'ಫಸ್ಟ್ ಸ್ಯಾಲರಿ' ಕಿರುಚಿತ್ರ ಮೆಚ್ಚಿದ ರಾಕ್‌ಲೈನ್ ವೆಂಕಟೇಶ್, ಶ್ರುತಿ; ಗಣ್ಯರಿಂದ ಪ್ರಶಂಸೆ ಸುರಿಮಳೆ
ಸ್ಯಾಂಡಲ್‌ವುಡ್‌ನ ಜನಪ್ರಿಯ ಪಿಆರ್‌ಓ ಸುಧೀಂದ್ರ ವೆಂಕಟೇಶ್ 'ಫಸ್ಟ್ ಸ್ಯಾಲರಿ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಪವನ್ ವೆಂಕಟೇಶ್ ಈ ಕಿರುಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಪದಾರ್ಪಣೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಆಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಜನಪ್ರಿಯ ನಟಿ ಶ್ರುತಿ ಮತ್ತು ಗುರುಗಳಾದ ಕಮಲಾಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದು ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ನಿರ್ಮಾಪಕ ಸುರೇಶ್ ಭಾಗಿಯಾಗಿದ್ದರು.

ರಾಕ್ ಲೈನ್ ವೆಂಕಟೇಶ್, ನಟಿ ಶ್ರುತಿ ಪ್ರಶಂಸೆ
ಕಿರುಚಿತ್ರವನ್ನು ವೀಕ್ಷಿಸಿದ ಬಳಿಕ ರಾಕ್ ಲೈನ್ ವೆಂಕಟೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಪಿಆರ್‌ಓ ವೆಂಕಟೇಶ್ ಮಗ ಪವನ್ ವೆಂಕಟೇಶ್ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 'ಫಸ್ಟ್ ಸ್ಯಾಲರಿ' ಶಾರ್ಟ್ ಫಿಲ್ಮ್ ಉತ್ತಮವಾಗಿ ಮೂಡಿಬಂದಿದೆ. ಕಲಾವಿದರು ಕೂಡ ಅದ್ಭುತವಾಗಿ ನಟಿಸಿದ್ದಾರೆ. ಈ ಯುವ ಪ್ರತಿಭೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿ" ಎಂದು ಹಾರೈಸಿದರೆ, ಹಾಗೇ ನಟಿ ಶ್ರುತಿ "ಕಿರುಚಿತ್ರದಲ್ಲಿನ ತಾಯಿ-ಮಗನ ಭಾವನಾತ್ಮಕ ಸನ್ನಿವೇಶಗಳು ಮನಸ್ಸಿಗೆ ಬಹಳ ಹತ್ತಿರವಾಯಿತು. ಆ ದೃಶ್ಯಗಳು ಕಣ್ಣಂಚಲ್ಲಿ ನೀರು ತರಿಸಿದವು" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ನಿರ್ಮಾಪಕ-ನಿರ್ದೇಶಕರಿಂದ ಧನ್ಯವಾದ
ನಿರ್ಮಾಪಕ ಸುಧೀಂದ್ರ ವೆಂಕಟೇಶ್ ತಮ್ಮ ಪುತ್ರನ ಕಿರುಚಿತ್ರದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ನನ್ನ ಮಗ ಪವನ್ ಮತ್ತು ಸ್ನೇಹಿತರು ಒಳ್ಳೆಯ ಕಿರುಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದಾಗ ನಾನು ಅವರಿಗೆ ಬೆಂಬಲ ನೀಡಿದೆ. ಅವರು ಹೇಳಿದಂತೆ ಉತ್ತಮವಾಗಿ ಮಾಡಿದ್ದಾರೆ." ಎಂದು ಸಮಾರಂಭಕ್ಕೆ ಬಂದು ಪ್ರೋತ್ಸಾಹಿಸಿದ ರಾಕ್‌ಲೈನ್ ವೆಂಕಟೇಶ್, ನಟಿ ಶ್ರುತಿ, ಗುರುಗಳು ಮತ್ತು ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದರು. ನಿರ್ದೇಶಕ ಪವನ್ ವೆಂಕಟೇಶ್ ತಮ್ಮ ನಿರ್ದೇಶನದ ಕನಸನ್ನು ನನಸು ಮಾಡಿದ ತಂದೆಗೆ ಕೃತಜ್ಞತೆ ಸಲ್ಲಿಸಿದರು. "ನನ್ನ ಗೆಳೆಯ ವಿಜಯ್ ಶಿವಕುಮಾರ್ ಬರೆದ ಕಥೆಯೇ 'ಫಸ್ಟ್ ಸ್ಯಾಲರಿ'. ಹಿರಿಯರ ಆಶೀರ್ವಾದದೊಂದಿಗೆ ನಮ್ಮ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಇರಲಿ" ಎಂದು ಹೇಳಿದರು.

ಕಲಾವಿದರು ಮತ್ತು ತಂತ್ರಜ್ಞರ ಪರಿಚಯ
'ಫಸ್ಟ್ ಸ್ಯಾಲರಿ' ಶಾರ್ಟ್ ಫಿಲ್ಮ್ಸ್‌ನಲ್ಲಿ ವಿಜಯ್ ಶಿವಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದು, ಹರಿಣಿ ಶ್ರೀಕಾಂತ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ, ರಕ್ಷಿತ್ ಮುಂತಾದ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ವಿಜಯ್ ಹರಿತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ರಿಚರ್ಡ್ ಡ್ಯಾನಿಯಲ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಮನೋಜ್ ಕುಮಾರ್ ಮತ್ತು ರವಿ ಸಾಸನೂರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಿರುಚಿತ್ರದ ಎಲ್ಲ ತಂತ್ರಜ್ಞರು ಮತ್ತು ಕಲಾವಿದರು ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.


Click it and Unblock the Notifications











