ಈ ಸಾವು ನ್ಯಾಯವೇ: ಸಂಪತ್ ಜಯರಾಂ, ಸೌಜನ್ಯ, ಜಯಶ್ರೀ.. ಕನ್ನಡ ಕಿರುತೆರೆ ಕಲಾವಿದರ ಆತ್ಮಹತ್ಯೆ ಘೋರ!
ಬಣ್ಣದ ಪ್ರಚಂಚನೇ ಹಾಗೇ.. ಕೆಲವರಿಗೆ ಯಶಸ್ಸು ಕೈ ಹಿಡಿದು ಬಿಡುತ್ತೆ. ಮತ್ತೆ ಕೆಲವರನ್ನು ನಡು ಬೀದಿಯಲ್ಲಿ ಬಿಟ್ಟು ಬಿಡುತ್ತೆ. ಆರಂಭದಲ್ಲಿ ಸಿಕ್ಕ ಯಶಸ್ಸು ಮುಂದಿನ ದಿನಗಳಲ್ಲಿ ಸಿಗೋದಿಲ್ಲ. ಪರಿಣಾಮ ಖಿನ್ನತೆ, ಆತ್ಮಹತ್ಯೆ ಅಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ. ಹೌದು, ಕನ್ನಡ ಕಿರುತೆರೆ ಹಾಗೂ ಚಿತ್ರರಂಗ ಮತ್ತೊಬ್ಬ ಯುವ ಕಲಾವಿದನನ್ನು ಕಳೆದುಕೊಂಡಿದೆ.
ಸಿನಿಮಾ, ಕಿರುತೆರೆಯ ಕಲಾವಿದ ಸಂಪತ್ ಜಯರಾಂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ನೂರಾರು ಕನಸು ಹೊತ್ತು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಲಾವಿದರು ಅವಕಾಶ ವಂಚಿತರಾಗಿಯೋ, ಇಲ್ಲ ಖಿನ್ನತೆ ಜಾರಿಯೋ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿಂದೆ ಕೂಡ ಹಲವು ಕಾರಣಕ್ಕೆ ಕನ್ನಡ ಕಿರುತೆರೆಯ ಕಲಾವಿದರು ದುಡುಕಿನ ನಿರ್ಧಾರಕ್ಕೆ ಮುಂದಾಗಿ ಜೀವವನ್ನೇ ಕಳೆದು ಕೊಂಡಿದ್ದಾರೆ.
ಅಗ್ನಿಸಾಕ್ಷಿ ಸಂಪತ್ ಜಯರಾಂ
ಅಗ್ನಿಸಾಕ್ಷಿ ಅಂತ ಜನಪ್ರಿಯ ಧಾರಾವಾಹಿಯಲ್ಲಿ ಸಂಪತ್ ಜಯರಾಂ ನಟಿಸಿದ್ದರು. ಅಲ್ಲಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ 'ಬಾಲಾಜಿ ಫೋಟೊ ಸ್ಟುಡಿಯೋ' ಅನ್ನೋ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಕೆಲವು ದಿನಗಳಿಂದ ಸಂಪತ್ ಜಯರಾಂಗೆ ಉತ್ತಮ ಅವಕಾಶಗಳು ಸಿಕ್ಕಿರಲಿಲ್ಲ. ಹೀಗಾಗಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ನಿನ್ನೆ (ಏಪ್ರಿಲ್ 22) ನೆಲಮಂಗಳ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಿರುತೆರೆ ನಟ ಸುಶೀಲ್ ಗೌಡ
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಮತ್ತೊಬ್ಬ ಯುವ ಸುಶೀಲ್ ಗೌಡ. ಮಂಡ್ಯ ಮೂಲದ ಈ ನಟ ಜನಪ್ರಿಯ ಧಾರಾವಾಹಿ 'ಅಂತ:ಪುರ'ದಲ್ಲಿ ನಟಿಸಿದ್ದರು. ಬಳಿಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ 'ಸಲಗ'ದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ದುರಾದೃಷ್ಟವಶಾತ್ ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಆತ್ಮಹತ್ಯೆಗೆ ಶರಣಾಬಿಟ್ರು.

ಜಯಶ್ರೀ ರಾಮಯ್ಯ
ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿದ್ದವರು ಜಯಶ್ರೀ ರಾಮಯ್ಯ. ಈ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಈ ನಟಿ ಹಲವು ದಿನಗಳಿಂದ ಖಿನ್ನತೆಗೆ ಜಾರಿದ್ದರು. ಹಲವು ದಿನಗಳಿಂದ ಪುನರ್ವಸತಿ ಕೇಂದ್ರದಲ್ಲಿದ್ದರು. ಖಿನ್ನತೆಯಿಂದ ಹೊರ ಬರೋಕೆ ಅದೆಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದರು.

ಕಿರುತೆರೆ ನಟಿ ಹೇಮಶ್ರೀ
ಕಿರುತೆರೆಯಲ್ಲಿ ಹೇಮಶ್ರೀ ಬಹಳಷ್ಟು ಹೆಸರುವಾಸಿಯಾಗಿದ್ದರು. 'ವಠಾರ' ಧಾರಾವಾಹಿಯಿಂದ ಆರಂಭಿಸಿ 'ತುಳಸಿ', 'ಉತ್ತರಾಯಣ', 'ಮಹಾಮಾಯಿ' ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷದಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದರು. ಮದುವೆ,ಚುನಾವಣೆಯಲ್ಲಿ ಸೋಲು ಅವರನ್ನು ಭಾದಿಸಿತ್ತು ಎನ್ನಲಾಗಿದೆ. ಆಂಧ್ರ ಅನಂತಪುರದಿಂದ ಹಿಂತಿರುಗುವಾಗ ಇದ್ದಕ್ಕಿದ್ದ ಹಾಗೇ ಹೇಮಶ್ರೀ ಪ್ರಜ್ಙೆ ತಪ್ಪಿದ್ದರು. ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಕೊನೆಯುಸಿರೆಳೆದಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕ್ಲೋರೋಫಾರ್ಮ್ ಇರುವುದಾಗಿ ವರದಿಯಾಗಿತ್ತು. ಸದ್ಯ ಇವರ ಸಾವು ಆತ್ಮಹತ್ಯೆಯೋ, ಇಲ್ಲ ಕೊನೆಯೋ ಅನ್ನೋದಕ್ಕೆ ತಾರ್ಕಿಕ ಉತ್ತರ ಸಿಕ್ಕಿಲ್ಲ.

ಕಿರುತೆರೆ ನಟಿ ಸೌಜನ್ಯ
ಎರಡು ವರ್ಷಗಳ ಹಿಂದಷ್ಟೇ ಕಿರುತೆರೆ ನಟಿ ಸೌಜನ್ಯಾರನ್ನು ಕಳೆದುಕೊಂಡಿತ್ತು. ಸೌಜನ್ಯಾ ಕುಂಬಳಗೋಡಿನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ಯಾವ ಮೇಲೂ ಆರೋಪ ಮಾಡಿರಲಿಲ್ಲ. ಮಾನಸಿಕವಾಗಿ ಕುಗ್ಗಿರುವುದಾಗಿ ಹೇಳಿದ್ದರು. "ನನ್ನ ಜೀವನದಲ್ಲಿ ಇಂತಹದ್ದೊಂದು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರಾಮಿಸ್ ಮಾಡಿದ್ದೆ. ಆದರೆ, ನನಗೀಗ ಯಾವುದೇ ಆಯ್ಕೆ ಇಲ್ಲ" ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದರು.



Click it and Unblock the Notifications











