ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ತಾರೆಯರು ಪ್ರತಿಕ್ರಿಯೆ ಹೇಗಿತ್ತು?
ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯನ್ನು ದೇಶದ ಮೂಲೆ ಮೂಲೆಯಲ್ಲೂ ಖಂಡಿಸಲಾಗುತ್ತಿದೆ. ಈ ಪ್ರಕರಣಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹರ್ಷ ಹತ್ಯೆಗೈದವರಿಗೆ ಶಿಕ್ಷೆ ಆಗಲೇಬೇಕು, ನ್ಯಾಯ ಸಿಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್, ಬಾಲಿವುಡ್‌ನ ನಟಿಯರು ಹರ್ಷ ಹತ್ಯೆಯನ್ನು ಖಂಡಿಸಿದ್ದಾರೆ.
23 ವರ್ಷದ ಹರ್ಷ ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದನು. ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಎನ್.ಟಿ ರಸ್ತೆ ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಹರ್ಷ ಕೊನೆಯುಸಿರೆಳೆಯುತ್ತಿದ್ದಂತೆ ಶಿವಮೊಗ್ಗದಲ್ಲಿ ಗಲಾಟೆ ಶುರುವಾಗಿದೆ. ಆದರೆ, ಈ ಪ್ರಕರಣ ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗಿರದೆ, ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕ್ರಿಯೆ ನೀಡಬಹುದಾದವರು ಸುಮ್ಮನೆ ಕೂತಿದ್ದಾರೆ. ಹಾಗಿದ್ದರೆ, ಹರ್ಷ ಹತ್ಯೆ ಪ್ರಕರಣಕ್ಕೆ ಯಾರೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ತಿಳಿಯಲು ಮುಂದೆ ಓದಿ.

ರಮ್ಯಾ ಪ್ರತಿಕ್ರಿಯೆ
ಸ್ಯಾಂಡಲ್ವುಡ್ಗೆ ಮತ್ತೆ ಕಂಬ್ಯಾಕ್ ಮಾಡುವ ಮೂಡಿನಲ್ಲಿರುವ ನಟಿ ರಮ್ಯಾ ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದು, ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಜನರನ್ನು ಬಲಿಯಾಗಬೇಕು? ಇದನ್ನೆಲ್ಲಾ ತಡೆಯಲು ಶಾಂತಿ, ಏಕತೆ ಮತ್ತು ಸಾಮರಸ್ಯ ನಮ್ಮ ಮುಂದಿರುವ ಏಕೈಕ ಆಯ್ಕೆ.'' ಎಂದು ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಮಾಳವಿಕ ಅವಿನಾಶ್
ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹರ್ಷ ಹತ್ಯೆಯನ್ನು ಖಂಡಿಸಿದ್ದಾರೆ. 'ಸದ್ಗತಿ ಪ್ರಾಪ್ತಿರಸ್ತು ಹರ್ಷ' ಎಂದು ಪ್ರತಿಕ್ರಿಯೆ ನೀಡುವುದರ ಜೊತೆಗೆ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ." ಎಂದು ಮಾಳವಿಕಾ ಅವಿನಾಶ್ ಪ್ರತಿಕ್ರಿಯಿಸಿದ್ದಾರೆ.

'ಸೈಕೋ' ನಟಿ ಅನಿತಾ ಭಟ್
'ಸೈಕೋ' ಸಿನಿಮಾದ ನಾಯಕಿ ಅನಿತಾ ಭಟ್ ಭಜರಂಗ ದಳದ ಕಾರ್ಯಕರ್ತನ ಹತ್ಯೆಯನ್ನು ವಿರೋಧಿಸಿದ್ದಾರೆ. "ಹರ್ಷ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು. ಇಂದು ಹರ್ಷ, ನಾಳೆ ನಾವು. ಯಾವ ತಾಯಿಗೂ ಇಂತಹ ಪರಿಸ್ಥಿತಿ ಬರಬಾರದು." ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಕಂಗನಾ-ರವೀನಾ ಟಂಡನ್ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟಿಯರಷ್ಟೇ ಅಲ್ಲ. ಬಾಲಿವುಡ್ ನಟಿಯರು ಕೂಡ ಪ್ರತ್ರಿಕ್ರಿಯೆ ನೀಡಿದ್ದಾರೆ. "ಹರ್ಷ ತಾಯಿ ಕೊಲೆಯಾದ ಮಗನನ್ನು ನೆನೆದು ಕಣ್ಣೀರಿಡುತ್ತಿರುವ ದೃಶ್ಯವನ್ನು ಶೇರ್ ಮಾಡಿದ್ದಾರೆ. ' ಇದು ಕರುಳು ಹಿಂಡುವ ದೃಶ್ಯ' ಎಂದು ಭಾವುಕರಾಗಿದ್ದಾರೆ. ಇದರ ಜೊತೆನೇ ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಿರುವ ನಟಿ ರವೀನಾ ಟಂಡನ್ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, 'ಹರ್ಷ ಸಾವಿಗೆ ನ್ಯಾಯ ಸಿಗಬೇಕು' ಎಂದಿದ್ದಾರೆ. ವಿಪರ್ಯಾಸ ಅಂದರೆ, ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಬಿಗ್ ಸ್ಟಾರ್‌ಗಳು ಮಾತ್ರ ಇದೂವರೆಗೂ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











