ಕರಾವಳಿ ಭಾಗದ ಪ್ರೇಮಕಥೆ 'ಮಾರ್ನಮಿ'; ಚೈತ್ರಾ ಆಚಾರ್- ರಿತ್ವಿಕ್ ಸಿನಿಮಾ ಟೀಸರ್ ಬೆಂಕಿ
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ರಿತ್ವಿಕ್ ಮಠದ್. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ರಗಡ್ ಅವತಾರವೆತ್ತಿ ಮತ್ತೆ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಈ ಹಿಂದೆ 'ಗಿಫ್ಟ್ ಬಾಕ್ಸ್' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಳಿಕ ಒಂದಿಷ್ಟು ಸಮಯ ತೆಗೆದುಕೊಂಡು ಮತ್ತೊಂದು ಹೊಸ ಪ್ರಾಜೆಕ್ಟ್‌ನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ.
ರಿತ್ವಿಕ್ ಮಠದ್ ನಟಿಸಿರುವ ಆ ಸಿನಿಮಾದ ಹೆಸರು 'ಮಾರ್ನಮಿ'. ಈಗಾಗಲೇ ಈ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಇದರ ಜೊತೆಗೆ ಇತ್ತೀಚೆಗೆ ರಿತ್ವಿಕ್ ಮಠದ್ ಬರ್ತ್‌ಡೇಯನ್ನು
ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಪಾತ್ರವನ್ನು ಫೋಕಸ್ ಮಾಡುವ ಮತ್ತೊಂದು ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಈ ಇಂಟ್ರೂಡಕ್ಷನ್ ಟೀಸರ್‌ನಲ್ಲಿ ರಿತ್ವಿಕ್ ಸಖತ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಚರಣ್ ರಾಜ್ ಹಿನ್ನೆಲೆ ಸಂಗೀತ ನೀಡಿರುವ 'ಮಾರ್ನಾಮಿ' ಸಿನಿಮಾ ಟೀಸರ್ ಪ್ರಾಮಿಸಿಂಗ್ ಆಗಿದೆ. ಇತ್ತೀಚೆಗೆ ಈ ಟೀಸರ್ ಅನ್ನು ಕನ್ನಡ ಚಿತ್ರರಂಗದ ಗಣ್ಯರು ರಿಲೀಸ್ ಮಾಡಿದ್ದಾರೆ. ನಟ ರಿಷಿ, ನಿರ್ದೇಶಕ ಸಿಂಪಲ್ ಸುನಿ, ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಸ್ನೇಹಿತ ರಿತ್ವಿಕ್‌ಗೆ ಶುಭ ಕೋರಿದ್ದಾರೆ. ಟೀಸರ್ ರಿಲೀಸ್ ಬಗ್ಗೆ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ, ರಿತ್ವಿಕ್ ಮಠದ್ ಜೊತೆಗೆ ಚೈತ್ರಾ ಜೆ ಆಚಾರ್ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
"ಇವತ್ತು ಈ ಜರ್ನಿ ನೋಡಿದಾಗ ಹೆಮ್ಮೆ ಅನಿಸುತ್ತೆ. ಈ ಪಯಣವನ್ನು ಇಷ್ಟು ಅದ್ಭುತವಾಗಿ ಮುಗಿಸುತ್ತೇವೆಂದು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದ್ದು ನಿಶಾಂತ್ ಸರ್ ಹಾಗೂ ಶಿಲ್ಪಾ ಮೇಡಂ ಅವರಿಂದ. ಈ ರೀತಿಯ ನಿರ್ಮಾಪಕರು ಇಂಡಸ್ಟ್ರಿಗೆ ಹಾಗೂ ಹೊಸಬರಿಗೆ ಬೇಕು. ಹೊಸಬರಿಗೆ ದೊಡ್ಡು ಹಾಕಿ ಅದ್ಭುತ ಪ್ರೊಡಕ್ಟ್ ಹೊರ ತೆಗೆಯುವುದು ಅಷ್ಟು ಸುಲಭವಲ್ಲ. ಇದು ನನಗೆ ಸಿಕ್ಕಿರುವ ಅದ್ಭುತವಾದ ಬರ್ತಡೇ ಗಿಫ್ಟ್. ನಿರ್ದೇಶಕ ಶೆಟ್ರು ನನಗೆ ತಮ್ಮನ ರೀತಿ, ಅವರು ನಿರ್ದೇಶಕರಾಗಿರುವುದು, ಅದರಲ್ಲಿ ನಾನು ನಟಿಸುತ್ತಿರುವುದು ತುಂಬಾ ಖುಷಿಯ ವಿಷಯ" ಎಂದು'ಮಾರ್ನಮಿ' ಟೀಸರ್ ಬಳಿಕ ನಾಯಕ ರಿತ್ವಿಕ್ ಮಠದ್ ಹೇಳಿದ್ದಾರೆ.
ಹಾಗೇ ಸಿನಿಮಾ ನಾಯಕಿ ಚೈತ್ರಾ ಜೆ ಆಚಾರ್ ಸಿನಿಮಾ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. "ರಿಶಿತ್ ಶೆಟ್ಟಿ ಸರ್ ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಹೇಳಿದಂತೆಯೇ ಶೂಟಿಂಗ್ ಕೂಡ ಮಾಡಿದ್ದಾರೆ. ಇಡೀ ಪ್ರೊಡಕ್ಷನ್ ನನಗೆ ತುಂಬಾ ಬೆಂಬಲವಾಗಿ ನಿಂತಿದೆ. ಈ ಚಿತ್ರದಲ್ಲಿ ನಾನೇ ನಟಿಸಬೇಕು ಅಂತ ಬರೆದಿತ್ತು ಅನಿಸುತ್ತೆ. ಹೀಗಾಗಿ ಈ ಸಿನಿಮಾ ನನಗೆ ಸಿಕ್ಕಿದೆ. ನಾನು ಈ ಸಿನಿಮಾಗೆ ಬಂದ್ಮೇಲೆ ಮಂಗಳೂರಿನಲ್ಲಿ ಎಂತೆಂಥ ಕಲಾವಿದರು ಇದ್ದಾರೆ ಅನ್ನೋದು ಗೊತ್ತಾಯ್ತು. ಶಿವ ಸರ್ ಕೆಲಸ ಇಲ್ಲಿ ವಿಭಿನ್ನವಾಗಿದೆ. ರಿತ್ವಿಕ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ನನಗೆ ಖುಷಿ ಕೊಟ್ಟಿದೆ" ಎಂದು ಚೈತ್ರಾ ಹೇಳಿದ್ದಾರೆ.

"ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರಲಿದೆ. ಒಳ್ಳೆ ಸ್ಟಾರ್ ಕಾಸ್ಟ್ ಜೊತೆ ಅದ್ಭುತ ಟೆಕ್ನಿಷಿಯನ್ ಟೀಂ ಸಿಕ್ಕಿದೆ. ನನಗೆ ನನ್ನ ಪತ್ನಿ ಸಾಥ್ ಕೊಟ್ಟರು. ಹೀಗೆ ಸಿನಿಮಾ ಜರ್ನಿ ಶುರುವಾಯ್ತು. ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಮ್ಯೂಸಿಕ್ ವರ್ಕ್ ನಡೆಯುತ್ತಿದೆ. ಸೆಪ್ಟಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆಯಿದೆ" ಎಂದು ನಿರ್ಮಾಪಕ ನಿಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ.
"ಮಾರ್ನಮಿಯ ಮೊದಲೆರಡು ಟೀಸರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟೀಸರ್‌ಗೂ ಅದೇ ರೀತಿ ಸಪೋರ್ಟ್ ಇರಲಿ. ಎಲ್ಲರೂ ಸಿನಿಮಾ ಇಷ್ಟ ಪಡುತ್ತಾರೆ ಎಂದುಕೊಂಡಿದ್ದೇನೆ. ನನ್ನ ಸ್ನೇಹಿತ ಸುಧಿ ಬರೆದ ಕಥೆ ಇದು. ಆ ಕಥೆ ರಿತ್ವಿಕ್‌ಗೆ ಹೇಳಿದೆ. ಅಲ್ಲಿಂದ ಜರ್ನಿ ಶುರುವಾಯ್ತು" ಎಂದು ನಿರ್ದೇಶಕ ರಿಶಿತ್ ಶೆಟ್ಟಿ ಹೇಳಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಿಗೆ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ಈ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.
ಇನ್ನು ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತಿಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.


Click it and Unblock the Notifications











