'ಅಮೃತ ವರ್ಷಿಣಿ' ನಟ ಶರತ್ ಬಾಬು ನಿಧನದ ಸುದ್ದಿ ಸುಳ್ಳು: ಸ್ಪಷ್ಟಪಡಿಸಿದ ಕುಟುಂಬ
ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು ಇಂದು (ಮೇ 3) ನಿಧನರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಹಳ ದಿನಗಳಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶರತ್ ಬಾಬು ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿತ್ತು. ಆ ಸುದ್ದಿ ಸುಳ್ಳು ಎಂದು ಕುಟುಂಬ ಮೂಲಗಳೇ ಸ್ಪಷ್ಟಪಡಿಸಿವೆ.
71 ವರ್ಷದ ಹಿರಿಯ ನಟ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಸ್ಥಿತಿ ಗಂಭೀರ ಎಂದೇ ಹೇಳಲಾಗುತ್ತಿತ್ತು. ಐಸಿಯುನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶರತ್ ಬಾಬು ಬಗ್ಗೆ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಸಂಬಂಧ ಕುಟುಂಬ ಪ್ರೆಸ್ ನೋಟ್ ರಿಲೀಸ್ ಮಾಡಿದೆ. "ಶರತ್ ಬಾಬು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಹೈದರಬಾದ್‌ನ ಆಸ್ಪತ್ರೆಗೆ ದಾಖಲಾದ ಬಳಿಕ ಬೇರೆ ರೂಮಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆಂಬ ನಂಬಿಕೆ ಇದೆ. ಅವರು ನಿಧನರಾಗಿದ್ದರೆ ಅನ್ನೋ ಸುದ್ದಿ ಸುಳ್ಳು" ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಹಿರಿಯ ನಟ ಶರತ್ ಬಾಬು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಮೇಶ್ ಅರವಿಂದ್, ಸುಹಾಸಿನಿ ನಟಿಸಿದ್ದ 'ಅಮೃತ ವರ್ಷಿಣಿ' ಸಿನಿಮಾದಲ್ಲಿ ಹೇಮಂತ್ ಪಾತ್ರದಲ್ಲಿ ಶರತ್ ಬಾಬು ನಟಿಸಿ ಕನ್ನಡಿಗರ ಮನಗೆದ್ದಿದ್ದರು.


Click it and Unblock the Notifications











