Taledanda: ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ತಲೆದಂಡ'ದಲ್ಲಿ ಪ್ರಕೃತಿಯ ನಾದ!
ಏಪ್ರಿಲ್ 1ರಂದು ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಎರಡು ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್'. ಇನ್ನೊಂದು ಸಂಚಾರಿ ವಿಜಯ್ ಅಭಿನಯದ ತಲೆದಂಡ. ಈ ಎರಡೂ ಸಿನಿಮಾಗಳು ಈ ವಾರ ಸದ್ದು ಮಾಡುತ್ತಾ? ಎನ್ನುವುದು ಕುತೂಹಲ ಕೆರಳಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ್ದ ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ತಲೆದಂಡ' ಕೂಡ ಏಪ್ರಿಲ್ 1ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ವಿಶೇಷ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆತನ ಪರಿಸರ ಪ್ರೇಮ, ಪ್ರಕೃತಿಯ ಪರ ಹೋರಾಟವನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲೊಂದು ಸಿನಿಮಾದ ಸಂಗೀತ. ಸಂದೇಶ ಸಾರುವ ಸಿನಿಮಾ ಸುಮಾರು 12 ಬಿಟ್ ಸಾಂಗ್‌ಗಳನ್ನು ಇಡಲಾಗಿದ್ಯಂತೆ. ಅದ್ಯಾಕೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.
'ತಲೆದಂಡ' ಸಿನಿಮಾದಲ್ಲಿ 12 ಹಾಡುಗಳು ಪ್ರಧಾನ
'ತಲೆದಂಡ' ಸಿನಿಮಾ ಪರಿಸರ. ಅದನ್ನು ಉಳಿಸಲು ಹೋರಾಡುವ ಮುಗ್ಧ ವ್ಯಕ್ತಿಯೊಬ್ಬನ ಕಥೆ. ಇಂತಹ ಪ್ರಬುದ್ಧ ಕತೆಯಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇಲ್ಲಿ ಹಾಡುಗಳೂ ಕೂಡ ಪ್ರಮುಖ ಪಾತ್ರವೆನಿಸಿಕೊಂಡಿವೆಯಂತೆ. ಅದೇ ಕಾರಣಕ್ಕೆ ಚಿತ್ರದಲ್ಲಿ 12 ಬಿಟ್ ಸಾಂಗ್‌ಗಳನ್ನು ಇಡಲಾಗಿದೆ. ಹರಿಕಾವ್ಯ ಎನ್ನುವವರು ಈ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.

ಪ್ರವೀಣ್ ಕೃಪಾಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕೃತಿಯ ನಾದವನ್ನೇ ಬಳಸಿಕೊಂಡು ಹಾಡುಗಳನ್ನು ರಚಿಸಲಾಗಿದೆಯಂತೆ. ಸಿನಿಮಾಗೆ ಪ್ರಕೃತಿ ಹೇಗೆ ಜೀವಾಳವೋ.. ಹಾಗೇ ಹಾಡುಗಳಿಗೆ ಪ್ರಕೃತಿ ಕೂಡ ಜೀವಾಳ. ಸಂಚಾರಿ ವಿಜಯ್ ಅಭಿನಯ, ಅದಕ್ಕೆ ತಕ್ಕ ಕಥೆ, ಕಥೆಗೆ ತಕ್ಕ ಸಂಗೀತ ಈ ಸಿನಿಮಾದಲ್ಲಿ ಎನ್ನುತ್ತಿದೆ ಚಿತ್ರತಂಡ. ಹೀಗಾಗಿ ಸಂಚಾರಿ ವಿಜಯ್ ಅಭಿನಯಿಸಿದ ಕೊನೆಯ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.

ಸೋಲಿಗರ ಜನಾಂಗದ ಹಾಡುಗಳ ಸದ್ದು
ಪ್ರಕೃತಿಯ ಮಡಿಲಿನಲ್ಲೇ ಇರುವ ಸೋಲಿಗರು, ಅವರ ಪರಿಸರ ಪ್ರೇಮ, ಅವರ ಸಂಪ್ರದಾಯಗಳನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ. ಇದು ಕನ್ನಡ ಚಿತ್ರರಂಗದಲ್ಲಿಯೇ ವಿಶಿಷ್ಟ ಸಿನಿಮಾ ಎನ್ನುತ್ತಾರೆ. ಸಂಚಾರಿ ವಿಜಯ್ ಈ ಸಿನಿಮಾ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುವುದು ಗ್ಯಾರಂಟಿ ಎನ್ನುತ್ತಿದೆ ತಂಡ.
'ತಲೆದಂಡ' ಸಿನಿಮಾಗೆ ಚಿತ್ರೀಕರಣಕ್ಕೂ ಮುನ್ನವೇ ಬಿಟ್ ಸಾಂಗ್ ರೆಡಿಯಾಗಿತ್ತು. ಸಂಗೀತ ನಿರ್ದೇಶಕ ಹರಿಕಾವ್ಯ ಒಟ್ಟಾರೆ 12 ಬಿಟ್ ಸಾಂಗ್‌ಗಳನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಕಥೆಗೆ ತಕ್ಕಂತೆ ಹಾಡುಗಳು ಬೇಕಿದ್ದರಿಂದ ಹರಿಕಾವ್ಯ ಅದಕ್ಕೆ ತಕ್ಕಂತೆ ಸಂಗೀತ ನೀಡಿದ್ದಾರೆ. ಹರಿಕಾವ್ಯ ಈ ಹಿಂದೆ 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್ 'ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ 'ವಿನಾಶಿನಿ', 'ಹಳ್ಳಿ ಪಂಚಾಯಿತಿ', 'ಆಘಾತ', 'ಮಾನಸ ಸರೋವರ', 'ಬೆಳಕಿನ ಕನ್ನಡಿ', ಈಗ 'ತಲೆದಂಡ', ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ದಿವಂಗತ ಸಂಚಾರಿ ವಿಜಯ್ ವಿಶೇಷ ಪಾತ್ರ, ವಿಶಿಷ್ಟ ಕಥೆಯನ್ನು ಆಧರಿಸಿದ ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. ನಟನೆ ಮೂಲಕ ಸಂಪೂರ್ಣ ಜೀವ ತುಂಬಿ ಮರೆಯಾದ ನಟನ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ.


Click it and Unblock the Notifications











