ಸರಿಗಮಪ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದ; ತಂದೆಯ ಆರೋಪಕ್ಕೆ ತಿರುಗೇಟು ಕೊಟ್ಟ ಗಾಯಕ ನರಹರಿ ದೀಕ್ಷಿತ್
ಕಳೆದ ಕೆಲವು ದಿನಗಳಿಂದ ಜೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಬೀದಿಗೆ ಬಂದಿತ್ತು. ಗಾಯಕಿಯ ತಂದೆ ಮಗಳ ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆಂದು ಆರೋಪ ಮಾಡಿದ್ದರು. ಪೃಥ್ವಿ ಭಟ್ ತಂದೆ ಹೇಳಿಕೆ ಕೊಟ್ಟ ಆಡಿಯೋ ಸೋಶಿಯಲ್ ಮೀಡಿಯದಾದಲ್ಲಿ ಸಿಕ್ಕಪಟ್ಟೆ ಸದ್ದು ಮಾಡಿತ್ತು. ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಜನಪ್ರಿಯ ಗಾಯಕ ಹಾಗೂ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರನ್ನು ದೂಷಿಸಿದ್ದರು.
ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರ ಆಡಿಯೋದಲ್ಲಿ ಸಂಗೀತ ಹೇಳಿ ಕೊಡುತ್ತಿದ್ದ ನರಹರಿ ದೀಕ್ಷಿತ್ ವಿರುದ್ಧ ಕಿಡಿಕಾಡಿದ್ದರು. ನರಹರಿ ದೀಕ್ಷಿತ್ ಅವರೇ ಮಗಳ ಮೇಲೆ ವಶೀಕರಣ ಮಾಡಿಸಿ ಮದುವೆ ಮಾಡಿಸಿದ್ದಾರೆಂದು ಆರೋಪಿಸಿದ್ದರು. ತಮ್ಮ ಮಗಳು ಬಿಟ್ಟು ಹೋಗು ಇಪ್ಪತ್ತು ದಿನಗಳು ಆಗಿದೆ. ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪು ಬಂದಿಲ್ಲ ಎಂದಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ನರಹರಿ ದೀಕ್ಷಿತ್ ಸಂಬಂಧ ಪಟ್ಟವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದೆ.

ನರಹರಿ ದೀಕ್ಷಿತ್ ಅವರು ಜನಪ್ರಿಯ ಗಾಯಕ ಸಂಗೀತ ಶಿಕ್ಷಕ. ಈಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸಂಗೀತ ಕಾರ್ಯಕ್ರಮ 'ಸರಿಗಮಪ'ದ ಜ್ಯೂರಿ ಸದಸ್ಯರಾಗಿದ್ದಾರೆ. ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಇವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನರಹರಿ ದೀಕ್ಷಿತ್ ಕೂಡ ತಿರುಗೇಟು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರೇ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಒಂದು ಹರಿದಾಡುತ್ತಿದೆ.
ಪತ್ರದಲ್ಲಿ ಏನಿದೆ?
" ಪ್ರೀತಿಯ ಹವ್ಯಕ ಬಂಧುಗಳೇ, ರಾಮಚಂದ್ರಾಪುರ ಮಠದ ಬಂಧುಗಳೇ, ಗಿರಿನಗರ ಹವ್ಯಕ ವಲಯ ಪದಾಧಿಕಾರಿಗಳೇ ಹಾಗೂ ನನ್ನೆಲ್ಲಾ ಹವ್ಯಕ ಸ್ನೇಹಿತರೇ. ನಾನು ನರಹರಿ ದೀಕ್ಷಿತ್ ಗಾಯಕ ಹಾಗೂ ಸುಗಮ ಸಂಗೀತ ಶಿಕ್ಷಕ. ನಿಮ್ಮೆಲ್ಲರ ಸಮಕ್ಷಮದಲ್ಲಿ ನನ್ನದೊಂದು ಮುಖ್ಯವಾದ ವಿಷಯ ಹಂಚಿಕೊಳ್ಳುವುದಿದೆ. ಏನೆಂದರೆ, ನನ್ನ ವಿದ್ಯಾರ್ಥಿನಿ ಕುಮಾರಿ ಪೃಥ್ವಿ ಭಟ್ ಕಾಸರಗೋಡು ಮೊನ್ನೆ ಮಾರ್ಚ್ 27 ಗುರುವಾರ ಜೀ ಕನ್ನಡದ ಉದ್ಯೋಗಿ ಅಸೋಸಿಯೇಟೆಡ್ ಡೈರೆಕ್ಟರ್ ಅಭಿಷೇಕ್ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಅವರು ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದಾರೆ. ಆದರೆ ಮನೆಯವರ ಒಪ್ಪಿಗೆ ಇಲ್ಲದೇ ಮದುವೆಯಾಗಿದ್ದಾರೆ. ಇದು ಕಳೆದ 4 ವರುಷದ ಹಿಂದೆ ಅವರಿಬ್ಬರಲ್ಲಿ ನಡೆದ ಒಪ್ಪಂದ." ಎಂದು ಗಾಯಕಿ ಪೃಥ್ವಿ ಭಟ್ ಮದುವೆ ಬಗ್ಗೆ ಮಾತಾಡಿದ್ದಾರೆ.

"ಸಹಜವಾಗಿ ಹವ್ಯಕರಲ್ಲದ, ನಮ್ಮವರಲ್ಲದ ಹುಡುಗನನ್ನು ಮದುವೆಯಾಗಿದ್ದು ತಂದೆ ತಾಯಿಗಳಿಗೆ ತುಂಬಾನೇ ಬೇಸರ ತಂದಿದೆ. ಆ ಮದುವೆಯ ವಿಚಾರ ಕಳೆದ ಒಂದು ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದು, ನಾನು ಪೃಥ್ವಿ ಮನೆಗೆ ಹೋಗಿ ಶಿವಣ್ಣನಲ್ಲಿ ಹಾಗೂ ಅವಳ ಅಮ್ಮನಲ್ಲಿ ಈ ವಿಚಾರ ತಿಳಿಸಿದೆ. ಪರಿಸ್ಥಿತಿ ಕೈ ಬಿಟ್ಟು ಹೋಗಿದೆ. ಅವರು ಮದುವೆ ಆಗುವುದು ನಿಶ್ಚಿತ. ನೀವು ಹುಡುಗನನ್ನು ಕರೆಸಿ ಮಾತನಾಡಿ ಎಂದು ಹೇಳಿ ಬಂದಿದ್ದೆ" ಎಂದು ಗಾಯಕ ನರಹರಿ ದೀಕ್ಷಿತ್ ಹೇಳಿದ್ದಾರೆ.
"ಮಾನ ಹರಾಜು ಮಾಡುತ್ತಿದ್ದಾರೆ"
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪತ್ರದಲ್ಲಿ ತಮ್ಮ ಮೇಲಿನ ಗಂಭೀರ ಆರೋಪಗಳ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ತಮ್ಮ ಮಾನವನ್ನು ಹರಾಜು ಹಾಕುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. "ನಾನು ಆಗ ಹೇಳಿದ್ದನ್ನು ಅವರು ಪರಿಗಣಿಸಲಿಲ್ಲ. ಈಗ ನಾನೇ ಅವರಿಬ್ಬರನ್ನು ಮದುವೆ ಮಾಡಿಸಿದ್ದು, ಪೃಥ್ವಿಯ ತಲೆಕೆಡಿಸಿದ್ದು, ಅವರ ಬಾಳು ಹಾಳು ಮಾಡಿದ್ದು ಎಂದು ಆರೋಪಿಸಿ, ನನಗೆ ದಿನಕ್ಕೆ 25 ಬಾರಿ ಕರೆ ಮಾಡಿ ನನ್ನ ಮಾನ ಹರಾಜು ಮಾಡುತ್ತೇನೆ. ನನ್ನನ್ನ ಮುಗಿಸುತ್ತೇನೆ. ನನ್ನ ಶಾಲೆಯನ್ನು ಮುಚ್ಚಿಸುತ್ತೇನೆ. ನನ್ನ ಹಾಗೂ ನನ್ನ ಹೆಂಡತಿಯನ್ನು ಬೇರೆ ಮಾಡುತ್ತೇನೆ. ಇಡೀ ಹವ್ಯಕ ಪಂಗಡಕ್ಕೆ ಹಾಗೂ ಮಠದಲ್ಲಿ ಕೂಡ ನನ್ನ ಮಾನ ಮರ್ಯಾದೆ ತೆಗೆಯುತ್ತೇನೆ. ನನ್ನ ಜೀವನವನ್ನೇ ಸಂಪೂರ್ಣ ಹಾಳು ಮಾಡುತ್ತೇನೆ ಎಂದು ಗಂಡ, ಹೆಂಡತಿ, ಸೋದರ ಮಾವ ಎಲ್ಲರೂ ಫೋನ್ ಮಾಡಿ ಚಿತ್ರ ಹಿಂಸೆ ಕೊಡುತ್ತಿದ್ದಾರೆ." ಎಂದು ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರ ವಿರುದ್ಧವೇ ಆರೋಪ ಮಾಡಲಾಗಿದೆ.
ಹಾಗೇ ಈ ವಿಷಯ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. "ಆದರೆ ಅಸಲಿ ವಿಷಯ 4 ವರುಷದಿಂದ ಅವರಿಗೆ ಗೊತ್ತು. ಮಗಳಿಗೆ ಅವಕಾಶ ಸಿಗುತ್ತದೆ ಎಂದು ಸುಮ್ಮನೆ ಇದ್ದರು. ಈಗ ಕೈ ಮೀರಿದಾಗ ನನ್ನನ್ನು ದೂರುತ್ತಿದ್ದಾರೆ. 30 ವರ್ಷ ನನ್ನ ವೃತ್ತಿ ಜೀವನದಲ್ಲಿ ಪೃಥ್ವಿಯನ್ನು ಸೇರಿದಂತೆ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಬರೆದಿದ್ದೇನೆ. ಈ ಮೂಲಕ ತಮ್ಮೆಲ್ಲರಲ್ಲಿ ಮನವಿ ಏನೆಂದರೆ ಅವರು ನಿಮ್ಮ ಬಳಿ ಏನೇ ಹೇಳಿದರೂ ಅದನ್ನು ನಂಬಬೇಡಿ. ನಾನು ಗಂಡ ಹೆಂಡತಿಯರನ್ನು ಕೂರಿಸಿ ಮಾತಾಡುತ್ತೇನೆ." ಎಂದಿದ್ದಾರೆ.
"ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ"
"ಅವರಿಗೆ ತುಂಬಾ ನೋವಾಗಿದೆ. ಅದು ಸಹಜ. ಆದರೆ ಮಗಳು ಮಾಡಿದ ತಪ್ಪಿಗೆ ನನ್ನನ್ನು ದೂರುತ್ತಿದ್ದಾರೆ. ನಾನೇ ಕಾರಣ ಎಂದು ಹೇಳುತ್ತಿದ್ದಾರೆ. ಅವರಿಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದಾರೆ. ಯಾರು ಏನು ಮಾಡಲಾಗದು. ಒಂದು ವಾರದಿಂದ ನನ್ನ ಸಂಕಟ ಹೇಳಲಾಗದು. ನೊಂದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಮುಂದಿನ ಹೋರಾಟ ಎಂದರೆ ಅವರು ಒಂದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾನು ಅವರನ್ನು ಬಿಡುವುದಿಲ್ಲ. ನನಗೆ ಶ್ರೀಧರ ಸ್ವಾಮಿಗಳ ಆಶೀರ್ವಾದ ಹಾಗೂ ಗುರುಗಳ ಆಶೀರ್ವಾದ ಇದೆ" ಎಂದು ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ, ಅಸಲಿಗೆ ಈ ಪತ್ರವನ್ನು ಅವರೇ ಬರೆದಿದ್ದಾರಾ? ಇಲ್ಲ ಇಲ್ಲ ಸುಮ್ಮನೆ ಯಾರೋ ತೇಲಿಸಿಬಿಟ್ಟಿದ್ದಾರಾ? ಅನ್ನೋದನ್ನು ನರಹರಿ ದೀಕ್ಷಿತ್ ಅವರೇ ಸ್ಪಷ್ಟ ಪಡಿಸಬೇಕಿದೆ.
ಏನಿದು ಪೃಥ್ವಿ ಭಟ್ ಮದುವೆ ರಾದ್ಧಾಂತ?
ಗಾಯಕಿ ಪೃಥ್ವಿ ಭಟ್ ಹಾಗೂ ಜೀ ಕನ್ನಡದ ಉದ್ಯೋಗಿ ಅಭಿಷೇಕ್ ಎಂಬುವವರು ವಿವಾಹವಾಗಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಭಟ್‌ಗೆ ಸಂಗೀತ ಹೇಳಿ ಕೊಡುತ್ತಿದ್ದ ನರಹರಿ ಭಟ್ ಅವರೇ ಈ ವಿಷಯವನ್ನು ಗಾಯಕಿಯ ತಂದೆ, ತಾಯಿಗೆ ಮುಟ್ಟಿದ್ದರು. ಅದಾದ ಕೆಲವು ದಿನಗಳ ಬಳಿಕ ಪೃಥ್ವಿ ಭಟ್ ಮನೆ ಬಿಟ್ಟು ಬಂದು ಅಭಿಷೇಕ್ ಅವರನ್ನು ವಿವಾಹವಾಗಿದ್ದಾರೆ. ಈ ವಿಷಯ ತಂದೆಗೆ ಶಿವಪ್ರಸಾದ್‌ಗೆ ಮುಟ್ಟಿದ ಬಳಿಕ ಅವರು ಗಾಯಕ ನರಹರಿ ದೀಕ್ಷಿತ್ ಅವರೇ ಧಾರೆ ಎರೆದು ಕೊಟ್ಟಿದ್ದಾರೆಂದು ಆರೋಪಿಸಿದ್ದರು. ಅಲ್ಲದೇ ನರಹರಿ ದೀಕ್ಷಿತ್ ಅವರು ಮನೆಗೆ ಬಂದು ಹೋದ ಬಳಿಕ ಮಗಳಲ್ಲಿ ಬದಲಾವಣೆ ಆಗಿತ್ತು. ನನ್ನ ಮಗಳ ಮೇಲೆ ವಶೀಕರಣ ಆಗಿದೆ ಎಂದಿರುವ ಅವರ ಆಡಿಯೋ ವೈರಲ್ ಆಗಿತ್ತು. ಈ ಸಂಬಂಧ ಫಿಲ್ಮಿಬೀಟ್ ಕನ್ನಡಕ್ಕೆ ನರಹರಿ ದೀಕ್ಷಿತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ.
ಪೃಥ್ವಿ ಭಟ್ ಪ್ರತಿಕ್ರಿಯೆ
ತಂದೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೃಥ್ವಿ ಭಟ್ ಅವರದ್ದೇ ಎನ್ನಲಾದ ಆಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಮನೆಯಲ್ಲಿ ಈ ವಿಷಯ ಪ್ರಸ್ತಾಪ ಆದಾಗ ನನಗೆ ಅಭಿ ಇಷ್ಟ ಎಂದೇ ಹೇಳಿದ್ದೆ. ಆದರೆ, ನಿಮ್ಮ ಮೇಲಿನ ಭಯಕ್ಕೆ ಸುಮ್ಮನಾಗಿದ್ದೆ ಎಂದಿದ್ದಾರೆ. ಆದರೆ, ವಿಷಯ ತಿಳಿದ ಬಳಿಕ ನೀವು ಕಡಿವಾಣ ಹಾಕುವುದಕ್ಕೆ ಶುರು ಮಾಡಿದ್ರಿ. ಇದರಿಂದ ನನಗೆ ಭಯ ಶುರುವಾಗಿತ್ತು. ನಾವು ಮದುವೆ ಆಗಿರುವ ವಿಷಯ ನರಹರಿ ದೀಕ್ಷಿತ್ ಸರ್ ಗೊತ್ತಿರಲಿಲ್ಲ. ಅವರಿಗೆ ವಿಷಯ ತಿಳಿದ ಬಳಿಕ ನಮಗೆ ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪೇನು ಇಲ್ಲ. ಕ್ಷಮಿಸಿ, ನನ್ನಿಂದ ತಪ್ಪಾಗಿದೆ" ಎಂದಿರುವ ಆಡಿಯೋ ವೈರಲ್ ಆಗಿತ್ತು. ಆ ಬೆನ್ನಲ್ಲೇ ಈಗ ನರಹರಿ ದೀಕ್ಷಿತ್ ಹೇಳಿಕೆ ಕೂಡ ಸದ್ದು ಮಾಡುತ್ತಿದೆ.


Click it and Unblock the Notifications











