ಕಳೆದ ಒಂದೆರಡು ವರ್ಷಗಳಲ್ಲಿ ಶಿವರಾಜ್ ಕುಮಾರ್ ಅದೆಷ್ಟು ಬದಲಾಗಿ ಹೋದರು!
ತನಗೆ ಹೆಸರು, ಹಣ ತಂದುಕೊಟ್ಟಿದ್ದ ಬಣ್ಣದಲೋಕವನ್ನು ಬಿಟ್ಟು ರಾಜಕೀಯದಲ್ಲಿ ಸಾಧನೆ ಮಾಡಲು ಹೋಗಿ ಚಿರಂಜೀವಿ ಸೋತದ್ದು ಗೊತ್ತೇ ಇದೆ. ಇದಾದ ಹಲವು ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಮೆಗಾಸ್ಟಾರ್ ಚಿರಂಜೀವಿ "ಸೈರಾ ನರಸಿಂಹ ರೆಡ್ಡಿ" ಮೂಲಕ, ಗಾಂಧಿ ಜಯಂತಿಯ ದಿನದಂದು ತೆರೆಯಲ್ಲಿ ಆರ್ಭಟಿಸಲಿದ್ದಾರೆ. ವಿಚಾರ ಅದಲ್ಲ,
ಇಲ್ಲಿ ಎರಡು ವಿಚಾರವಿದೆ. ಒಂದು, ಈ ಚಿತ್ರ ಕನ್ನಡ ಸಹಿತ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಈ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವುದಾಗಿ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಹೇಳಿರುವುದು. ಶಿವಣ್ಣ ಅವರ ಹೇಳಿಕೆ ಯಾಕೆ ಇಲ್ಲಿ ಮಹತ್ವ ಪಡೆದುಕೊಂಡಿದೆ ಅಂದರೆ, ಈ ಹಿಂದೆ ಅವರು ಹೊಂದಿದ್ದ ನಿಲುವು.
ಸುಮಾರು ಎರಡ್ಮೂರು ವರ್ಷಗಳ ಹಿಂದಿನ ಮಾತು. 'ನಾನು ಡಬ್ಬಿಂಗ್ ವಿರೋಧಿ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಕ್ಕೆ ಅವಕಾಶ ಮಾಡಿಕೊಡಬಾರದು,' ಎಂದು ಶಿವಣ್ಣ ಹೇಳಿದ್ದರು. ಇಲ್ಲಿ, ಡಬ್ಬಿಂಗ್ ಬೇಕೋ, ಬೇಡವೋ ಎನ್ನುವುದಕ್ಕಿಂತ, ಬದಲಾದ ಶಿವರಾಜ್ ಕುಮಾರ್ ನಿಲುವು. ಸೈರಾ ಚಿತ್ರದ ಪ್ರೆಸ್ ಮೀಟ್ ವೇಳೆ, ಶಿವಣ್ಣ ಹೇಳಿಕೆಯನ್ನು ಡಬ್ಬಿಂಗ್ ಪರವಾಗಿರುವವರು ಮುಕ್ತಕಂಠದಿಂದ ಹೊಗಳಿದ್ದಾರೆ.
'ಡಬ್ಬಿಂಗ್' ಕನ್ನಡ ಸಿನಿಮಾ ಮಾರುಕಟ್ಟೆಗೆ ಮಾರಕ ಎನ್ನುವ ಅದೆಷ್ಟೋ ಹೋರಾಟಗಳಿಗೆ ಸಿನಿಪ್ರೇಕ್ಷಕ ಸಾಕ್ಷಿಯಾಗಿದ್ದಾನೆ. ದುರಂತವೆಂದರೆ, ಈ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಕೆಲವು ಹೋರಾಟಗಾರರೇ, ಪರಭಾಷಾ ಚಿತ್ರಗಳ ಬಿಕೆಟಿ ( ಬೆಂಗಳೂರು, ಕೋಲಾರ, ತುಮಕೂರು) ಭಾಗದ ವಿತರಕರಾಗಿದ್ದರು.

"ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಏನಾದಾರೂ ಸಿಗುತ್ತಾ" ಎಂದಿದ್ದ ಶಿವಣ್ಣ
"ಡಬ್ಬಿಂಗ್ ಬೇಕೆಂದು ಬಯಸುವುವರು ಕೆಲವರು ಮಾತ್ರ, ಅಂಥವರಿಗೆ ಕನ್ನಡ ಚಿತ್ರರಂಗಕ್ಕೆ ಇದರಿಂದಾಗುವ ಹಾನಿಯ ಬಗ್ಗೆ ತಿಳುವಳಿಕೆ ಇದೆಯೇ? ಹಿಂದಿ, ತಮಿಳು, ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ, ಮೂಲ ಭಾಷೆಯಲ್ಲಿ ಯಾಕೆ ಬಿಡುಗಡೆಯಾಗ ಬೇಕು? ಇತರ ಭಾಷೆಯ ಚಿತ್ರಗಳು ಕನ್ನಡದಲ್ಲೂ ಡಬ್ ಆಗಿ, ಮೂಲ ಭಾಷೆಯಲ್ಲೂ ಬಿಡುಗಡೆಯಾದರೆ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಏನಾದಾರೂ ಸಿಗುತ್ತಾ" ಎಂದು ಶಿವಣ್ಣ ಖಾರವಾಗಿ ಪ್ರಶ್ನಿಸಿದ್ದರು.

ನಮ್ಮ ಚಿತ್ರಗಳು ಗತಿಯೇನು. ನಮ್ಮ ಚಿತ್ರರಂಗ ಈಗ ಸ್ವಲ್ಪ ಸುಧಾರಿಸಿ ಕೊಳ್ಳುತ್ತಿದೆ
"ನಾವು ಡಬ್ಬಿಂಗ್ ವಿರೋಧಿಸುತ್ತಿದ್ದೇವೆ ಅಂದರೆ ಅದರ ಹಿಂದೆ ನಮ್ಮ ಚಿತ್ರರಂಗದ ಹಿತದೃಷ್ಟಿಯಿದೆ ಎನ್ನುವುದನ್ನು ಡಬ್ಬಿಂಗ್ ಪರವಿರುವವರು ಅರಿಯಬೇಕು. ನಮ್ಮದು ಚಿಕ್ಕ ಮಾರುಕಟ್ಟೆ, ಅದರಲ್ಲಿ ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೆ ನಮ್ಮ ಚಿತ್ರಗಳು ಗತಿಯೇನು. ನಮ್ಮ ಚಿತ್ರರಂಗ ಈಗ ಸ್ವಲ್ಪ ಸುಧಾರಿಸಿ ಕೊಳ್ಳುತ್ತಿದೆ. ಇದಕ್ಕೆ ಕಲ್ಲು ಹಾಕಬೇಡಿ, ಹಾಕಕ್ಕೆ ಬರುವವರನ್ನು ತಡಿಯಿರಿ" ಇದು ಶಿವಣ್ಣ ಹೊಂದಿದ್ದ ನಿಲುವು.

ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದಿದ್ದೆ
ಒಂದು ಹಂತದಲ್ಲಿ "ಡಬ್ಬಿಂಗ್ ನಿಷೇಧಕ್ಕಾಗಿ ಪ್ರಾಣ ಕೊಡಲೂ ಸಿದ್ಧ" ಎಂದು ಶಿವಣ್ಣ ಹೇಳಿದ್ದರು. ಸ್ಯಾಂಡಲ್ ವುಡ್ ನ ಹಲವು ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಶಿವಣ್ಣ ಪರವಾಗಿ ನಿಂತಿದ್ದರು. ಆದರೆ, ಡಬ್ಬಿಂಗ್ ನಿಷೇಧ ತೆರವುಗೊಂಡ ನಂತರ, ಶಿವಣ್ಣ ತಮ್ಮ ನಿಲುವನ್ನೂ ಬದಲಾಯಿಸಿದರು. " ಈ ಹಿಂದೆ ನಾನು ವಿರೋಧಿಸಿದ್ದು ನಿಜ. ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದಿದ್ದೆ" ಎಂದು ಶಿವಣ್ಣ ಹೇಳಿದ್ದರು.

ಉತ್ತಮ ಚಿತ್ರಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡುತ್ತಾರೆ
" ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳು ಬರುತ್ತಿವೆ. ಆದರೆ ಉತ್ತಮ ಚಿತ್ರಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡುತ್ತಾರೆ. ಡಬ್ಬಿಂಗ್ ಚಿತ್ರ ಬೇಕು ಬೇಡ ಎನ್ನುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಡಬ್ಬಿಂಗ್ ಮಾಡುವುದು ವರ್ತ್ ಎಂದು ನನಗೆ ಅನ್ನಿಸುವುದಿಲ್ಲ. ಆದರೆ ಜನರಿಗೆ ಬೇಕು ಅಂದರೆ ಬೇಡ ಎನ್ನುವುದಕ್ಕೆ ನಾನು ಯಾರು. ನಾವು ಕಲಾವಿದರು, ಮನೋರಂಜನೆ ನಮ್ಮ ಉದ್ದೇಶ" ಎಂದಿದ್ದರು.

ಎಲ್ಲಾ ಹಳೆ ಸಿನಿಮಾಗಳು ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಆಗಲೂ ಸಾಧ್ಯವಿಲ್ಲ
ನಿಷೇಧ ತೆರವು, ಶಿವಣ್ಣ ಅವರ ಬದಲಾದ ನಿಲುವಿನಿಂದ, 'ಸತ್ಯ ಐಪಿಎಸ್' ಸೇರಿದಂತೆ ಹಲವು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದೆ. ಹಲವು ವರ್ಷಗಳ ಹಿಂದೆ ಮೂಲ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅದ್ಯಾವುದೂ ನಿರೀಕ್ಷಿತ ಮಟ್ಟಕ್ಕೆ ಯಶಸ್ಸನ್ನು ಪಡೆಯಲಿಲ್ಲ. ಎಲ್ಲಾ ಹಳೆ ಸಿನಿಮಾಗಳು ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಆಗಲೂ ಸಾಧ್ಯವಿಲ್ಲ.

ದಶಕಗಳಿಂದ ಡಬ್ಬಿಂಗ್ ನಿಷೇಧದ ವಿರುದ್ದದ ಹೋರಾಟ ತಾರ್ಕಿಕ ಅಂತ್ಯ
ಈಗ ಸೈರಾ ನರಸಿಂಹ ರೆಡ್ಡಿ, ಮುಂದೆ ದಬಾಂಗ್ - 3 ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಚಿರಂಜೀವಿ ಜೊತೆ ಶಿವಣ್ಣ, ಸೈರಾ ನರಸಿಂಹರೆಡ್ಡಿ ಪ್ರಮೋಷನ್ ನಲ್ಲಿ ಭಾಗವಹಿಸಿ ಸೈರಾ ಚಿತ್ರವನ್ನು ಕನ್ನಡದಲ್ಲೇ ನೋಡುವಂತೆ ಕರೆಕೊಟ್ಟಿದ್ದಾರೆ. ಅಲ್ಲಿಗೆ, ದಶಕಗಳಿಂದ ಡಬ್ಬಿಂಗ್ ನಿಷೇಧದ ವಿರುದ್ದದ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ.


Click it and Unblock the Notifications











