ಮೊದಲ ದಿನ ಕರ್ನಾಟಕದಲ್ಲಿ 'ಸಲಾರ್' ಗಳಿಸಿದ್ದೆಷ್ಟು? ಕನ್ನಡ ಶೋ ಹೆಚ್ಚಿಸಲು ವಿತರಕರ ಒತ್ತಾಯ!
ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್. ಪ್ಯಾನ್ ಇಂಡಿಯ ಸೂಪರ್‌ಸ್ಟಾರ್ ಪ್ರಭಾಸ್. ಇಬ್ಬರೂ ಒಟ್ಟಿಗೆ ಸೇರಿಕೊಂಡ ಸಿನಿಮಾದ ಕಲೆಕ್ಷನ್ ಹೊಸ ದಾಖಲೆಯನ್ನೇ ಬರೆದಿದೆ. 'ಕೆಜಿಎಫ್ 2' ಬಳಿಕ ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕಿದೆ.
ವಿಶ್ವದೆಲ್ಲಡೆ ನಿರೀಕ್ಷೆ ಮಾಡಿದಂತೆ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಚಿತ್ರತಂಡವೇ ಅಧಿಕೃತವಾಗಿ ಕೊಟ್ಟಿರೋ ಲೆಕ್ಕಾಚಾರದ ಪ್ರಕಾರ, ಮೊದಲ ದಿನ ವಿಶ್ವದಾದ್ಯಂತ 178.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲುಗು ಅವತರಣಿಕೆಯಿಂದಲೇ ಹೆಚ್ಚು ಕಲೆಕ್ಷನ್ ಆಗಿದ್ದರೂ, ಉಳಿದ ಭಾಷೆಗಳಲ್ಲಿ ಅಬ್ಬರವೇನು ಕಮ್ಮಿಯಿಲ್ಲ.

ಸರ್ಪ್ರೈಸ್ ಅಂದರೆ, ಕನ್ನಡ ಅವತರಣಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಹಿಂದೆ ಬಂದ ಅದೆಷ್ಟೋ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಿದ್ದವು. ಆದರೆ, ರಿಲೀಸ್ ಮಾಡಿದ ನಾಲ್ಕೈದು ಶೋಗಳು ಕೂಡ ಖಾಲಿ ಹೊಡೆದಿದ್ದವು. ಆದ್ರೀಗ 'ಸಲಾರ್' ಕನ್ನಡ ಅವತರಣಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಾದ ಕಲೆಕ್ಷನ್.
'ಸಲಾರ್' ವಿಶ್ವದಾದ್ಯಂತ 178.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಹಿಂದೆ ಬೆಲ್ಟ್‌ನಲ್ಲೂ ಕಲೆಕ್ಷನ್ ಅದ್ಭುತವಾಗಿಯೇ ಇದೆ. ಹಾಗೇ ಕರ್ನಾಟಕದಲ್ಲೇನು ಕಮ್ಮಿ ಕಲೆಕ್ಷನ್ ಆಗಿಲ್ಲ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೊದಲ ದಿನವೇ ಸುಮಾರು 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಬಹಳ ದಿನಗಳ ಬಳಿಕ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾವೊಂದಕ್ಕೆ ಭರ್ಜರಿ ಕಲೆಕ್ಷನ್ ಬಂದಿದೆ.
ಇನ್ನು ಕನ್ನಡದಲ್ಲಿ ಈ ಹಿಂದೆ ತೆರೆ ಕಂಡ ಪರಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳಿಗಿಂತ ಹೆಚ್ಚು ಶೋ ನೀಡಲಾಗಿತ್ತು. ಅದರಲ್ಲೂ ಸಿಂಗಲ್ ಸ್ಕ್ರೀನ್‌ನಲ್ಲಿ 'ಸಲಾರ್'ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಮೊದಲ ದಿನ ಸಿಕ್ಕಿರೋ ಅದ್ಭುತ ರೆಸ್ಪಾನ್ಸ್ ಬಳಿಕ ಕರ್ನಾಟಕದಲ್ಲಿ ಕನ್ನಡ ಶೋಗಳನ್ನು ಹೆಚ್ಚಿಸುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ ಎನ್ನಲಾಗಿದೆ. ಕನ್ನಡದ ಪತ್ರಕರ್ತ ಶ್ಯಾಮ್ ಪ್ರಸಾದ್ ಈ ಬಗ್ಗೆ ಟ್ವೀಟ್ (X) ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
"ನಾಳೆ ಕರ್ನಾಟಕದಲ್ಲಿ ಸಲಾರ್ ಕನ್ನಡ ಶೋಗಳು 500ರನ್ನು ದಾಟಲಿದೆ. ಕರ್ನಾಟಕದಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕ ಬಳಿಕ ವಿತರಕರು ಹಲವು ಸಿಂಗಲ್ ಸ್ಕ್ರೀನ್‌ಗಳಲ್ಲಿ ಕನ್ನಡ ಶೋಗಳನ್ನು ಹಾಕುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಕೂಡ ಸುಮಾರು 50 ರಿಂದ 60 ಶೋಗಳನ್ನು ನಾಳೆ(ಡಿಸೆಂಬರ್ 24)ಯಿಂದ ಏರಿಕೆ ಮಾಡಲಿದೆ." ಎಂದು ಟ್ವೀಟ್ (X) ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
'ಸಲಾರ್' ಎರಡನೇ ದಿನದ ಕಲೆಕ್ಷನ್ ಕೂಡ ಉತ್ತಮವಾಗಿದೆ ಅನ್ನೋ ವರದಿಗಳು ಬರುತ್ತಿವೆ. ಅಲ್ಲದೆ ವೀಕೆಂಡ್ ಹಾಗೂ ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ಗಳಿಕೆಯಲ್ಲಿ ಮತ್ತಷ್ಟು ಏರಿಕೆ ಆಗಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಸತತ ಸೋಲುಗಳ ಬಳಿಕ ಪ್ರಭಾಸ್ ಮತ್ತೆ ಗೆಲುವಿನ ಹಾದಿ ಸಿಕ್ಕಿದೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಮೂರು ದಿನ ರಜೆಯಲ್ಲಿ 'ಸಲಾರ್' ಕಲೆಕ್ಷನ್ ಹೇಗಾಗುತ್ತೆ ಅನ್ನೋ ಕುತೂಹಲವಿದೆ.


Click it and Unblock the Notifications











