30 ವರ್ಷಗಳ ಹಿಂದೆ ಮಿಸ್ ಆದ ವಿಮಾನ ಹಿಂತಿರುಗಿ ಬಂದಿದ್ದೇಗೆ? 'ರುದ್ರ ಗರುಡ ಪುರಾಣ'ಕ್ಕೆ ಈ ಘಟನೆ ಸ್ಪೂರ್ತಿ ಹೇಗೆ?
ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟ ರಿಷಿ. ಈಗಾಗಲೇ 'ಅಪರೇಷನ್ ಅಲಮೇಲಮ್ಮ' ಹಾಗೂ 'ಕವಲುದಾರಿ'ಯಂತಹ ಜನಪ್ರಿಯ ಸಿನಿಮಾಗಳನ್ನು ಕೊಟ್ಟಿರುವ ನಟ. ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಡುತ್ತಿರುವ ಈ ನಟ ಮತ್ತೊಂದು ಡಿಫ್ರೆಂಟ್ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದ್ದಾರೆ.
ನಟ ರಿಷಿಯ ಹೊಸ ಸಿನಿಮಾ 'ರುದ್ರ ಗರುಡ ಪುರಾಣ' ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಇದೇ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿದೆ. ರಿಷಿ ವೃತ್ತಿ ಬದುಕಿನ ನಿರೀಕ್ಷಿತ ಸಿನಿಮಾಗಳಲ್ಲಿ ಇದು ಕೂಡ ಒಂದು. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

'ರುದ್ರ ಗರುಡ ಪುರಾಣ' ಸಿನಿಮಾದ ಟೀಸರ್ ಈ ಬಗ್ಗೆ ಸದ್ದು ಮಾಡುವುದಕ್ಕೆ ಕಾರಣ ಕಥೆ. ಎರಡು ಕಥೆಗಳನ್ನು ಪ್ರೇರಣೆಯಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲೂ 1955ರಲ್ಲಿ ನ್ಯೂಯಾರ್ಕ್‌ನಿಂದ ಮಿಯಾನ್‌ಗೆ ಹೊರಟಿದ್ದ ವಿಮಾನವೊಂದು ಕಾಣೆಯಾಗಿದ್ದು, 30 ವರ್ಷಗಳ ಬಳಿಕ ಹಿಂತಿರುಗಿತ್ತು. ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ನಿರ್ದೇಶಕ ನಂದೀಶ್ ಕಥೆ ಹೆಣೆದಿದ್ದಾರೆ.
ಇತ್ತೀಚೆಗೆ 'ರುದ್ರ ಗರುಡ ಪುರಾಣ' ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಈ ಸಿನಿಮಾವನ್ನು ಕಾರಣದ ಎರಡು ಪ್ರಮುಖ ಘಟನೆಗಳ್ಯಾವುವು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "914 ವಿಮಾನ 1955 ರಲ್ಲಿ ನ್ಯೂಯಾರ್ಕ್‌ನಿಂದ ಮಿಯಾನ್ ಸಿಟಿಗೆ ಹೊರಟಿದ್ದ ವಿಮಾನ ಮಿಸ್ ಆಗುತ್ತೆ. ಕಾಣೆಯಾದ ಬಳಿಕ ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ ಬಳಿಕ ಅಂದರೆ 1985 ರಲ್ಲಿ ಮತ್ತೆ ಆ ವಿಮಾನ ಹಿಂತಿರುಗಿ ಬರುತ್ತೆ. ಅದು ಹೇಗೆ?" ಅಂತ ಮೊದಲನೇ ಘಟನೆಯನ್ನು ಹೇಳಿ ಕುತೂಹಲ ಹೆಚ್ಚಿಸಿದ್ದರು.
ಹಾಗೇ 'ರುದ್ರ ಗರುಡ ಪುರಾಣ' ಸಿನಿಮಾದ ಕಥೆಗೆ ಕಾರಣವಾದ ಎರಡನೇ ಘಟನೆಯನ್ನು ರಿವೀಲ್ ಮಾಡಿದ್ದಾರೆ. "ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅನ್ನೋ ಆಸೆಯಿಂದ ತನ್ನ ಪಕ್ಕದ ದೇಶದ ಮೇಲೆ ಯುದ್ದ ಮಾಡಿ ಲಕ್ಷಾಂತರ ಸೈನಿಕರನ್ನು ಕೊಲ್ಲುತ್ತಾನೆ. ಬಳಿಕ ಯುದ್ಧ ಮುಗಿದ ಮೇಲೆ ರಣರಂಗಕ್ಕೆ ಹೋಗುತ್ತಾನೆ. ಅಲ್ಲಿ ಹೆಣಗಳ ರಾಶಿಯೇ ಬಿದ್ದಿರುತ್ತೆ. ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ವ್ಯಕ್ತಿಯೊಬ್ಬ ತಿನ್ನುತ್ತಿರುತ್ತಾನೆ. ಆ ವೇಳೆ ಅಲ್ಲಿಗೆ ಬಂದ ರಾಜ ಆ ಘಟನೆಯನ್ನು ನೋಡುತ್ತಾನೆ. ಆಗ ಆ ವ್ಯಕ್ತಿ ಕ್ಷಮಿಸು ರಾಜ ನಾನು ನಿನ್ನ ಆಹಾರವನ್ನು ನಾನು ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ರಾಜ ನಾನು ನಿನ್ನ ಹಾಗೆ ನರಭಕ್ಷಕ ಅಲ್ಲ ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ ಇಷ್ಟು ಜನರನ್ನು ಏಕೆ ಸಾಯಿಸಿದ್ದೀಯಾ ಎಂದು ರಾಜನನ್ನು ಕೇಳುತ್ತಾನೆ? ಈ ಎರಡು ಉಪಕಥೆಗಳೇ ನಮ್ಮ ಸಿನಿಮಾದ ಕಥೆಗೆ ಸ್ಪೂರ್ತಿ." ಎಂದು ನಂದೀಶ್ ಹೇಳಿದ್ದಾರೆ.

ಈ ಕಾರಣಕ್ಕೆ 'ರುದ್ರ ಗರುಡ ಪುರಾಣ' ಸಿನಿಮಾ ಕುತೂಹಲವನ್ನು ಕೆರಳಿಸಿದೆ. ಇಲ್ಲಿ ನಾಯಕ ರಿಷಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹೇಮಂತ್ ಕುಮಾರ್ ನಿರ್ದೇಶಿಸಿದ್ದ 'ಕವಲುದಾರಿ' ಸಿನಿಮಾದಲ್ಲಿಯೂ ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಮತ್ತೆ ಖಾಕಿ ಧರಿಸಿದ್ದು, ರುದ್ರ ಪಾತ್ರದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ.
'ಕವಲುದಾರಿ'ಯ ರಿಷಿ ನಾಯಕನಾಗಿ ಕಾಣಿಸಿಕೊಂಡಿದ್ದರೆ, ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ನಟಿ ಪ್ರಿಯಾಂಕಾಗೆ ಇದು ಎರಡನೇ ಸಿನಿಮಾ. ಇವರೊಂದಿಗೆ ಹಿರಿಯ ನಟ ವಿನೋದ್ ಆಳ್ವಾ, ಕೆ.ಎಸ್ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್ ಪೇಟೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ರುದ್ರ ಗರುಡ ಪುರಾಣ' ಸಿನಿಮಾದ ಟೀಸರ್ ಸದ್ಯ ಕುತೂಹಲವನ್ನು ಕೆರಳಿಸಿದೆ. ಇದೊಂದು ಪಕ್ಕಾ ಆಕ್ಷನ್ ಕಮ್ ಸಸ್ಪೆನ್ಸ್ ಸಿನಿಮಾ ಅನ್ನೋದು ಟೀಸರ್ ನೋಡಿದರೆ ಅರಿವಿಗೆ ಬರುತ್ತೆ. ಸದ್ಯಕ್ಕೆ ಟೀಸರ್ ಅಂತೂ ಕುತೂಹಲ ಹುಟ್ಟಿಸಿದೆ. ಇನ್ನು ಸಿನಿಮಾ ಕೂಡ ಅಷ್ಟೇ ಕುತೂಹಲವನ್ನು ಕೆರಳಿಸುತ್ತಾ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಂಡಿದೆ.


Click it and Unblock the Notifications











