'I am God' ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದ ಹಾಡಿಗೆ ಧ್ವನಿಯಾದ ಸಂಜಿತ್ ಹೆಗ್ಡೆ
"ಐ ಯಾಮ್ ಗಾಡ್.. " ರಿಯಲ್ ಸ್ಟಾರ್ ಉಪೇಂದ್ರ ಅವರ ಫೇಮಸ್ ಡೈಲಾಗ್. ಈ ಡೈಲಾಗ್ ಇಂದಿಗೂ ಯುವಕರ ಬಾಯಲ್ಲಿ ಕೇಳುವುದಕ್ಕೆ ಸಿಗುತ್ತಲೇ ಇರುತ್ತೆ. ಇದೇ ಡೈಲಾಗ್ ಈಗ ಸಿನಿಮಾದ ಟೈಟಲ್ ಆಗಿ ಬದಲಾಗಿದೆ. ಹೌದು, 'I am God' ಅನ್ನೋ ಟೈಟಲ್ ಇಟ್ಟುಕೊಂಡು ಕನ್ನಡದ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಹಾಗಿದ್ರೆ, ಈ ಸಿನಿಮಾದ ಹೈಲೈಟ್ ಏನು ಅನ್ನೋದನ್ನು ನೋಡೋಣ.
'I am God' ಎನ್ನುತ್ತ ತೆರೆಮೇಲೆ ಹೀರೋಯಿಸ್ ತೋರಿಸುವುದಕ್ಕೆ ಬರುತ್ತಿರುವ ಯುವ ನಾಯಕ ರವಿ ಗೌಡ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಸಿ ಎಂ ಸಿದ್ಧರಾಮಯ್ಯ ರಿಲೀಸ್ ಮಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗ ಈ ಸಿನಿಮಾದ ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಚಿತ್ರತಂಡ ಮುಂದಾಗಿದೆ.

ಕನ್ನಡ ಚಿತ್ರರಂಗದಲ್ಲಿ ಸದ್ಯ ಹೊಸ ಪ್ರಯತ್ನಗಳು ಆಗುತ್ತಿವೆ. ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದರಲ್ಲಿ 'I am god' ಸಿನಿಮಾ ಕೂಡ ಒಂದು. ಈಗ ಈ ಸಿನಿಮಾದ ಹಾಡಿನ ಮೂಲಕ ಚಿತ್ರತಂಡ ಅಭಿಮಾನಿಗಳ ಮುಂದೆ ಬಂದಿದೆ. 'I am God' ಸಿನಿಮಾದಲ್ಲಿ ರವಿ ಗೌಡ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜಬಾವ್ದಾರಿಯನ್ನು ಕೂಡ ಅವರೇ ನೋಡಿಕೊಳ್ಳುತ್ತಿರೋದು ವಿಶೇಷ.
ಹೊಸ ಪ್ರತಿಭೆ ಅಂದಾಕ್ಷಣ ರವಿ ಗೌಡಗೆ ಇದು ಮೊದಲ ಸಿನಿಮಾವೇನೂ ಅಲ್ಲ. ಇದಕ್ಕೂ ಮೊದಲು ರವಿ ಗೌಡ 'ಧ್ವಜ' ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ 'I am God' ಸಿನಿಮಾ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ದೇಶಕರಾಗಿಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದೇ ಸಿನಿಮಾದಲ್ಲಿ ಎರಡು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.
ಈಗ ರವಿ ಗೌಡ 'I am God' ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ತಂಡ ಶೂಟಿಂಗ್ ಅನ್ನು ಸಂಪೂರ್ಣ ಮುಗಿಸಿ, ಪ್ರಚಾರವನ್ನು ಆರಂಭಿಸಿದೆ. ತಮ್ಮ ಧ್ವನಿಯಿಂದಲೇ ಸಂಗೀತ ಪ್ರಿಯರನ್ನು ಸೆಳೆದಿರುವ ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದು, ಯುವಕರ ಗಮನ ಸೆಳೆಯುತ್ತಿದೆ. ಅಜನೀಶ್ ಲೋಕನಾಥ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು, ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ರಚಿಸಿದ್ದಾರೆ.

"ಈ ಹಾಡಿನಲ್ಲಿ ಒಂದು ಹುಡುಗಿ ಮೇಲೆ ಲವ್ ಆದಾ ನಂತರ ಏನೆಲ್ಲ ಅನುಭವಗಳಾಗುತ್ತೆ ಎನ್ನುವುದು ತೋರಿಸಲಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಜೊತೆಗೆ ಸಂಜಿತ್ ಹೆಗ್ಡೆ ಧ್ವನಿ ಈ ಹಾಡಿಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ" ಎನ್ನುತ್ತಾರೆ ನಟ-ನಿರ್ದೇಶಕ ರವಿ ಗೌಡ. ಇನ್ನು ನಟನೆ, ನಿರ್ದೇಶನ ಮತ್ತು ನಿರ್ಮಾಣ ಎಲ್ಲವನ್ನು ಒಟ್ಟಿಗೆ ನಿಭಾಯಿಸಿದ ಬಗ್ಗೆನೂ ರವಿ ಗೌಡ ಪ್ರತಿಕ್ರಿಯಿಸಿದ್ದಾರೆ. "ಖುಷಿ ಹಾಗೂ ಭಯ ಎಲ್ಲಾ ರೀತಿಯ ಅನುವಾಗಿದೆ. ಒಂದೊಂದು ಸಾರಿ ಇದು ಬೇಕಿತ್ತು ಅಂತ ಅನಿಸಿತ್ತು. ಆದರೀಗ ನೋಡಿದ್ರೆ ಖುಷಿಯಾಗುತ್ತೆ' ಎಂದು ಹೇಳಿಕೊಂಡಿದ್ದಾರೆ.
'I am God' ಈಗಾಗಲೇ ಶೂಟಿಂಗ್ ಅನ್ನು ಸಂಪೂರ್ಣವಾಗಿ ಮುಗಿಸಿದ್ದು, ರಿಲೀಸ್‌ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. 'I am God' ಸಿನಿಮಾ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಅವರು ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲಿ 'I am God' ಅಂತ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
'I am God' ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಕಾಣಿಸಿಕೊಂಡಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾವಾಗಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ರವಿಶಂಕರ್, ಹಿರಿಯ ನಟ ಅವಿನಾಶ್, ಅರುಣ ಬಾಲರಾಜ್ ಸೇರಿದಂತೆ ಹಲವು ಜನಪ್ರಿಯ ನಟರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











