ಸಮರ್ಜಿತ್‌ಗೆ ಫಿಲ್ಮ್ ಫೇರ್ ಪ್ರಶಸ್ತಿ; ಲಂಕೇಶ್ ಕುಟುಂಬಕ್ಕೆ ಸಿಗುತ್ತಿರೋ 3ನೇ ಅವಾರ್ಡ್
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡಲಾಗುವ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ 2024ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡದ ತಾರೆಯರಿಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
70ನೇ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಗೌರಿ' ಸಿನಿಮಾದ ಅಭಿನಯಕ್ಕಾಗಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್‌ಗೆ ಪ್ರಶಸ್ತಿ ಲಭಿಸಿದೆ. ಇವರ ಚೊಚ್ಚಲ ಸಿನಿಮಾ 'ಗೌರಿ'ಯ ನಟನೆಗಾಗಿ ಅತ್ಯುತ್ತಮ ನವನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಶೇಷ ಅಂದರೆ, ಇದು ಲಂಕೇಶ್ ಕುಟುಂಬಕ್ಕೆ ಸಿಗುತ್ತಿರುವ 3ನೇ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಮೂರು ತಲೆಮಾರುಗಳು ಕೂಡ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದ ಖುಷಿಯಲ್ಲಿ ತೇಲಾಡುತ್ತಿದೆ.

ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ತಂದೆ ಇಂದ್ರಜಿತ್ ಲಂಕೇಶ್ ಅವರು ಪರಿಚಯಿಸಿದ್ದರು. ಅವರೇ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದರು. ಮಗನನ್ನು ಸ್ಟೈಲಿಶ್ ಆಗಿ ತೆರೆಮೇಲೆ ಇಂಟ್ರುಡ್ಯೂಸ್ ಮಾಡಿದ್ದರು. ಸಮರ್ಜಿತ್ ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ನಟ ಆಗಬಹುದೆಂಬ ನಿರೀಕ್ಷೆಯನ್ನು ಹುಟ್ಟಾಕಿದ್ದಾರೆ. 'ಗೌರಿ' ಸಿನಿಮಾ ಆ ಮಟ್ಟಿಗೆ ಇಂಪ್ಯಾಕ್ಟ್ ಮಾಡಿದೆ.
ಈಗ ಸಮರ್ಜಿತ್ ಲಂಕೇಶ್ ಅವರ ಪ್ರತಿಭೆಯನ್ನು ಗುರುತಿಸಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದು ಅವರ ಕುಟುಂಬಕ್ಕೆ ಬಂದಿರುವ 3ನೇ ಪ್ರಶಸ್ತಿ. ಕನ್ನಡದ ಜನಪ್ರಿಯ ಸಾಹಿತಿ ಮತ್ತು 'ಲಂಕೇಶ್ ಪತ್ರಿಕೆ' ಸಂಪಾದಕರಾಗಿದ್ದ ಪಿ. ಲಂಕೇಶ್ 1980ರಲ್ಲಿ 'ಎಲ್ಲಿಂದಲೋ ಬಂದವರು' ಎನ್ನುವ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ (ದಕ್ಷಿಣ) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ತಮ್ಮ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಲಂಕೇಶ್ ಚಿತ್ರರಂಗದಲ್ಲೂ ನಿರ್ದೇಶಕರಾಗಿ ಗೆದಿದ್ದರು. 'ಪಲ್ಲವಿ', 'ಅನುರೂಪ', 'ಖಂಡವಿದೆಕೋ ಮಾಂಸವಿದೆಕೋ' ಮತ್ತು 'ಎಲ್ಲಿಂದಲೋ ಬಂದವರು' ಸಿನಿಮಾಗಳು ಅವರ ನಿರ್ದೇಶನಕ್ಕೆ ಸಾಕ್ಷಿ. ಈ ಎಲ್ಲಾ ಸಿನಿಮಾಗಳಿಗೆ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಲಂಕೇಶ್ ಪುತ್ರ ಇಂದ್ರಜಿತ್ ಲಂಕೇಶ್ ಕೂಡ 'ತುಂಟಾಟ'ದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಮೊನಾಲಿಸಾ', 'ಐಶ್ವರ್ಯಾ', 'ಹುಡುಗ ಹುಡುಗಿ', 'ಲವ್ ಯೂ ಆಲಿಯಾ', 'ಶಕೀಲಾ' ಹಾಗೂ ಇತ್ತೀಚೆಗೆ 'ಗೌರಿ' ಸಿನಿಮಾವನ್ನು ನಿರ್ದೇಶಿಸಿದ್ದರು. ಉಪೇಂದ್ರ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಐಶ್ವರ್ಯ' ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ಯಾಟಗರಿಯಲ್ಲಿ ಪ್ರತಿಷ್ಠಿತ ಫಿಲ್ಮ್‌ಫೇರ್ ಪಡೆದಿದ್ದಾರೆ.
ತಾತ ಹಾಗೂ ತಂದೆಯ ಬಳಿಕ ಈ ಸಮರ್ಜಿತ್ ಕೂಡ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. 'ಗೌರಿ' ಸಿನಿಮಾದ ಮೂಲಕ ಮೊದಲ ಪ್ರಯತ್ನದಲ್ಲೇ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಫಿಲ್ಮ್‌ಫೇರ್ ಪ್ರಶಸ್ತಿ ಗೆಲ್ಲುವ ಮೂಲಕ ಇನ್ನಷ್ಟು ಭರವಸೆ ಮೂಡಿಸಿದ್ದಾರೆ. 'ಗೌರಿ' ಸಿನಿಮಾದ ಬಳಿಕ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಮೋಹನ್‌ಲಾಲ್ ನಟಿಸಿದ 'ವೃಷಭ' ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಮರ್ಜಿತ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಒಂದು ಕನ್ನಡ ಹಾಗೂ ಹಿಂದಿ ಸಿನಿಮಾಗಳನ್ನು ಸಮರ್ಜಿತ್ ಒಪ್ಪಿಕೊಂಡಿದ್ದಾರೆ.


Click it and Unblock the Notifications











