ರುಕ್ಮಿಣಿ ವಸಂತ್ ಡೀಪ್ ಫೇಕ್ ಪ್ರಕರಣ; ಸಿಕ್ಕಿಬಿದ್ದವರು ಒಬ್ರು ಸ್ಟಾಫ್ಟ್‌ವೇರ್,ಇನ್ನೊಬ್ರು ಸಿಎ, ಮತ್ತೊಬ್ರು ನರ್ಸ್
ಎಐ (AI) ತಂತ್ರಜ್ಞಾನ ಕಾಲಿಟ್ಟಲ್ಲಿಂದ ಯಾರಿಗೆ ಎಷ್ಟು ಅನುಕೂಲ ಆಗಿದೆಯೋ ಗೊತ್ತಿಲ್ಲ. ಆದರೆ, ನಟಿಯರು ಮಾತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿಡಿಗೇಡಿಗಳು ಈ ತಂತ್ರಜ್ಞಾನವನ್ನು ಬಳಸಿಕೊಂಡು ಫೇಕ್ ವಿಡಿಯೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ವೈರಲ್ ಆಗಿ, ನಟಿಯರು ಮುಜುಗರಕ್ಕೆ ಒಳಪಡುವಂತೆ ಮಾಡುತ್ತಿದೆ.
ಸಾಕಷ್ಟು ನಟಿಯರು ಕಿಡಿಗೇಡಿಗಳ ಈ ಕೃತ್ಯಕ್ಕೆ ಬೇಸತ್ತು ಹೋಗಿದ್ದಾರೆ. ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ದೇಶಾದ್ಯಂತ ಜನರು ಆತಂಕ ಪಡುವಂತೆ ಮಾಡಿತ್ತು. ಇತ್ತೀಚೆಗೆ 'ಟಾಕ್ಸಿಕ್' ನಟಿ ರುಕ್ಮಿಣಿ ವಸಂತ್ ಅವರದ್ದೂ ಫೇಕ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅಂತಹ ಕಿಡಿಗೇಡಿಗಳ ವಿರುದ್ಧ ರುಕ್ಮಿಣಿ ವಸಂತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ರುಕ್ಮಿಣಿ ವಸಂತ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಈ ಕೃತ್ಯ ಎಸಗಿದ ಮೂವರನ್ನು ಬಂಧಿಸಿದ್ದಾರೆ. ಆದರೆ, ಈ ಕೃತ್ಯ ಎಸಗಿದವರ ಹಿನ್ನೆಲೆ ಆತಂಕಕ್ಕೆ ಒಳಪಡುವಂತೆ ಮಾಡಿದೆ. ಯಾಕಂದ್ರೆ ಬಂಧನಕ್ಕೆ ಒಳಗಾದ ಮೂವರೂ ಒಳ್ಳೊಳ್ಳೆ ವೃತ್ತಿಯಲ್ಲಿ ಇದ್ದಾರೆ. ಇವರ ಹಿನ್ನೆಲೆಯನ್ನು ನೋಡಿ ಗಾಬರಿ ಬೀಳುವಂತೆ ಆಗಿದೆ. ಮೂವರಲ್ಲಿ ಒಬ್ಬರು ಸಾಫ್ಟ್‌ವೇರ್ ಇಂಜಿನಿಯರ್, ಇನ್ನೊಬ್ಬರು ಸಿಎ, ಮತ್ತೊಬ್ಬರು ನರ್ಸಿಂಗ್ ಪದವೀಧರ. ಅಷಕ್ಕೂ ಇವರ ಹಿನ್ನೆಲೆ ಏನು? ಎಲ್ಲಿಯವರು? ಇಲ್ಲಿದೆ ಡಿಟೈಲ್ಸ್.
ಬಾಗಲಕೋಟೆ ರವಿಕುಮಾರ್
ನಟಿ ರುಕ್ಮಿಣಿ ವಸಂತ್ ಫೇಕ್ ವಿಡಿಯೋದ ಮೊದಲ ಆರೋಪಿ ರವಿಕುಮಾರ್ ಬಾಗಲಕೋಟೆ ಮೂಲದವರು. ಇವರ ಬಿಎಸ್‌ಸಿ ನರ್ಸಿಂಗ್ ಪದವೀಧರ. ಇತ್ತೀಚೆಗೆ ತನ್ನ ಶಿಕ್ಷಣವನ್ನು ಮುಗಿಸಿ, ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದ. ಈ ಚಾನೆಲ್ ಮೂಲಕ ಡೀಪ್ ಫೇಕ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ಅವನ ಯೂಟ್ಯೂಬ್ ಚಾನೆಲ್‌ನಿಂದ ಮೊದಲ ಬಾರಿಗೆ ಹಣ ಬಂದಿತ್ತು. ಹೀಗಾಗಿ ವೀವ್ಸ್ ಹೆಚ್ಚಿಸಿಕೊಳ್ಳುವುದಕ್ಕೆ ನಟಿಯರ ಡೀಪ್ ಫೇಕ್ ವಿಡಿಯೋ ಮಾಡಿ ಹಾಕುತ್ತಿದ್ದ ಎಂದು ಟಿವಿ9 ವರದಿ ಮಾಡಿದೆ.
ತೀರ್ಥಹಳ್ಳಿಯ ರಂಜಿತ್ ಕುಮಾರ್
ರುಕ್ಮಿಣಿ ವಸಂತ್ ಡೀಪ್ ಫೇಕ್ ವಿಡಿಯೋದ 2ನೇ ಆರೋಪಿ ರಂಜಿತ್ ಕುಮಾರ್. ಇವರು ಮೂಲತ" ತೀರ್ಥಹಳ್ಳಿ ಮೂಲದವರು. 25 ವರ್ಷದ ರಂಜಿತ್ ವೃತ್ತಿಯಲ್ಲಿ ಸ್ಟಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಎಐ ಟೆಕ್ನಾಲಜಿಯ ಬಗ್ಗೆ ಜ್ಞಾನ ಹೊಂದಿದ್ದ ರಂಜಿತ್ ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ ವರ್ಷಕ್ಕೆ ₹20 ಲಕ್ಷ ಸಂಬಳ ಎಂದು ವರದಿಯಾಗಿದೆ. ಕೇವಲ ಮೋಜಿಗಾಗಿ ಇಂತಹ ಡೀಪ್‌ಫೇಕ್ ವಿಡಿಯೋ ಮಾಡುತ್ತಿದ್ದು, ಈಗ ತನ್ನ ವೃತ್ತಿ ಬದುಕಿಗೆ ಕುತ್ತು ತಂದುಕೊಂಡಿದ್ದಾನೆ.

3ನೇ ಆರೋಪಿ ಚಂದ್ರಕಾಂತ್
ಇನ್ನೂ 3ನೇ ಆರೋಪಿಯ ಹೆಸರು ಚಂದ್ರಕಾಂತ್. ಈತ ಕೂಡ ಒಳ್ಳೆಯ ವೃತ್ತಿಯಲ್ಲಿ ಇದ್ದಾರೆ. ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ (CA) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಈತನಿಗೂ ಕೂಡ ಒಳ್ಳೆಯ ಸಂಬಳ ಬರುತ್ತಿತ್ತು. ಚಂದ್ರಕಾಂತ್ ಕೂಡ ವಿಕೃತ ಸಂತೋಷಕ್ಕೆ ಹಾಗೂ ಮಜಕ್ಕೆ ಇಂತಹ ಕೃತ್ಯವೆಸಗಿ ಈಗ ಪೊಲೀಸರ ಅತಿಥಿಯಾಗುವಂತಹ ಪರಿಸ್ಥಿತಿ ಬಂದಿದೆ. ನಟಿ ರಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ವಿಡಿಯೋ ಮಾಡಿದ್ದನ್ನು ಈ ಮೂವರು ಒಪ್ಪಿಕೊಂಡಿದ್ದಾರೆ.
ಮೂವರಿಂದ ಜಪ್ತಿ ಆಗಿದ್ದೇನು?
ನಟಿ ರುಕ್ಮಿಣಿ ವಸಂತ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರಿಂದ ದುಬಾರಿ ಬೆಲೆಯ ಮೊಬೈಲ್ ಫೋನ್‌ಗಳನ್ನು ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇವರು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಟಿಯ ಫೇಕ್ ವಿಡಿಯೋ, ಇಮೇಜ್‌ಗಳನ್ನು ಸೃಷ್ಟಿಸಿದ್ದರು. ಸದ್ಯ ಈ ಮೂವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಸೈಬರ್ ಕಮಾಂಡ್ ಪೊಲೀಸರು, ತಮ್ಮ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಒಳ್ಳೆಯ ಹುದ್ದೆಯಲ್ಲಿದ್ದ ಈ ಮೂವರು ಇಂತಹ ಕೃತ್ಯಕ್ಕೆ ಮುಂದಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದೆ.


Click it and Unblock the Notifications
