ಅಣ್ಣಾವ್ರ ಕಟೌಟ್ ಮುಂದೆ ಸ್ಪೆಷಲ್ ಆಕ್ಷನ್ ಸೀಕ್ವೆನ್ಸ್ ಮುಗಿಸಿದ ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್; ಇಲ್ಲಿದೆ ಫೋಟೋಗಳು
ಸರೋವರ್ ಸಂಜೀವ್ ಅವರ ಕುಟುಂಬದಿಂದ ಮತ್ತೊಬ್ಬ ಹೀರೋ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅದ್ಧೂರಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸುದೀಪ್ ಹಾಗೂ ಕೆಆರ್‌ಜಿ ಸ್ಟುಡಿಯೋ ಜಂಟಿಯಾಗಿ ನಿರ್ಮಿಸುತ್ತಿರುವ 'ಮ್ಯಾಂಗೋ ಪಚ್ಚ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ 'ಮ್ಯಾಂಗೋ ಪಚ್ಚ' ಸಿನಿಮಾದ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಅನ್ನು ಶೂಟಿಂಗ್ ಮಾಡಲಾಗಿದ್ದು, ಎರಡು ಫೋಟೊಗಳನ್ನು ರಿವೀಲ್ ಮಾಡಲಾಗಿದೆ.
ಫೆಬ್ರವರಿ 5, 2025ರಂದು ಸಂಚಿತ್ ಸಂಜೀವ್ ಹುಟ್ಟುಹಬ್ಬದಂದು 'ಮ್ಯಾಂಗೋ ಪಚ್ಚ' ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿತ್ತು. ಸಿನಿಮಾ ಟೈಟಲ್ ಹಾಗೂ ಫಸ್ಟ್ ಲುಕ್ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. 'ಮ್ಯಾಂಗೋ ಪಚ್ಚ' ಮೂಲಕ ಮತ್ತೊಬ್ಬ ಹೀರೋ ಸ್ಯಾಂಡಲ್‌ವುಡ್‌ಗೆ ಸಿಗೋದು ಗ್ಯಾರಂಟಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಬರ್ತ್‌ಡೇಯಂದೇ ಈ ಸಿನಿಮಾದ ಪ್ರೋಮೋ ಕೂಡ ರಿಲೀಸ್ ಮಾಡಲಾಗಿತ್ತು. ಸಿನಿಪ್ರಿಯರಿಗೂ ಈ ಫಸ್ಟ್ ಲುಕ್ ಟೀಸರ್ ಪ್ರಾಮಿಸಿಂಗ್ ಅಂತ ಅನಿಸಿತ್ತು.

'ಮ್ಯಾಂಗೋ ಪಚ್ಚ' ಶೀರ್ಷಿಕೆನೇ ಮಾಸ್ ಆಗಿದ್ಮೇಲೆ ಆಕ್ಷನ್ ಸೀಕ್ವೆನ್ಸ್ ಅನ್ನೂ ಅಷ್ಟೇ ರಗಡ್ ಆಗಿ ಇರಲೇಬೇಕು. ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಹಾಗೂ ಕೆಆರ್‌ಜಿ ಸ್ಟುಡಿಯೋ ಜಂಟಿಯಾಗಿ ನಿರ್ಮಾಣವನ್ನು ಮಾಡುತ್ತಿದೆ. ಈ ಸಿನಿಮಾ ವಿವೇಕ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಾಗಿದ್ದರೆ, 'ಮ್ಯಾಂಗೋ ಪಚ್ಚ' ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಹೇಗಿದೆ? ಎಲ್ಲೆಲ್ಲಿ ಶೂಟಿಂಗ್ ಮಾಡಲಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸಂಚಿತ್ ಸಂಜೀವ್ ನಟಿಸುತ್ತಿರುವ 'ಮ್ಯಾಂಗೋ ಪಚ್ಚ' ಸಿನಿಮಾದ ಎರಡನೇ ಪ್ರಮುಖ ಆಕ್ಷನ್ ಸೀಕ್ವೆನ್ಸ್ ಇದು. ಇದೊಂದು ಮಾಸ್ ಸಿನಿಮಾ ಆಗಿರುವುದರಿಂದ ಹಲವು ಆಕ್ಷನ್ ಸೀಕ್ವೆನ್ಸ್ ಇವೆ. ಪ್ರತಿಯೊಬ್ಬ ಹೀರೋಗೂ ಆಕ್ಷನ್ ಸೀಕ್ವೆನ್ಸ್ ಮುಖ್ಯ. ಅದರಲ್ಲೂ ಸಿನಿಮಾರಂಗಕ್ಕೆ ಕಾಲಿಡುತ್ತಿರುವ ಹೀರೋ ಆಗಿದ್ದರಂತೂ ಸ್ವಲ್ಪ ಜಾಸ್ತಿನೇ ಬಿಲ್ಡಪ್ ಬೇಕು. ಆಕ್ಷನ್ ಸೀಕ್ವೆನ್ಸ್ ಕೂಡ ಅಷ್ಟೇ ವಿಭಿನ್ನವಾಗಿ ಇರಬೇಕು. ತಮ್ಮ ಸಿನಿಮಾ ಎರಡನೇ ಆಕ್ಷನ್ ಸೀನ್ಸ್ ಬಗ್ಗೆ ಸಂಚಿತ್ ಸಂಜೀವ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
'ಮ್ಯಾಂಗೋ ಪಚ್ಚ' ಸಿನಿಮಾದ ಎರಡನೇ ಆಕ್ಷನ್ ಸೀನ್ಸ್ ಅನ್ನು ಬಹುತೇಕ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸ್ಪೆಷಲ್ ಆಕ್ಷನ್ಸ್ ಸಿನಿಮಾದ ಬಹುಮುಖ್ಯ ಭಾಗ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಗೇ ಸಂಚಿತ್ ಸಂಜೀವ್ ಕೂಡ ಈ ಆಕ್ಷನ್ ಸೀನ್ ಪ್ರತಿಕ್ರಿಯೆ ನೀಡಿದ್ದಾರೆ. "ಮ್ಯಾಂಗೋ ಪಚ್ಚ ಸಿನಿಮಾದ ಎರಡನೇ ಆಕ್ಷನ್ ಸೀಕ್ವೆನ್ಸ್ ಅನ್ನು ಮುಗಿಸಿದ್ದೇವೆ. ಇದು ನಿಜಕ್ಕೂ ವಿಶೇಷವಾಗಿತ್ತು. ನಾವು ಈ ಆಕ್ಷನ್ ಸೀಕ್ವೆನ್ಸ್ ರಾಜ್‌ಕುಮಾರ್ ಸರ್ ಅವರ ಮುಂದೆ ಶೂಟಿಂಗ್ ಮಾಡಿದ್ದೇವೆ. ಅವರ ಪರಂಪರೆ ಹಾಗೂ ಎನರ್ಜಿ ನಮಗೆ ಗೈಡ್ ಮಾಡಿದೆ. ಅರ್ಜುನ್ ಮಾಸ್ಟರ್ ಈ ಆಕ್ಷನ್ ಸೀಕ್ವೆನ್ಸ್ ಅನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ." ಎಂದು ಸಂಜಿತ್ ಖುಷಿ ಪಟ್ಟಿದ್ದಾರೆ.

ಸಂಚಿತ್ ಸಂಜೀವ್ ಈ ಆಕ್ಷನ್ ಸೀಕ್ವೆನ್ಸ್‌ನ ಕೆಲವು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಈ ಆಕ್ಷನ್ ಸೀಕ್ವೆನ್ಸ್‌ನ ತುಣುಕು ಹಾಗೂ ಅದೆಷ್ಟು ರಗಡ್ ಹಾಗೂ ಎನರ್ಜೆಟಿಕ್ ಆಗಿದೆ ಅನ್ನೋದನ್ನು ತೋರಿಸಲಾಗಿದೆ. 'ಮ್ಯಾಂಗೋ ಪಚ್ಚ' ಪಕ್ಕಾ ಆಕ್ಷನ್ ಮಾಸ್ ಸಿನಿಮಾ. ಇದು ಸಂಚಿತ್ ವೃತ್ತಿ ಬದುಕಿನ ಬಹು ಮುಖ್ಯ ಭಾಗವಾಗಲಿದೆ. ಸದ್ಯ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ನಡೆಯುತ್ತಿದೆ.
'ಮ್ಯಾಂಗೋ ಪಚ್ಚ' ಸಿನಿಮಾ ಮುನ್ನವೇ ಸಂಚಿತ್ ಸಂಜೀವ್ 'ಜಿಮ್ಮಿ' ಎನ್ನುವ ಪ್ರಾಜೆಕ್ಟ್‌ನಲ್ಲಿ ನಟಿಸಬೇಕಿತ್ತು. ಲಹರಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿತ್ತು. ಆದರೆ, ಕಾರಣಾಂತರಗಳಿಂದ 'ಜಿಮ್ಮಿ' ಆರಂಭ ಆಗಲಿಲ್ಲ. ಇದೇ ವೇಳೆ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಹಾಗೂ ಕೆಆರ್‌ಜಿ ಸ್ಟುಡಿಯೋ ಜಂಟಿಯಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅಂದುಕೊಂಡಂತೆ ಸಿನಿಮಾ ಮುಗಿದರೇ ಇದೇ ವರ್ಷ ರಿಲೀಸ್ ಆಗಲಿದೆ.


Click it and Unblock the Notifications











