"ನಮ್ಮ ಹೆಗ್ಗುರುತುಗಳನ್ನೆ ಬಲಿ ಕೊಡಲು ಹೊರಟ ಆಡಳಿತದ ವಿರುದ್ಧ ಈ ಹೋರಾಟ" ಅಮುಲ್ ವಿರುದ್ಧ ಕವಿರಾಜ್ ಕಿಡಿ!
ಕರ್ನಾಟಕದಲ್ಲಿ ಹಾಲಿನ ಎರಡು ಬ್ರ್ಯಾಂಡ್‌ಗಳ ವಿಚಾರಕ್ಕೆ ಹೋರಾಟವೇ ನಡೆಯುತ್ತಿದೆ. ಕರ್ನಾಟಕದ ಹೆಮ್ಮೆ 'ನಂದಿನಿ' ಹಾಗೂ ಗುಜರಾತ್ ಮೂಲದ 'ಅಮುಲ್' ವಿಚಾರಕ್ಕೆ ರಾಜ್ಯದಲ್ಲಿ ಕೋಲಾಹಲವೇ ನಡೆಯುತ್ತಿದೆ. ರಾಜ್ಯದ ವಿರೋಧ ಪಕ್ಷಗಳು ಅಮುಲ್ ಹಾಲಿನ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇನ್ನೊಂದು ಕಡೆ ಕನ್ನಡಪರ ಸಂಘಟನೆಗಳು ಅಖಾಡಕ್ಕೆ ಇಳಿದಿವೆ.
ಇತ್ತೀಚೆಗೆ 'ಅಮುಲ್' ಜಾಹೀರಾತೊಂದನ್ನು ನೀಡಿತ್ತು. "ಅಮುಲ್ ಕುಟುಂಬ ಹಾಲು ಮತ್ತು ಮೊಸರಿನಿಂದ ತಾಜಾತನದ ಹೊಸ ಅಲೆ ಬೆಂಗಳೂರಿಗೆ ತರುತ್ತಿದೆ" ಎಂದು ಪ್ರಚಾರ ಮಾಡಿತ್ತು. ಇದು ಕನ್ನಡಿಗರು ಹಾಗೂ ವಿರೋಧ ಪಕ್ಷಗಳ ವಿರೋಧಕ್ಕೆ ಕಾರಣವಾಗಿತ್ತು.

ಇನ್ನೊಂದು ಕಡೆ ಕೇಂದ್ರ ಸಚಿವ ಅಮಿತ್ ಶಾ ಕೂಡ ಇತ್ತೀಚೆಗೆ " ಅಮೂಲ್ ಹಾಗೂ ಕೆಎಂಎಫ್ ಎರಡೂ ಒಟ್ಟಿಗೆ ಸೇರಿ, ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲಿ ಪ್ರಾಥಮಿಕ ಡೈರಿಯನ್ನು ಸ್ಥಾಪಿಸುವ ಸಲುವಾಗಿ ಕೆಲಸ ಮಾಡಲಿದೆ" ಎಂದು ಹೇಳಿದ್ದರು. ಇಲ್ಲಿಂದ ಕೆಎಂಎಫ್ ಹಾಗೂ ಅಮುಲ್ ಎರಡನ್ನು ವಿಲೀನಗೊಳಿಸಲಾಗುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಇಲ್ಲಿಂದ ಅಮುಲ್ ಹಾಗೂ ಕೆಎಂಎಫ್ ವಿಲೀನದ ಬಗ್ಗೆ ಕಿಚ್ಚು ಹತ್ತಿದೆ. ಹಲವರು ಇದನ್ನು ವಿರೋಧ ಮಾಡುತ್ತಿದ್ದಾರೆ. ಕನ್ನಡ ಸಿನಿ ಸಾಹಿತಿ ಕವಿರಾಜ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಎಂಎಫ್ ವಿಲೀನಕ್ಕೆ ಯಾಕೀ ಒತ್ತಡ?
ಸಿನಿ ಸಾಹಿತಿ ಕವಿರಾಜ್ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ವಿರೋಧ ಮಾಡುತ್ತಲೇ ಬರುತ್ತಿದ್ದಾರೆ. ಈಗ ಕೆಎಂಎಫ್ ಹಾಗೂ ಅಮುಲ್ ವಿಲೀನದ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಡಿಕಾರಿದ್ದಾರೆ. ಫೇಸ್‌ನಲ್ಲಿ ಕೆಎಂಎಫ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,. ಅಮುಲ್ ಅನ್ನು ವಿರೋಧ ಮಾಡುತ್ತಿರೋದ್ಯಾಕೆ? ಅಂತನೂ ಹೇಳಿಕೊಂಡಿದ್ದಾರೆ.

"ದೊಡ್ಲಾ , ಆರೋಕ್ಯ, ಮಿಲ್ಕಿ ಮಿಸ್ಟ್ , ಹ್ಯಾಟ್ಸನ್ ಮುಂತಾದ ಪರರಾಜ್ಯದ ಹಾಲುಗಳಿಗೆ ಇಲ್ಲದ ವಿರೋಧ ಕೇವಲ ಅಮುಲ್‌ಗೆ ಯಾಕೆ? ಎಂದರೆ, ಈ ಯಾವ ಹಾಲುಗಳ ಹಿಂದೆಯೂ ಕೇಂದ್ರದ ಪವರ್ ಫುಲ್ ವ್ಯಕ್ತಿಗಳು ಅಥವಾ ಪರರಾಜ್ಯದ ಹಿತಾಸಕ್ತಿಗಳ ಒತ್ತಾಸೆಯಿಲ್ಲ. ಈ ಯಾವುದರ ಜೊತೆಯೂ ನಂದಿನಿಯನ್ನು ವಿಲೀನಗೊಳಿಸಿ ಎಂದು ಒತ್ತಡ ಬಂದಿಲ್ಲ." ಎಂದು ಅಮುಲ್ ವಿಲೀನದ ಬಗ್ಗೆ ಕವಿರಾಜ್ ಮಾತಾಡಿದ್ದಾರೆ.
ನಂದಿನಿಯನ್ನು ದುರ್ಬಲಗೊಳಿಸುವ ಹುನ್ನಾರ?
ದೊಡ್ಲಾ , ಆರೋಕ್ಯ, ಮಿಲ್ಕಿ ಮಿಸ್ಟ್ , ಹ್ಯಾಟ್ಸನ್ ಈ ಎಲ್ಲಾ ಬ್ರ್ಯಾಂಡ್‌ಗಳ ಹಾಲು ಕರ್ನಾಟಕದಲ್ಲಿ ಇವೆ. ಅವು ನಂದಿನಿ ಉತ್ಪನ್ನಗಳ ಜೊತೆ ಸ್ಪರ್ಧೆ ಮಾಡುತ್ತಿವೆ. ಆದರೆ, ಎಂದಿಗೂ ವಿಲೀನಗೊಳಿಸುವ ಬಗ್ಗೆ ಮಾತಾಡಿಲ್ಲ. ಅಲ್ಲದೆ ಇದು ನಂದಿನಿ ಬ್ರ್ಯಾಂಡ್ ಅನ್ನು ದುರ್ಬಲಗೊಳಿಸುವ ಹುನ್ನಾರ ಎಂದು ಕವಿರಾಜ್ ಆರೋಪ ಮಾಡಿದ್ದಾರೆ.
"ವಿಲೀನ ಪ್ರಯತ್ನ ಸಫಲವಾಗದಿದ್ದಾಗ ಜಿಯೋಗಾಗೀ BSNLಅನ್ನು ದುರ್ಬಲಗೊಳಿಸಿದಂತೆ ನಮ್ಮ ಆಡಳಿತವನ್ನೇ ಬಳಸಿ ನಂದಿನಿಯ ಕೃತಕ ಅಭಾವ ಸೃಷ್ಟಿ ಮಾಡುವುದು, ಗುಣಮಟ್ಟದ ಬಗ್ಗೆ ನೆಗೆಟಿವ್ ಪ್ರಚಾರ ಮಾಡುವುದು, ನಷ್ಟಕ್ಕೆ ದೂಡಿ ನಿಷ್ಕ್ರಿಯಗೊಳಿಸುವುದು, ಇಂತಹ ಯಾವುದೇ ಹುನ್ನಾರ ಮಾಡುವವರಿಲ್ಲ. ಮೇಲಿನ ಯಾವುದೇ ಖಾಸಗಿ ಸಂಸ್ಥೆಗಳಿಂದ ನಂದಿನಿಯ ಅಸ್ತಿತ್ವಕ್ಕೆ ಕುತ್ತು ಬರುವಂತಿಲ್ಲ. ಈ ಪರರಾಜ್ಯದ ಸಂಸ್ಥೆಗಳು ಕರ್ನಾಟಕದಲ್ಲಿ ಸುಗಮವಾಗಿ ಹಾಲು ಮಾರಾಟ ನಡೆಸುತ್ತಿರುವುದೇ ನಾವು ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲು ತಯಾರಿದ್ದೇವೆ ಎಂಬುದಕ್ಕೆ ನಿದರ್ಶನ." ಎಂದು ಕವಿರಾಜ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಹೆಗ್ಗುರುತುಗಳನ್ನೆ ಬಲಿ ಕೊಡಲು ಹೊರಟವರ ವಿರುದ್ಧ ಹೋರಾಟ
ಕವಿರಾಜ್ ತಮ್ಮ ಫೇಸ್‌ಬುಕ್ ಬರಹದಲ್ಲಿ ಅಮುಲ್ ವಿರುದ್ಧ ಯಾಕೆ ಹೋರಾಟ ಮಾಡುತ್ತಿದ್ದೇವೆ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಅಮುಲ್ ಜೊತೆಗಿನ ಸ್ಪರ್ಧೆಗೆ ಹೆದರಿ ಹೋರಾಟ ಮಾಡುತ್ತಿರುವುದಲ್ಲ. ನಮ್ಮ ಹೆಗ್ಗುರುತನ್ನು ಅಳಿಸಿ ಹಾಕುತ್ತಿರುವವರ ವಿರುದ್ಧ ಎಂದು ಹೇಳಿದ್ದಾರೆ. "ಈಗ ವಿರೋಧಿಸುತ್ತಿರುವುದು ಸ್ಪರ್ಧೆಗೆ ಹೆದರಿ ಅಲ್ಲಾ . ಪ್ರಭುತ್ವದ ಪವರ್ ಫುಲ್ ವ್ಯಕ್ತಿಗಳನ್ನು ಮೆಚ್ಚಿಸಲು , ಅವರ ಆಜ್ಞಾಪಾಲಕರಾಗಿ ನಮ್ಮ ಹೆಗ್ಗುರುತುಗಳನ್ನೆ ಬಲಿ ಕೊಡಲು ಹಿಂದೆ ಮುಂದೆ ನೋಡದ ನಮ್ಮದೇ ಜನ, ಆಡಳಿತದ ವಿರುದ್ಧ." ಎಂದಿದ್ದಾರೆ.
"ವಿಜಯಾ ಬ್ಯಾಂಕ್ , ಕಾರ್ಪೋರೇಷನ್ ಬ್ಯಾಂಕ್ , ಸಿಂಡಿಕೇಟ್ ಬ್ಯಾಂಕ್ ಗಳನ್ನು ಇತಿಹಾಸದ ಪುಟ ಸೇರಿಸಿದ ದುರಂತದ ನೋವು ಇನ್ನು ಮಾಸಿಲ್ಲ. ಈ ಹೋರಾಟ ಒಂದೊಂದಾಗೇ ನಮ್ಮ ಅಸ್ಮಿತೆಗಳನ್ನು ಕಸಿದು ಅನಾಥರಾಗಿಸುವವರ ವಿರುದ್ಧ" ಈ ಹೋರಾಟ ಎಂದು ಕವಿರಾಜ್ ಬರೆದುಕೊಂಡಿದ್ದಾರೆ.


Click it and Unblock the Notifications











