"ಹೀರೊಗಳ ಹೊಟ್ಟೆಯಲ್ಲಿ ಹುಟ್ಟಿದ್ರೆ ಮಾತ್ರ ಹೀರೊಗಳಲ್ಲ.. ಕಷ್ಟ ಪಟ್ರೆ ಎಲ್ಲರೂ ಹೀರೊನೇ": ಉಮಾಪತಿ ಮಾತಿನ ಅರ್ಥವೇನು?
'ರಾಬರ್ಟ್', 'ಉಪಾಧ್ಯಕ್ಷ' ಸಿನಿಮಾಗಳ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ದರ್ಶನ್ ಬಗ್ಗೆ ಮಾತಾಡಿದ್ದಾರೆ. ಇತ್ತೀಚೆಗೆ ಹೊಟೇಲ್ ಒಂದರ ಉದ್ಘಾಟನೆ ವೇಳೆ ದರ್ಶನ್, ಚಿಕ್ಕಣ್ಣ ಹಾಗೂ 'ಉಪಾಧ್ಯಕ್ಷ' ಸಿನಿಮಾದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಈ ವೇಳೆ ಉಪಾಧ್ಯಕ್ಷ ಸಿನಿಮಾ ಮಾಡುವಾಗ ದರ್ಶನ್ ಕೊಟ್ಟ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.
'ರಾಬರ್ಟ್' ಸಿನಿಮಾ ವೇಳೆ ದರ್ಶನ್ ಹಾಗೂ ಉಮಾಪತಿ ಗೌಡ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಆ ಸಿನಿಮಾ ರಿಲೀಸ್ ಆಗಿ 100 ದಿನಗಳನ್ನು ಪೂರೈಸಿದ ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಬಹಿರಂಗವಾಗಿಯೇ ದರ್ಶನ್ ಹಾಗೂ ಉಮಾಪತಿ ಗೌಡ ಆರೋಪ-ಪ್ರತ್ಯಾರೋಪ ಮಾಡಿದ್ದರು.

ಇಷ್ಟೆಲ್ಲ ಆದ ಬಳಿಕವೂ ಉಮಾಪತಿ ಗೌಡ ಆಗಾಗ ಕಾರ್ಯಕ್ರಮಗಳಲ್ಲಿ ದರ್ಶನ್ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಈಗ ಹೊಟೇಲ್ ಉದ್ಘಾಟನೆಗೆ ಅತಿಥಿಯಾಗಿ ಹೋಗಿದ್ದ ನಿರ್ಮಾಪಕ ಉಮಾಪತಿ ಅವರೇ ನಿರ್ಮಿಸಿರುವ 'ಉಪಾಧ್ಯಕ್ಷ' ಸಿನಿಮಾ ಬಗ್ಗೆ, ಚಿಕ್ಕಣ್ಣನ ಬಗ್ಗೆ ಹಾಗೂ ದರ್ಶನ್ ಮುಕ್ತವಾಗಿ ಮಾತಾಡಿದ್ದಾರೆ. ಹಾಗೇ "ಹೀರೊಗಳ ಹೊಟ್ಟೆಯಲ್ಲಿ ಹುಟ್ಟಿದ್ರೆ ಮಾತ್ರ ಹೀರೊಗಳಲ್ಲ.. ಕಷ್ಟ ಪಟ್ರೆ ಎಲ್ಲರೂ ಹೀರೊನೇ" ಎಂದಿದ್ದಾರೆ. ಈ ಮಾತು ಹೇಳಿದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಉಪಾಧ್ಯಕ್ಷ' ಕಥೆ ಹುಟ್ಟಿದ್ದು ಹೇಗೆ?
ಚಿಕ್ಕಣ್ಣ ಮೊದಲ ಬಾರಿಗೆ ಹೀರೊ ಆಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 8ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಈ ಸಿನಿಮಾ ಮಾಡಬೇಕು ಅಂತ ಹೆಬ್ಬುಲಿ ಸಮಯದಲ್ಲೇ ಅಂದುಕೊಂಡಿದ್ದೆವು ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ. "ಹೆಬ್ಬುಲಿ ಸಮಯದಲ್ಲಿ ನಾವು ಸಿನಿಮಾ ಮಾಡ್ಬೇಕು ಅಂತ ಅಂದುಕೊಂಡೆವು. 'ರಾಬರ್ಟ್' ಸಮಯದಲ್ಲಿ ಕಥೆಗೆ ಕೂತುಕೊಂಡೆವು. ಈವಾಗ ಸಿನಿಮಾ ಫಿನಿಶ್ ಮಾಡಿ ರಿಲೀಸ್‌ಗೆ ಹೋಗುತ್ತಿದ್ದೇವೆ." ಎಂದಿದ್ದಾರೆ.
ದರ್ಶನ್ ಕೊಟ್ಟಿದ್ದ ಸಲಹೆ ಏನು?
"ದರ್ಶನ್ ಸರ್ ಕೂಡ ಆ ಸಿನಿಮಾ ಕೆಲವು ಸಲಹೆಯನ್ನು ಆ ಸಂದರ್ಭದಲ್ಲಿ ಹೇಳಿದ್ದರು. ಕಮರ್ಷಿಯಲ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಥೆಯನ್ನು ಬರೆಯಬೇಡಿ. ಚಿಕ್ಕಣ್ಣನನ್ನು ಯಾವ ರೀತಿ ನೋಡಲು ಇಷ್ಟ ಪಡುತ್ತಾರೋ ಹಾಗೇ ಹೋಗಿ ಅಂತ ಹೇಳಿದ್ದರು. ಅವರ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ." ಎಂದು ದರ್ಶನ್ ಅಂದು ಕೊಟ್ಟಿದ್ದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.

"ಕಷ್ಟ ಪಟ್ಟರೆ ಎಲ್ಲರೂ ಹೀರೊಗಳು"
ಇದೇ ಮೊದಲ ಬಾರಿಗೆ ಚಿಕ್ಕಣ್ಣ ಉಪಾಧ್ಯಕ್ಷ ಮೂಲಕ ಹೀರೊ ಆಗುತ್ತಿರುವ ಬಗ್ಗೆ ಉಮಾಪತಿ ಪ್ರತಿಕ್ರಿಯೆ ನೀಡಿದ್ದು, ಹೀರೊ ಹೊಟ್ಟೆಯಲ್ಲಿ ಹುಟ್ಟಿದರೆ ಮಾತ್ರ ಹೀರೊಗಳಲ್ಲ. ಕಷ್ಟ ಪಟ್ಟರೆ ಎಲ್ಲರೂ ಹೀರೊಗಳೇ" ಎಂದಿದ್ದಾರೆ. "ಉಪಾಧ್ಯಕ್ಷರ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ. ಒಬ್ಬ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಹೀರೊ ಆಗಿ ನಿಂತಿದ್ದಾರೆ ಅಂದರೆ, ಅವರ ಶ್ರಮ ಮತ್ತು ಜನ ಆಶೀರ್ವಾದ. ಈಗೇನು ಹೀರೋಗಳು ಆಗಬೇಕು ಅಂದರೆ, ಹೀರೊಗಳ ಹೊಟ್ಟೆಯಲ್ಲಿ ಹುಟ್ಟಿದರೆ ಮಾತ್ರ ಹೀರೊ ಅಲ್ಲ. ಕಷ್ಟ ಪಟ್ಟರೆ ಎಲ್ಲರೂ ಹೀರೊಗಳು ಆಗುತ್ತಾರೆ ಅಷ್ಟೇ." ಎಂದಿದ್ದಾರೆ.


Click it and Unblock the Notifications











