ಉಪ್ಪಿ ರೆಸಾರ್ಟ್‌ನಲ್ಲಿ ನೀನಾಸಂ ಸತೀಶ್-ರಚಿತಾ ರಾಮ್ 'ಮ್ಯಾಟ್ನಿ' ರೊಮ್ಯಾನ್ಸ್: ಸಿನಿಮಾ ವಿಶೇಷತೆಯೇನು?
'ಅಯೋಗ್ಯ' ಯಶಸ್ಸಿನ ಬಳಿಕ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಷಯ. ಅದುವೇ 'ಮ್ಯಾಟ್ನಿ'. 'ಅಯೋಗ್ಯ' ಸಿನಿಮಾದಲ್ಲಿ ಈ ಜೋಡಿಯನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಗಳಿಕೆಯಲ್ಲೂ ದೊಡ್ಡ ಯಶಸ್ಸನ್ನೇ ಕಂಡಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ 'ಮ್ಯಾಟ್ನಿ' ಸೆಟ್ಟೇರಿದ್ದು ಮೂರು ಹಂತದ ಶೂಟಿಂಗ್ ಮುಗಿದಿದೆ.
Recommended Video
'ಮ್ಯಾಟ್ನಿ' ಜೋಡಿ ನಾಲ್ಕನೇ ಹಂತದ ಶೂಟಿಂಗ್ ಆರಂಭ ಆಗಿದೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಹಾಡಿನ ಮೂಲಕ ಶೂಟಿಂಗ್ ಆರಂಭ ಆಗಿತ್ತು. 'ಅಯೋಗ್ಯ' ಹಾಡುಗಳು ದಾಖಲೆ ಬರೆದಂತೆ, ಮ್ಯಾಟನಿ ಸಿನಿಮಾ ಹಾಡುಗಳು ಕೂಡ ಜನರಿಗೆ ಇಷ್ಟ ಆಗುತ್ತೆ ಅನ್ನುವ ಅಚಲವಾದ ನಂಬಿಕೆಯಲ್ಲಿದೆ ಚಿತ್ರತಂಡ. ಇಂದಿನಿಂದ (ಜನವರಿ 17) ರಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ 'ಮ್ಯಾಟ್ನಿ' ಸಿನಿಮಾ ಶೂಟಿಂಗ್ ಮತ್ತೆ ಆರಂಭ ಆಗಿದೆ.

ಉಪ್ಪಿ ರೆಸಾರ್ಟ್‌ನಲ್ಲಿ 'ಮ್ಯಾಟ್ನಿ'
ಇಂದಿನಿಂದ ( ಜನವರಿ 17) 'ಮ್ಯಾಟ್ನಿ' ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಉಪ್ಪಿ ರೆಸಾರ್ಟ್‌ನಲ್ಲಿ ಚಿತ್ರೀಕರಣ ಭರದಿಂದ ನಡೆಯುತ್ತಿದೆ. " ನಮ್ಮ ಸಿನಿಮಾದ ನಾಲ್ಕನೇ ಹಂತದ ಚಿತ್ರೀಕರಣ. ರಚಿತಾ ರಾಮ್ ಹಾಗೂ ನನ್ನ ನಡುವಿನ ಲವ್ ಸೀನ್ ಅನ್ನು ಚಿತ್ರೀಕರಿಸಲಾಗುತ್ತಿದೆ. ಜೋರಾಗೇ ಶೂಟಿಂಗ್ ಆರಂಭ ಆಗಿದೆ." ಎಂದು ನೀನಾಸಂ ಸತೀಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

'ಅಯೋಗ್ಯ' ಮ್ಯಾಜಿಕ್‌ಗೆ 'ಮ್ಯಾಟ್ನಿ' ಸಜ್ಜು
'ಮ್ಯಾಟ್ನಿ' ಸಿನಿಮಾ ಒಂದು ರೊಮ್ಯಾಂಟಿಕ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮನೋಹರ್ ಕಂಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಅಯೋಗ್ಯ ಬಳಿಕ ಅದೇ ಯಶಸ್ಸನ್ನು ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಪೋಸ್ಟ್ ನೋಡಿ ಇಬ್ಬರ ಅಭಿಮಾನಿಗಳೂ ಥ್ರಿಲ್ ಆಗಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು, ಕ್ರಾಂತಿ ವರ್ಲಾ ಛಾಯಾಗ್ರಹಣವಿದೆ.

'ಮ್ಯಾಟ್ನಿ' ಜೊತೆ ಕೈ ತುಂಬಾ ಸಿನಿಮಾ
'ಮ್ಯಾಟ್ನಿ' ಜೊತೆ ಸತೀಶ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಮೈ ನೇಮ್ ಈಸ್ ಸಿದ್ದೇಗೌಡ, ಗೋದ್ರಾ, ದಸರಾ, ಹಾಗೂ ಪೆಟ್ರೋಮ್ಯಾಕ್ಸ್ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ ಇದರೊಂದಿಗೆ ತಮಿಳು ಸಿನಿಮಾದ ಚಿತ್ರೀಕರಣ ಕೂಡ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇಷ್ಟು ಸಿನಿಮಾಗಳ ಮಧ್ಯೆ 'ಮ್ಯಾಟ್ನಿ' ಶೂಟಿಂಗ್‌ನಲ್ಲೂ ಬ್ಯುಸಿಯಾಗಿದ್ದಾರೆ. ಹರಿಪ್ರಿಯಾ ಜೊತೆ ನಟಿಸಿದ 'ಪೆಟ್ರೋಮ್ಯಾಕ್ಸ್' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಕೊರೊನಾ ಮೂರನೇ ಅಲೆ ಮುಗಿದು, ಶೇ.100ರಷ್ಟು ಚಿತ್ರಮಂದಿರ ಓಪನ್ ಆದ ಬಳಿಕವೇ ಸಿನಿಮಾನೂ ಬಿಡುಗಡೆಯಾಗಲಿದೆ.

ರಚಿತಾ ರಾಮ್ ಫುಲ್ ಬ್ಯುಸಿ
ಕೊರೊನಾ ಮೂರನೇ ಅಲೆಯ ಬೆನ್ನಲ್ಲೇ ಸಿನಿಮಾ ಚಿತ್ರೀಕರಣ ಒಂದೊಂದಾಗೇ ಸ್ಥಗಿತಗೊಳ್ಳುತ್ತಿದೆ. ಆದರೂ, ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿರುವ ಸಿನಿಮಾಗಳು ಶೂಟಿಂಗ್‌ನಲ್ಲಿ ಬ್ಯುಸಿಯಾಗಿವೆ. ದರ್ಶನ್ ಜೊತೆ ನಟಿಸುತ್ತಿರುವ 'ಕ್ರಾಂತಿ' ಚಿತ್ರೀಕರಣ ಆರಂಭ ಆಗಲಿದೆ. ಇತ್ತ 'ಮ್ಯಾಟ್ನಿ' ಚಿತ್ರೀಕರಣ ನಡೆಯುತ್ತಿದೆ. ಇದರೊಂದಿಗೆ ಮಾನ್ಸೂನ್ ರಾಗ, ಲಿಲ್ಲಿ, ಗರಡಿ, ಬ್ಯಾಡ್ ಮ್ಯಾನರ್ಸ್, ಶಬರಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಏಕ್ ಲವ್ ಯಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











