ಯಶ್ ಅಭಿನಯದ 'ಕಿರಾತಕ' ಸಿನಿಮಾದ ನಿರ್ದೇಶಕ ಪ್ರದೀಪ್ ರಾಜ್ ನಿಧನ
ರಾಕಿಂಗ್ ಸ್ಟಾರ್ ಯಶ್ ವೃತ್ತಿಗೆ ತಿರುವು ನೀಡಿದ ಸಿನಿಮಾ 'ಕಿರಾತಕ'. ಇದು ರಿಮೇಕ್ ಸಿನಿಮಾ ಆಗಿದ್ದರೂ, ಕರ್ನಾಟಕದ ನೆಟಿವಿಟಿಗೆ ತಕ್ಕಂತೆ ಕಥೆಯನ್ನು ಹೆಣೆಯಲಾಗಿದ್ದ ಸಿನಿಮಾ. ಇದೇ ಕಿರಾತಕ ಸಿನಿಮಾದ ನಿರ್ದೇಶಕ ಪ್ರದೀಪ್ ರಾಜ್ ಇಂದು( ಜನವರಿ 20) ಕೊನೆಯುಸಿರೆಳೆದಿದ್ದಾರೆ. ಬಹುದಿನಗಳಿಂದ ಪ್ರದೀಪ್ ರಾಜ್ ಅನಾರೋಗ್ಯದಿಂದ ಬಳಲುತ್ತಿದ್ದರು. ಪ್ರದೀಪ್ ರಾಜ್ ನಿಧನ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ನೀಡಿದೆ.
ಪ್ರದೀಪ್ ರಾಜ್ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಯಶ್ ಸಿನಿಮಾ 'ಕಿರಾತಕ' ಪ್ರದೀಪ್ ರಾಜ್‌ಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು. ಇಲ್ಲಿಂದ ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಅವರ ಅನಾರೋಗ್ಯದ ಸಮಸ್ಯೆಯಿಂದ ಕಳೆದ ಹಲವು ದಿನಗಳಿಂದ ಚಿತ್ರರಂಗದಿಂದ ದೂರವಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ನಿಧನ
ಪ್ರದೀಪ್ ರಾಜ್ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕನ್ನಡ ಚಿತ್ರರಂಗದಿಂದಲೇ ದೂರವಾಗಿದ್ದರು. ಪ್ರದೀಪ್ ರಾಜ್ ಅವರಿಗೆ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಇವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಹೀಗಾಗಿ ಅನಾರೋಗ್ಯದಿಂದ ಹೊರಲು ಪರದಾಡುತ್ತಿದ್ದ ನಿರ್ದೇಶಕ ಪ್ರದೀಪ್ ರಾಜ್ ಇಂದು ( ಜನವರಿ 20) ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಪಾಂಡಿಚೇರಿಯಲ್ಲಿ ಪ್ರದೀಪ್ ರಾಜ್ ನಿಧನ
ಬಹು ಅಂಗಾಂಗ ವೈಫಲ್ಯದಿಂದ ಪ್ರದೀಪ್ ರಾಜ್, ಇಂದು( ಜನವರಿ 20) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಾಂಡಿಚೇರಿಯಲ್ಲಿ ಪ್ರದೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸಿನಿಮಾಗಳಿಗೆ ಕಥೆಗಾರರಾಗಿ ಎಂಟ್ರಿ ಕೊಟ್ಟಿದ್ದ ಪ್ರದೀಪ್ ರಾಜ್ ದುನಿಯಾ ವಿಜಯ್ ಅಭಿನಯದ ರಜನಿಕಾಂತ, ಕಾವೇರಿ ನಗರ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿದ್ದರು. ಇಲ್ಲಿಂದ ಪ್ರದೀಪ್ ರಾಜ್ ಸಿನಿಮಾ ಪಯಣ ಆರಂಭ ಆಗಿತ್ತು.

ಯಶ್ ಬದುಕು ಬದಲಿಸಿದ 'ಕಿರಾತಕ'
ಪ್ರದೀಪ್ ರಾಜ್ ನಿರ್ದೇಶಿಸಿದ 'ಕಿರಾತಕ' ರಾಕಿಂಗ್ ಸ್ಟಾರ್ ಯಶ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಸಿನಿಮಾ. ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಿನಿಮಾವಿದು. ಮಂಡ್ಯ, ಮೈಸೂರು ಭಾಗದ ಮಾತಿನ ಶೈಲಿ ಹಾಗೂ ಸಂಪ್ರದಾಯಗಳನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದರು. ಹಾಸ್ಯ ಮಯ ಚಿತ್ರವನ್ನು ನೋಡಿ ಯಶ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಇಲ್ಲಿಂದ ಪ್ರದೀಪ್ ರಾಜ್ ವೃತ್ತಿ ಬದುಕು ಕೂಡ ಬದಲಾಗಿತ್ತು.

'ಕಿರಾತಕ' ಬಳಿಕ ಹಲವು ಸಿನಿಮಾ ನಿರ್ದೇಶನ
ಕಿರಾತಕ ಯಶಸ್ಸಿನ ಬಳಿಕ ಪ್ರದೀಪ್ ರಾಜ್ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಂಜದಗಂಡು, ಮಿಸ್ಟರ್ 420, ಬೆಂಗಳೂರು 560023 ಹೀಗೆ ಕೆಲವು ಸಿನಿಮಾಗಳಿಗೆ ಪ್ರದೀಪ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದರು. ಆದರೆ, ಅವರ ಅನಾರೋಗ್ಯ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡುವುದಕ್ಕೆ ಅನುವು ಮಾಡಿಕೊಡಲಿಲ್ಲ. ಯಶ್ ಕಿರಾತಕ 2 ಚಿತ್ರಕ್ಕೆ ಸೆಡ್ಡು ಹೊಡೆದು ಪ್ರದೀಪ್ ರಾಜ್ ಹೊಸಬರನ್ನು ಇಟ್ಟುಕೊಂಡು 'ಕಿರಾತಕ- 2' ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ.


Click it and Unblock the Notifications











