'ರಕ್ಕಸಪುರಧೋಳ್' ಬಗ್ಗೆ ಸಲ್ಮಾನ್ ಖಾನ್ ಏನಂದ್ರು? ಹಿಂದಿಯಲ್ಲೂ ರಿಲೀಸ್ ಆಗುತ್ತಾ ಸಿನಿಮಾ?
'ಸು ಫ್ರಮ್ ಸೋ', '45' ಬಳಿಕ ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರಧೋಳ್' ರಿಲೀಸ್ ಆಗಿದೆ. ಈ ಸಿನಿಮಾ ಈಗ ಎರಡನೇ ವಾರ ಪ್ರದರ್ಶನ ಆಗುತ್ತಿದೆ. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯ ಕನ್ನಡ ಭಾಷೆಯಲ್ಲಿ ಮಾತ್ರ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ.
ಇತ್ತೀಚೆಗೆ 'ರಕ್ಕಸಪುರಧೋಳ್' ಸಿನಿಮಾ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿವರ್ಮಾ ಕೇವಲ ಕನ್ನಡ ಅಷ್ಟೇ ಅಲ್ಲ. ಹಿಂದಿ ಸಿನಿಮಾಗಳಿಗೂ ಆಕ್ಷನ್ ಸೀನ್‌ಗಳನ್ನು ಕಂಪೋಸ್ ಮಾಡುತ್ತಾರೆ. ಸಲ್ಮಾನ್ ಖಾನ್ ನಟಿಸಿದ ಹಲವು ಸಿನಿಮಾಗಳಿಗೆ ಇವರೇ ಸಾಹಸ ನಿರ್ದೇಶಕರಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾಗೆ ರವಿವರ್ಮಾ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ತಾವು ನಿರ್ಮಿಸಿದ 'ರಕ್ಕಸಪುರಧೋಳ್' ಸಿನಿಮಾದ ಟ್ರೈಲರ್ ಅನ್ನು ಸಲ್ಮಾನ್ ಖಾನ್‌ಗೆ ತೋರಿಸಿದ್ದಾರೆ. ಸಿನಿಮಾದ ಟ್ರೈಲರ್ ಸಲ್ಮಾನ್ ಖಾನ್‌ಗೆ ಸಿಕ್ಕಾಪಟ್ಟೆ ಆಗಿದೆ ಅನ್ನೋ ಮಾತುಗಳು ಚಿತ್ರತಂಡದಿಂದಲೇ ಹೊರಬಿದ್ದಿದೆ. ಜೊತೆಗೆ ಸಲ್ಮಾನ್ ಖಾನ್ ಜೊತೆ ರವಿಮರ್ಮಾ ನಿಂತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅಂದ್ಹಾಗೆ ಸಲ್ಮಾನ್ ಖಾನ್‌ಗೆ 'ರಕ್ಕಸಪುರದೋಳ್' ಸಿನಿಮಾದ ಕನ್ನಡ ವರ್ಷನ್‌ನ ಟ್ರೈಲರ್ ಅನ್ನು ತೋರಿಸಲಾಗಿದೆ. ಈ ಟ್ರೈಲರ್ ಇಷ್ಟ ಆಗಿದ್ದು, "ಹಿಂದಿ ವರ್ಷನ್ ಸಿನಿಮಾವನ್ನು ಯಾವಾಗ ತೋರಿಸ್ತೀಯಾ?" ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಸಲ್ಮಾನ್ ಖಾನ್ ಬಯಸಿದ ಮೇಲೆ ರವಿವರ್ಮಾ ಹಿಂದಿಯಲ್ಲೂ ಈ ಸಿನಿಮಾವನ್ನು ರಿಲೀಸ್ ಮಾಡುತ್ತಾರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, 'ರಕ್ಕಸಪುರಧೋಳ್' ಸಿನಿಮಾ ಹಿಂದಿಯಲ್ಲೂ ರವಿವರ್ಮಾ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ, ಕನ್ನಡ ವರ್ಷನ್ ಅನ್ನೇ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡುತ್ತಾರಾ? ಇಲ್ಲ ಹಿಂದಿಗೆ ಬೇಕಾದ ಹಾಗೆ ಕಥೆ, ಸ್ಕ್ರೀನ್‌ಪ್ಲೇಯನ್ನು ಬದಲಿಸಿ ನಿರ್ಮಾಣ ಮಾಡುತ್ತಾರಾ? ಅನ್ನೋದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಸಿಗಬಹುದು. ಆದರೆ, ಸಲ್ಮಾನ್ ಖಾನ್ 'ರಕ್ಕಸಪುರಧೋಳ್' ಸಿನಿಮಾ ಟ್ರೈಲರ್ ಅನ್ನು ಮೆಚ್ಚಿಕೊಂಡ ರವಿವರ್ಮಾಗೆ ಆನೆ ಬಲ ಬಂದಂತಾಗಿದೆ.

ಕನ್ನಡ ಸ್ಟಂಟ್ ಮಾಸ್ಟರ್ ಆಗಿರುವ ರವಿವರ್ಮಾ ಬಾಲಿವುಡ್‌ನಲ್ಲೂ ಹಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಸ್ಟಂಟ್ ಮಾಸ್ಟರ್ ಆಗಿದ್ದವರು ಈಗ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ಚೊಚ್ಚಲ ಪ್ರಾಜೆಕ್ಟ್ ಅನ್ನು ರಾಜ್ ಬಿ ಶೆಟ್ಟಿ ಜೊತೆ ಮಾಡಿದ್ದು ಅವರ ನಿರ್ಮಾಣ ಸಂಸ್ಥೆಗೆ ಪ್ಲಸ್ ಪಾಯಿಂಟ್. ಸದ್ಯ ಎರಡನೇ ವಾರದಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
'ರಕ್ಕಸಪುರಧೋಳ್' ಕಥೆಯ ಕಡೆಗೆ ಬರೋದಾರೆ, ಪತ್ನಿಯನ್ನು ಕಳೆದುಕೊಂಡು ಕುಡಿತಕ್ಕೆ ದಾಸನಾಗಿರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಹೀಗಾಗಿ ಇವರನ್ನು ಕ್ರೈಂ ಇಲ್ಲದ ಊರಿಗೆ ವರ್ಗಾವಣೆ ಮಾಡಲಾಗುತ್ತೆ. ಆ ಊರಿನ ಹೆಸರೇ 'ರಕ್ಕಸಪುರದೋಳ್'. ಅಲ್ಲಿಗೆ ರಾಜ್ ಬಿ ಶೆಟ್ಟಿ ಬಂದಿಳಿಯುತ್ತಿದ್ದಂತೆ ಕೆಲವು ವಿಚಿತ್ರ ಘಟನೆಗಳು ನಡೆಯುತ್ತವೆ. ಊರಿನವರು ಕೊಳ್ಳಿ ದೆವ್ವ ಎಂದು ಹೆದರುವುದಕ್ಕೆ ಶುರು ಮಾಡುತ್ತಾರೆ. ರಾಜ್ ಬಿ ಶೆಟ್ಟಿ ಇದೆಲ್ಲ ಸುಳ್ಳು ಎಂದು ಸಾಬೀತು ಮಾಡುವುದಕ್ಕೆ ಹೊರಡುತ್ತಾರೆ. ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್ ಕೊಡುವ ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಟ್ಟಿದೆ.


Click it and Unblock the Notifications











