"ಇತ್ತೀಚೆಗೆ ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರ ಸಂಖ್ಯೆ ಹೆಚ್ಚಾಗಿದೆ"; ರಿಷಬ್ ಶೆಟ್ಟಿ ಹೀಗ್ಯಾಕೆ ಅಂದ್ರು?
ರಿಷಬ್ ಶೆಟ್ಟಿ ಸದ್ಯ 'ಕಾಂತಾರ: ಚಾಪ್ಟರ್ 1'ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆನೇ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ನಿರ್ಮಿಸಿರುವ 'ಶಿವಮ್ಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಿಷಬ್ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಕಂಟೆಂಟ್ ಬೇಸ್ಡ್ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ರಿಷಬ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆ 'ರಿಷಬ್ ಶೆಟ್ಟಿ ಫಿಲ್ಮ್ಸ್' ಮೂಲಕ 'ಶಿವಮ್ಮ' ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಇಷ್ಟು ದಿನ ವಿಶ್ವದ ಬೇರೆ ಭಾಗದಲ್ಲಿ ನಡೆದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಎಲ್ಲೆಲ್ಲಿ 'ಶಿವಮ್ಮ' ಭಾಗವಹಿಸಿತ್ತೋ ಆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ 'ಶಿವಮ್ಮ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಜೈ ಶಂಕರ್ ಆರ್ಯರ್ ನಿರ್ದೇಶಿಸಿದ ಸಿನಿಮಾ ಉತ್ತರ ಕರ್ನಾಟಕದ ಕಥೆಯನ್ನು ಹೊತ್ತು ತಂದಿದೆ. ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆಯೇ ಈ ಸಿನಿಮಾದ ಜೀವಾಳ. ಅಷ್ಟೇ ಅಲ್ಲದೆ ಆ ಊರಿನ ಜನರನ್ನು ಬಳಸಿಕೊಂಡು ಈ ಸಿನಿಮಾವನ್ನು ಮಾಡಿರುವುದು ವಿಶೇಷ. ಇನ್ನೇನು ಸಿನಿಮಾ ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಜನರು ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಯಾಕೆ ಬರುತ್ತಿಲ್ಲ ಅನ್ನೋದನ್ನು ಹೇಳಿದ್ದಾರೆ.
ಶಿವಮ್ಮ ಇದೇ ಜೂನ್ 14ರಂದು ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಕಮರ್ಷಿಯಲ್ ಸಿನಿಮಾ ನೋಡುವುದಕ್ಕೆ ಜನರು ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಗಿದೆ. ಅದೇ ಇಂತಹ ಎಕ್ಸ್‌ಪೆರಿಮೆಂಟ್ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಕೊಡುತ್ತಾರೋ ಆ ಕುತೂಹಲವಂತೂ ಇದೆ. ಇತ್ತ ಜನರು ಥಿಯೇಟರ್‌ಗೆ ಬೇರೆ ಬರುತ್ತಿಲ್ಲ. ಸಿನಿಮಾ ನೋಡುವವರಿಗಿಂತ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆಲ್ಲ ಕಾರಣ ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ.
"ಶಿವಮ್ಮ ಸಿನಿಮಾಗೆ ತುಂಬಾ ದೊಡ್ಡ ಶೋ ಇರುವುದಿಲ್ಲ. ಕೆಲವೇ ಕೆಲವು ಶೋಗಳನ್ನು ಮಾತ್ರ ಹಾಕುತ್ತಿದ್ದೇವೆ. ನಿಮಗೆ ಗೊತ್ತು ಇವತ್ತು ಏನಾಗಿದೆ ಅಂತ. ಏನು ಹೇಳಬಹುದೋ ಬೇಡವೋ ಗೊತ್ತಿಲ್ಲ. ಇತ್ತೀಚೆಗೆ ಸಿನಿಮಾ ನೋಡುವವರಿಗಿಂತ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವಾರಕ್ಕೆ ಏಳು ಸಿನಿಮಾ, ಎಂಟು ಸಿನಿಮಾ ರಿಲೀಸ್ ಆದಾಗ ಜನರಿಗೆ ಯಾವುದು ಇಂಟ್ರೆಸ್ಟಿಂಗ್ ಅನಿಸುತ್ತೆ ಅದನ್ನು ನೋಡುತ್ತಾರೆ." ಎಂದು ರಿಷಬ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ಜನರು ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಶಾರ್ಟ್ ಫಿಲ್ಮ್, ರೀಲ್ಸ್ ಅಂತ ಮುಳುಗಿ ಹೋಗಿದ್ದು, ಅದನ್ನು ಮೀರುವ ಸಿನಿಮಾ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಇತ್ತು ಶಾರ್ಟ್ ಫಿಲ್ಮ್ ಎಷ್ಟು ನಡೆಯುತ್ತೆ. ರೀಲ್ಸ್ ಎಷ್ಟು ನಡೆಯುತ್ತೆ ಅನ್ನೋದು ಗೊತ್ತಿದೆ. ಅದಕ್ಕೆ ಅವರನ್ನು ಮೀರಿ ಸಿನಿಮಾ ಮಾಡಬೇಕು. ಹಾಗಾಗಿ ಪರಿಸ್ಥಿತಿ ಏನಾಗಿದೆ ಅಂದರೆ, ಕೆಲವು ಶೋಗಳನ್ನು ಕೊಡ್ತಾರೆ. ಅದು ಫುಲ್ ಆದರೆ, ಮುಂದಿನ ಶೋಗಳು ಸಿಗುತ್ತವೆ." ಎಂದಿದ್ದಾರೆ.
ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ಬರೀ ಶೆಟ್ಟರೇ ಇರುತ್ತಾರೆ ಅನ್ನೋ ಆರೋಪವಿತ್ತು. ಅದಕ್ಕೆಲ್ಲ 'ಶಿವಮ್ಮ'ನೇ ಉತ್ತರ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. "ಬರೀ ಮಂಗಳೂರಿಂದೇ ಮಾಡುತ್ತಾರೆ ಅಂತ ನಮಗೆ ಹೇಳುತ್ತಿದ್ದರು. ಬರೀ ಶೆಟ್ರುಗಳೇ ಇರುತ್ತಾರೆ ಅಂತ. ಶರಣಂ ಚೆಟ್ಟಿ ಶೆಟ್ಟಿ ಅಲ್ಲ. ಆಮೇಲೆ ಅದು ಕನ್ಫ್ಯೂಸ್ ಆಗಿಬಿಟ್ಟರೆ ಕಷ್ಟ ಅಂತ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲಿ ಅಲ್ಲಿನ ಕಥೆ ಹೇಳಿದ್ದರಿಂದ, ಅಲ್ಲಿ ತುಂಬಾನೇ ಫೋಕಸ್ ಮಾಡಿ ರಿಲೀಸ್‌ಗೆ ಪ್ಲ್ಯಾನ್ ಮಾಡುತ್ತಿದ್ದೇವೆ. ಕೆಆರ್‌ಜಿ ಸ್ಟುಡಿಯೋಸ್ ಅವರು ಈ ಸಿನಿಮಾವನ್ನು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ." ಎಂದು ಶಿವಮ್ಮ ಸಿನಿಮಾ ನಿರ್ಮಾಪಕ ರಿಷಬ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











