"ಯಶ್ ಜೊತೆ ಸಿನಿಮಾ ಮಾಡೋದು ಶೇ.100ರಷ್ಟು ಸತ್ಯ" ರಾಕಿ ಭಾಯ್ ಬಗ್ಗೆ ಉಮಾಪತಿ ಹೇಳಿದ್ದೇನು?
ಸ್ಯಾಂಡಲ್‌ವುಡ್‌ನ ದುಬಾರಿ ನಿರ್ದೇಶಕರಲ್ಲಿ ಉಮಾಪತಿ ಕೂಡ ಒಬ್ಬರು. ಈಗಾಗಲೇ 'ಹೆಬ್ಬುಲಿ','ರಾಬರ್ಟ್', 'ಮದಗಜ' ಅಂತಹ ನೂರಾರು ಕೋಟಿ ರೂ. ಸಿನಿಮಾಗಳನ್ನು ನೀಡಿದ್ದಾರೆ.
ಈಗ ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್ ಚಿಕ್ಕಣ್ಣ ನಟಿಸುತ್ತಿರುವ 'ಉಪಾಧ್ಯಕ್ಷ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಸಿನಿಮಾ, ರಾಜಕೀಯ ಅಂತ ಎರಡೂ ಕಡೆ ಕಾಲಿಟ್ಟಿರೋ ಉಮಾಪತಿ ಗಮನ ಚುನಾವಣೆ ಮೇಲಿದೆ.
ಇದೇ ಸಂದರ್ಭದಲ್ಲಿ ನಿರ್ಮಾಪಕ ಉಮಾಪತಿ ಮತ್ತೊಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಕಿ ಭಾಯ್ ಜೊತೆ ಸಿನಿಮಾ ಮಾಡುತ್ತಾರಾ? ಇಲ್ವಾ? ಅನ್ನೋದನ್ನು ಯೂಟ್ಯೂಬ್ ಚಾನೆಲ್‌ಗೆ ಹೇಳಿಕೆ ಕೊಟ್ಟಿದ್ದಾರೆ.

'ರಾಬರ್ಟ್' ಬಳಿಕ ಯಶ್ ಸಿನಿಮಾ ಕಥೆ ಏನಾಯ್ತು?
'ರಾಬರ್ಟ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ ಬಳಿಕ ಮುಂದಿನ ಸಿನಿಮಾ ಬಗ್ಗೆ ಆಸೆ ವ್ಯಕ್ತಪಡಿಸಿದ್ದರು. ಈ ವೇಳೆ ರಾಕಿ ಭಾಯ್ ಯಶ್‌ಗೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಉಮಾಪತಿ ಹಾಗೂ ಯಶ್ ಕಾಂಬಿನೇಷನ್ ಸಿನಿಮಾ ಮುಂದೇನಾಯ್ತು ಅನ್ನೋದು ಸುಳಿವೇ ಸಿಕ್ಕಿರಲಿಲ್ಲ. ಈಗ ಇದೇ ಸಿನಿಮಾ ಬಗ್ಗೆ ಯೂಟ್ಯೂಬ್ ಚಾನಲ್‌ವೊಂದಕ್ಕೆ ಮಾಹಿತಿ ರವಾನೆ ಮಾಡಿದ್ದಾರೆ.

ಯಶ್ ಬಗ್ಗೆ ಉಮಾಪತಿ ಹೇಳಿದ್ದೇನು?
"ಈಗ ಅವರೂ ಬ್ಯುಸಿ ಇದ್ದಾರೆ. ನನ್ನ ಪ್ರಕಾರ, ಅಧಿಕೃತವಾಗಿ ಅವರ ಅಕೌಂಟ್‌ಗೆ ದುಡ್ಡು ಟ್ರಾನ್ಸ್‌ಫರ್ ಆದಾಗ ಮಾತ್ರ ನಾವೊಂದು ಸಿನಿಮಾ ಮಾಡುತ್ತಿದ್ದೇವೆ ಎಂದು ಅನೌನ್ಸ್ ಮಾಡಬಹುದು. ನಮ್ಮ ಮತ್ತು ಅವರ ನಡುವೆ ಕೆಲವು ಮಾತುಕತೆಗಳಿದ್ದಾವೆ. ನಾನು ಹೇಳಿದ್ನಲ್ಲ ನಮ್ಮ ಅಕೌಟ್‌ನಿಂದ ಅಧಿಕೃತವಾಗಿ ಅವರ ಅಕೌಂಟ್‌ಗೆ ಹಣ ವರ್ಗಾವಣೆ ಆದಾಗ ಮಾತ್ರ ಅಫಿಶಿಯಲ್ ಆಗಿ ಅನೌನ್ಸ್ ಮಾಡುವುದಕ್ಕೆ ಸಾಧ್ಯ." ಎಂದು ಉಮಾಪತಿ ಹೇಳಿದ್ದಾರೆ.

ಯಶ್ ಜೊತೆ ಸಿನಿಮಾ 100 ಪರ್ಸೆಂಟ್ ಸತ್ಯ
ನಿರ್ಮಾಪಕ ಉಮಾಪತಿ ರಾಕಿ ಭಾಯ್ ಯಶ್ ಸಿನಿಮಾ ಮಾಡುತ್ತಾರಾ? ಯಾವಾಗ ಮಾಡುತ್ತಾರೆ? ಅನ್ನೋದನ್ನೂ ತಿಳಿಸಿದ್ದಾರೆ. "100 ಪರ್ಸೆಂಟ್ ಸತ್ಯ. ಯಶ್ ಅವರೇ ಕನ್ನಡ ನಿರ್ಮಾಪಕರಿಗೆ ಪ್ರಾಮುಖ್ಯತೆ ಕೊಡುತ್ತೇವೆ ಅಂತ ಹೇಳಿದ್ದಾರೆ. ಆ ಬಗ್ಗೆ ಅವರಿಗೆ ಬಹಳ ಅಭಿಮಾನವಿದೆ. ನನ್ನ ಬಗ್ಗೆ ವಿಶೇಷವಾದ ಪ್ರೀತಿನೂ ಇದೆ. ಗೌರವನೂ ಇದೆ. ಹಾಗಾಗಿ ಖಂಡಿತವಾಗಿಯೂ ಮಾಡೇ ಮಾಡುತ್ತೇವೆ." ಎಂದು ಕರ್ನಾಟಕ ಟಿವಿಗೆ ಉಮಾಪತಿ ಮಾಹಿತಿ ನೀಡಿದ್ದಾರೆ.

ಚುನಾವಣೆಗೆ ನಿಲ್ತಾರಾ ಉಮಾಪತಿ?
ನಿರ್ಮಾಪಕ ಉಮಾಪತಿ ಸಿನಿಮಾ ಜೊತೆ ಚುನಾವಣಾ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾಹಿತಿ ಇದೆ. ಉಮಾಪತಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











