"ಸಿನಿಮಾ ನಟರು ಸ್ಟಾರ್ ಆದ್ಮೇಲೆ ಬೇಕಾದಷ್ಟು ಮಂದಿ ಅನ್ನದಾತರು ಸಿಗ್ತಾರೆ"; ದರ್ಶನ್‌ಗೆ ಟಾಂಗ್ ಕೊಟ್ಟರೇ ಉಮಾಪತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ದಾರೆ. ಇನ್ನೊಂದು ಕಡೆ ಉಮಾಪತಿ ಶ್ರೀನಿವಾಸ್ ಗೌಡ ತಮ್ಮ ಸಿನಿಮಾ ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ದೋಸ್ತ್‌ಗಳಾಗಿದ್ದವರು. ಇಂದು ಹಾವು-ಮುಂಗುಸಿಯಂತಾಗಿದ್ದಾರೆ. ನೇರಾ ನೇರ ಆರೋಪ-ಪ್ರತ್ಯಾರೋಪ ಮಾಡುತ್ತಾ ಕಿತ್ತಾಡಿಕೊಂಡಿದ್ದರು. ಇಬ್ಬರ ನಡುವಿನ ಆ ಅಸಮಾಧಾನ ಇಂದಿಗೂ ಮುಂದುವರೆದಿದೆ.
ಅದರಲ್ಲೂ ದರ್ಶನ್ ಜೈಲು ಸೇರಿದ ಮೇಲೆ ನಿರ್ಮಾಪಕ ಉಮಾಪತಿ ಪರೋಕ್ಷವಾಗಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗ ತಮ್ಮ ಸಿನಿಮಾ 'ಒಂದಲ್ಲಾ ಎರಡಲ್ಲಾ' ರಾಜ್ಯ ಪ್ರಶಸ್ತಿ ಪಡೆದ ಸಂದರ್ಭದಲ್ಲೂ ಉಮಾಪತಿ ಆಡಿದ ಮಾತುಗಳು ದರ್ಶನ್ ವಿರುದ್ಧವೇ ಆಡಿದಂತೆ ಇತ್ತು. "ಸಿನಿಮಾ ನಟರು ಸ್ಟಾರ್ ಆದ್ಮೇಲೆ ಬೇಕಾದಷ್ಟು ಮಂದಿ ಅನ್ನದಾತರು ಸಿಗ್ತಾರೆ", "ಸ್ಟಾರ್ ಮಾಡೋದು ನಿರ್ದೇಶಕರು ಹಾಗೂ ನಿರ್ಮಾಪಕರು" ಎಂದಿದ್ದು ದರ್ಶನ್ ಅವರನ್ನು ಗುರಿಯಾಗಿಟ್ಟುಕೊಂಡೇ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿರ್ದೇಶಕರು-ನಿರ್ಮಾಪಕರಿಂದಲೇ ಸ್ಟಾರ್
ಉಮಾಪತಿ ನಿರ್ಮಿಸಿದ 'ಒಂದಲ್ಲಾ ಎರಡಲ್ಲಾ' ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿರ್ದೇಶಕರು-ನಿರ್ಮಾಪಕರಿಂದಲೇ ಸ್ಟಾರ್ ಹುಟ್ಟೋದು ಎಂದು ಹೇಳಿದ್ದಾರೆ. "ಸ್ಟಾರ್ ಮಾಡೋದು ಯಾರು ಅಂದರೆ, ನಿರ್ದೇಶಕರು ಹಾಗೂ ನಿರ್ಮಾಪಕರು. ಅದಾದ ನಂತರ ಜನರು ಸ್ಟಾರ್ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಸ್ಟಾರ್ ಯಾರು ಅಂದರೆ, ನಿರ್ಮಾಪಕರು ಹಾಗೂ ನಿರ್ದೇಶಕರೇ ದೊಡ್ಡ ಸ್ಟಾರ್. ಯಾರೋ ಒಬ್ಬರು ನಿರ್ಮಾಪಕರು ಇದ್ದರೆ ಸ್ಟಾರ್ ಆಗಲ್ಲ ಸಿನಿಮಾ ಆಗುತ್ತೆ ಎಂದು ಹೇಳಿದ್ದರು. ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿದಾಗ ಮಾತ್ರ ಒಂದು ಸ್ಟಾರ್ ಅನ್ನು ಹುಟ್ಟಾಕುವಂತಹ ಶಕ್ತಿ ಇರುತ್ತೆ. ಅದಕ್ಕೆ ಒಂದಲ್ಲಾ ಎರಡಲ್ಲಾ ಸಿನಿಮಾವೇ ಒಳ್ಳೆಯ ನಿದರ್ಶನ." ಎಂದಯ ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
ಸ್ಟಾರ್ ಆದ್ಮೇಲೆ ಅನ್ನದಾತರು ಸಿಗ್ತಾರೆ
ಹಾಗೇ, "ಈಗ ಸಿನಿಮಾ ನಟರು ಸ್ಟಾರ್ ಆದ್ಮೇಲೆ ಅನ್ನದಾತರು ಬೇಕಾದಷ್ಟು ಜನ ಆಗಿಬಿಡುತ್ತಾರೆ. ನಿರ್ಮಾಪಕರನ್ನು ಬಿಟ್ಟು ಒಂದಿಷ್ಟು ಫ್ಯಾನ್ ಕ್ಲಬ್‌ಗಳನ್ನು ಕಟ್ಟಿಕೊಂಡು ಒಂದು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದರೆ, ಅನ್ನದಾತರು ಎಂದು ಹೇಳುತ್ತಾರೆ. ಪ್ರತಿನಿತ್ಯ ಅನ್ನ ಕೊಡೋರು ಅನ್ನದಾತರೇ ಹೊರತು. ವರ್ಷಕೊಮ್ಮೆ ಅನ್ನ ಹಾಕೋರು ಅನ್ನದಾತರು ಯಾವತ್ತೂ ಆಗಲ್ಲ. ಅದಕ್ಕೆ ಹಿರಿಯರು ವೇದ ಸುಳ್ಳಾದರೂ ಗಾಧೆ ಸುಳ್ಳಾಗಲ್ಲ ಅಂದಿದ್ದಾರೆ" ಎಂದಿದ್ದಾರೆ.

"ಸ್ವಾರ್ಥವಿಲ್ಲದ ಬದುಕು ಶವಕ್ಕೆ ಸಮ"
"ಹತ್ತಿದ ಏಣಿ ಒದ್ದಾಗ ಕಂಡಿತವಾಗಿಯೂ ನೋವಾಗುತ್ತೆ. ನಾನು ಒಬ್ಬ ಮನುಷ್ಯ. ನಾನೂ ಸ್ವಾರ್ಥಿ. ಅದೇನೋ ಹೇಳ್ತಾರೆ, ಸ್ವಾರ್ಥವಿಲ್ಲದ ಬದುಕು ಶವಕ್ಕೆ ಸಮ ಅಂತ. ಅದೇ ಸ್ವಾರ್ಥಿಯಿಂದ ನಾನು ಅಪೇಕ್ಷೆ ಪಡುತ್ತೇನೆ. ನಮ್ಮಿಂದ ಏನಾದರೂ ಒಳ್ಳೆಯದು ಆದಾಗ, ನಾವು ಹೇಳ್ತಿವೋ ಬಿಡ್ತಿವೋ ಅವರು ಹೇಳಬೇಕು. ನಾನು ಯಾರದ್ದಾದರೂ ಸಹಾಯ ತೆಗೆದುಕೊಂಡ 10 ಜನರ ಹತ್ತಿರ ಹೇಳುತ್ತೇನೆ. ಅವರು 10 ರೂ ಸಹಾಯ ಮಾಡಿದರೂ ಸಾಯೋ ತನಕ ಅವರಿಗೆ ಜನರ ಮುಂದೆ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ." ಎಂದು ಉಮಾಪತಿ ಸ್ವಾರ್ಥದ ಬಗ್ಗೆ ಮಾತಾಡಿದ್ದಾರೆ.
ಮುಂದಿನ ವರ್ಷ ಸಿನಿಮಾ ಅನೌನ್ಸ್
ಇದೇ ಸಂದರ್ಭದಲ್ಲಿ ಮುಂದಿನ ನಿರ್ಮಿಸಲಿರುವ ಸಿನಿಮಾಗಳ ಬಗ್ಗೆನೂ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿದ್ದಾರೆ. "ಮುಂದಿನ ಪ್ರಾಜೆಕ್ಟ್.. ಇಬ್ಬರು ಹೀರೋಗಳನ್ನು ಫೈನಲ್ ಮಾಡಿಕೊಂಡು, ಮುಂದಿನ ವರ್ಷದಲ್ಲಿ ಒಂದು ಸಿನಿಮಾವನ್ನು ಅನೌನ್ಸ್ ಮಾಡುತ್ತೇವೆ. ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಮಾಜಕ್ಕೆ ಒಂದೊಳ್ಳೆ ಉದ್ದೇಶ ಹಾಗೂ ಮೆಸೇಜ್ ಕೊಡುವಂತಹ ಸಿನಿಮಾ ಆಗಬೇಕು ಎಂದು ಹೇಳಿದ್ದಾರೆ. ಮಾಸ್-ಕ್ಲಾಸ್ ಜೊತೆಯಲ್ಲಿ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇರುವಂತಹ ಸಿನಿಮಾ ಮಾಡುತ್ತೇನೆ." ಎಂದಿದ್ದಾರೆ.
ಹಳೇ ಹೆಂಡ್ತಿ ಪಾದನೇ ಗಟ್ಟಿ
"ಪ್ಯಾನ್ ಇಂಡಿಯಾ ಏನು ಮಾಡಲ್ಲ. ಈಗಾಗಲೇ ಹೇಳಿದ್ದೀನಿ. ಪ್ಯಾನ್ ಇಂಡಿಯಾ ಅಂತ ಹೋದವರೆಲ್ಲ ಕೊನೆಯಲ್ಲಿ ಜೇಬು ಖಾಲಿ ಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆಗಲಿ ಹಳೇ ಹೆಂಡ್ತಿ ಪಾದನೇ ಗಟ್ಟಿ ಅನ್ನೋ ಹಾಗೆ ಕರ್ನಾಟಕದ ಜನರೇ ನಮಗೆ ಗಟ್ಟಿ." ಎಂದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.


Click it and Unblock the Notifications











