Rishab Shetty: "ಅಧ್ಯಾಯ ಎರಡು ಇಲ್ಲಿಂದ ಶುರು"; ರಿಷಬ್ ಶೆಟ್ಟಿ ಬ್ಯಾನರ್‌ನಲ್ಲೇ ಸಿನಿಮಾ..ಚಾಪ್ಟರ್ 2 ಯಾವುದು?
ರಿಷಬ್ ಶೆಟ್ಟಿ ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವಷ್ಟೇ. ಓ.. ಶೆಟ್ರು ಮನೆಯಲ್ಲಿ ಯುಗಾದಿ ಹಬ್ಬ ಭಲೇ ಜೋರು ಅಂತ ಅಭಿಮಾನಿಗಳು ಸಂಭ್ರಮಿಸಿದ್ದರು. ಈ ಪೋಟೋಗಳ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ರಿಷಬ್ ಶೆಟ್ಟಿ ಮತ್ತೊಂದು ಪೋಸ್ಟ್ ಮಾಡಿದ್ದರು. ಇದನ್ನು ನೋಡುತ್ತಿದ್ದಂತೆ ಅವರ ಫ್ಯಾನ್ಸ್‌ಗೆ ಗೊಂದಲಕ್ಕೆ ಬಿದ್ದಿದ್ದಾರೆ.
ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಿನಿಮಾ ಮಂದಿಗೆ, ಸಿನಿಪ್ರಿಯರಿಗೆ ಗೊಂದಲವನ್ನಂತೂ ಸೃಷ್ಟಿಸಿದೆ. ಗೊಂದಲ ಯಾಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಕಳೆದ ಕೆಲವು ದಿನಗಳಿಂದ ಆದ ಬೆಳವಣಿಗೆ ಕೂಡ ಕಾರಣ. ಹೀಗಾಗಿ ಸಿನಿಮಾ ಮಂದಿಗೆ ಈ ಪೋಸ್ಟ್ ಅನ್ನು ಗಂಭೀರವಾಗಿಯೇ ಸ್ವೀಕರಿಸಿದ್ದಾರೆ.

ರಿಷಬ್ ಶೆಟ್ಟಿ ಈ ಪೋಸ್ಟ್ ಮಾಡುತ್ತಿದ್ದಂತೆ ಗಾಂಧಿನಗರದಲ್ಲಿ ನೂರೆಂಟು ಚರ್ಚೆಗಳು ಶುರುವಾಗಿವೆ. ರಿಷಬ್ ಶೆಟ್ಟಿ ಸದ್ಯ 'ಜೈ ಹನುಮಾನ್' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. 'ಕಾಂತಾರ ಚಾಪ್ಟರ್ 1' ಮೆಗಾ ಸಕ್ಸಸ್ ಕಂಡ ಬಳಿಕ ತೆಲುಗು ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಶುರುವಾಗಿದೆ ಎನ್ನುವಾಗಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ಆರಂಭ ಮಾಡಿದ್ದಾರೆ. ಯುಗಾದಿ ಹಬ್ಬದಂದು ಮಾಡಿದ ಈ ಪೋಸ್ಟ್ ಕೊಟ್ಟ ಸೂಚನೆ ಅದೇ ಆದರೂ, ಅದರ ಹಿಂದಿನ ನೂರೆಂಟು ಲೆಕ್ಕಾಚಾರಗಳನ್ನು ಚರ್ಚೆ ಮಾಡುತ್ತಿದ್ದಾರೆ.
'ಕಾಂತಾರ ಚಾಪ್ಟರ್ 1' ಮುಗಿಯುತ್ತಿದ್ದಂತೆ ರಿಷಬ್ ಶೆಟ್ಟಿ ಮುಂದಿನ ನಡೆ ಸ್ಪಷ್ಟವಾಗಿತ್ತು. ತೆಲುಗು ನಿರ್ಮಾಣ ಸಂಸ್ಥೆಯೊಂದಿಗೆ ಹನುಮಾನ್ ಸಿನಿಮಾ ಮಾಡುತ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಇತ್ತ ಹನುಮಾನ್ ಶುರುವಾಗುತ್ತಿದ್ದಂತೆ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಅದು ಅವರದ್ದೇ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಇನ್ನು ಗೊಂದಲಕ್ಕೆ ಯಾಕೆ ಅನ್ನೋದಕ್ಕೆ ಎರಡು ಕಾರಣವಿದೆ.
ರಿಷಬ್ ಶೆಟ್ಟಿ 'ಅಧ್ಯಾಯ ಎರಡು' ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಎಲ್ಲರೂ ಆಲೋಚನೆ 'ಕಾಂತಾರ ಚಾಪ್ಟರ್ 2' ಇರಬಹುದಾ? ಇಲ್ಲ ಬೇರೆ ಸಿನಿಮಾವನ್ನೇನಾದರೂ ಮಾಡುತ್ತಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ. ಅವರ ಅಭಿಮಾನಿಗಳು ಈ ಪೋಸ್ಟ್ ಅನ್ನು ನೋಡುತ್ತಿದ್ದಂತೆ 'ಚಾಪ್ಟರ್ 2' ಯಾವುದು ಸರ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಸದ್ಯಕ್ಕೆ ಉತ್ತರ ಸಿಗೋದಿಲ್ಲ ಅನ್ನೋದು ಬೇರೆ ಮಾತು.
ಇತ್ತೀಚೆಗೆ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದು ಬೆಳಕಿಗೆ ಬರುತ್ತಿದ್ದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬ ಚರ್ಚೆನೂ ಆಗಿತ್ತು. ಅಷ್ಟರಲ್ಲೇ ಈಗ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಪೋಸ್ಟ್ ಮಾಡಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ರಿಷಬ್ ಶೆಟ್ಟಿ ತಮ್ಮದೇ ಸ್ವಂತ ಬ್ಯಾನರ್‌ನಲ್ಲಿ 'ಕಾಂತಾರ ಚಾಪ್ಟರ್ 2' ನಿರ್ಮಾಣ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ಮೇಲ್ನೋಟಕ್ಕೆ ಸ್ಯಾಂಡಲ್‌ವುಡ್ ಮಂದಿಗೂ ಹಾಗೇ ಕಾಣಿಸುತ್ತಿದೆ. ಹೊಂಬಾಳೆಯಿಂದ ರಿಷಬ್ ಶೆಟ್ಟಿ ಹೊರ ಬಂದಿದ್ದು, ತಮ್ಮದೇ ಬ್ಯಾನರ್‌ನಲ್ಲಿ 'ಕಾಂತಾರ ಚಾಪ್ಟರ್ 2' ಮಾಡುತ್ತಿದ್ದಾರೆ ಎಂಬ ವದಂತಿಗಳನ್ನೂ ಹಬ್ಬಿಸುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳು 'ಸರ್ಕಾರಿ ಚಾಪ್ಟರ್ 2' ಇರಬಹುದೇ? 'ಬೆಲ್ ಬಾಟಂ ಚಾಪ್ಟರ್ 2' ಇರಬಹುದೇ? ಎಂದೂ ಚರ್ಚೆ ಮಾಡುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿ ಈ ಪೋಸ್ಟ್‌ನಲ್ಲಿ 'ಸು ಫ್ರಮ್ ಸೋ' ನಟ ಶಾನೀಲ್ ಗೌತಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಅನಿರುದ್ಧ್ ಮಹೇಶ್‌ಗೆ ಟ್ಯಾಗ್ ಮಾಡಿದ್ದು, 'ಕಾಂತಾರ ಚಾಪ್ಟರ್ 2'ನೇ ಇರಬಹುದು ಎಂಬ ಗುಮಾನಿ ಮೂಡಿದೆ. ಅಲ್ಲದೆ ಈಗ ಸ್ಕ್ರಿಪ್ಟ್ ಕೆಲಸ ಶುರುವಾಗಿರಬಹುದಷ್ಟೇ ಎಂದು ಅಂದಾಜು ಮಾಡಲಾಗುತ್ತಿದೆ. ಏನೇ ಇದ್ದರೂ ರಿಷಬ್ ಶೆಟ್ಟಿಯಿಂದ ಅಧಿಕೃತ ಹೇಳಿಕೆ ಸಿಗುವವರೆಗೂ ಕಾಯಲೇಬೇಕು.


Click it and Unblock the Notifications














