಬೆಂಬಲಕ್ಕೆ ಬಂದು ನಿಂತಿದ್ದರೆ, ಮತ್ತೆ ಕೆಲವರು ರಿಷಬ್ ಶೆಟ್ಟಿಯ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಈ ವಿಷಯ ಇನ್ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ.


Click it and Unblock the Notifications











