"ರೆಬೆಲ್ ಸ್ಟಾರ್ ಅಂಬರೀಶ್-ಶಿವಣ್ಣ ಆ ಒಂದು ಗುಣದಲ್ಲಿ ಇಬ್ಬರೂ ಒಂದೇ"- ಹಿರಿಯ ನಟ ಡಿಂಗ್ರಿ ನಾಗರಾಜ್
ಕನ್ನಡ ಚಿತ್ರರಂಗದ ಬಗ್ಗೆ ಹಿರಿಯ ಕಲಾವಿದರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಸಿನಿಮಾ ಮಂದಿಯನ್ನು ಒಗ್ಗೂಡಿಸುವ ಶಕ್ತಿಯಿಲ್ಲ. ಹಿರಿಯ ಕಲಾವಿದರಿಗೆ ಮರ್ಯಾದೆನೂ ಸಿಗುತ್ತಿಲ್ಲ ಎಂದು ಆತಂಕವಿದೆ. ಅಣ್ಣಾವ್ರ ಬಳಿಕ ಚಿತ್ರರಂಗದ ಮುಂದಾಳತ್ವವನ್ನು ವಹಿಸಿಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಇಂತಹ ಹಿರಿಯ ಕಲಾವಿದರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು.
ಅಣ್ಣಾವ್ರ ಮುಂದಾಳತ್ವದಲ್ಲಿ ಕನ್ನಡ ಚಿತ್ರರಂಗ ಸುಸ್ಥಿತಿಯಲ್ಲಿ ಇತ್ತು. ಅಣ್ಣಾವ್ರು ಹಾಕಿಕೊಟ್ಟ ಹೆಜ್ಜೆಯಲ್ಲಿಯೇ ಎಲ್ಲರೂ ನಡೆಯುತ್ತಿದ್ದರು. ಚಿತ್ರರಂಗಕ್ಕೆ ಏನಾದರೂ ಕುತ್ತು ಬಂದರೆ, ಅಲ್ಲಿ ವರನಟ ಇರುತ್ತಿದ್ದರು. ಸಮಸ್ಯೆ ಎಷ್ಟೇ ಕ್ಲಿಷ್ಠವಾಗಿದ್ದರೂ ಕ್ಷಣ ಮಾತ್ರದಲ್ಲಿ ಪರಿಹಾರ ಸಿಗುತ್ತಿತ್ತು. ಅಣ್ಣಾವ್ರ ಅಗಲಿಕೆ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಮುಂದಾಳತ್ವ ವಹಿಸಿದ್ದರು. ಅಂಬಿ ಬಳಿಕ ಚಿತ್ರರಂಗವನ್ನು ಮುನ್ನಡೆಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಅನ್ನೋ ಅಳುಕು ಹಿರಿಯರಲ್ಲಿದೆ.

ಡಿಂಗ್ರಿ ನಾಗರಾಜ್ ಇತ್ತೀಚೆಗೆ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಮಾತಾಡಿದ್ದಾರೆ. ಚಿತ್ರರಂಗಕ್ಕೆ ಮುನ್ನಡೆಸುವ ನಾಯಕರು ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೇ ಅಂಬರೀಶ್ ಹಾಗೂ ಶಿವಣ್ಣ ಅವರಲ್ಲಿ ಒಂದು ಗುಣದ ಬಗ್ಗೆನೂ ಮಾತಾಡಿದ್ದಾರೆ. ಅದೇನು ಅಂತ ನೋಡುವುದಕ್ಕೆ ಮುಂದೆ ಓದಿ.
ಚಿತ್ರರಂಗಕ್ಕೆ ಒಬ್ಬರ ಕಮಾಂಡರ್ ಬೇಕು ಅನ್ನೋದು ಡಿಂಗ್ರಿ ನಾಗರಾಜ್ ಅವರ ಅಭಿಪ್ರಾಯ. ಈ ಸಂದರ್ಶನದಲ್ಲಿ ಶಿವಣ್ಣ ಹಾಗೂ ಅಂಬರೀಶ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. "ನಮ್ಮೆಲ್ಲರಿಗೂ ಒಬ್ಬರು ಕಮಾಂಡರ್ ಬೇಕು ಅಂತ ಅನಿಸೋದು ಒಬ್ಬರೇ ಅವರು ರಾಜ್‌ಕುಮಾರ್. ಈಗ ಅವರು ಇಲ್ಲ. ಹಾಗಾಗಿ ಶಿವಣ್ಣನನ್ನು ಆ ಸ್ಥಾನಕ್ಕೆ ಕೂರಿಸಬೇಕು ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ, ಶಿವಣ್ಣ ಒಪ್ಪುತ್ತಿಲ್ಲ. ಯಾಕಂದ್ರೆ, ಶಿವಣ್ಣನ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಇಡೀ ಇಂಡಸ್ಟ್ರಿನೇ ಕೇಳುತ್ತೆ. ಹಾಗಾಗಿ ಕಲಾವಿದರ ಸಂಘದ ಚುನಾವಣೆ ಮಾಡಿ, ಶಿವಣ್ಣನನ್ನು ಪ್ರೆಸಿಡೆಂಟ್ ಮಾಡಬೇಕು ಅಂತ ಒಂದು ವರ್ಗ ನೆನೆಸಿಕೊಳ್ಳುತ್ತಿದ್ದಾರೆ. ಅವರನ್ನು ವಿರೋಧಿಸುವವರು ಯಾರೂ ಇಲ್ಲ. ಯಾಕಂದ್ರೆ, ಅವರು ಎಲ್ಲರೊಂದಿಗೂ ಚೆನ್ನಾಗಿದ್ದಾರೆ." ಎಂದು ಹೇಳಿದ್ದಾರೆ.

ಇನ್ನು ಅಂಬರೀಶ್ ತಮ್ಮ ಜೊತೆ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಕಾಳಜಿ ವಹಿಸುತ್ತಿದ್ದ ಬಗ್ಗೆ ರಿವೀಲ್ ಮಾಡಿದ್ದಾರೆ. "ಶೂಟಿಂಗ್ ಮುಗಿದು ಪ್ಯಾಕ್‌ಅಪ್ ಅಂದ ಕೂಡಲೇ ಅಂಬರೀಶ್ ಏನು ಮಾಡೋರು ಅಂದ್ರೆ, ಸ್ಪೆಷಲ್ ಊಟ ಮಾಡಿಸೋರು. ನಮ್ಮಂತಹ ಹಿರಿಯರಿಗೆ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್‌ಗಳಿಗೆ ಪ್ಯಾಂಟು ಶರ್ಟ್ ಕೊಡಿಸೋರು. ಎಲ್ಲರೂ ಊಟ ಮಾಡ್ರಪ್ಪ ಅಂತ ಹೇಳಿ ಗುಡ್ ಬೈ ಹೇಳೋರು. ಆಗ ಏನು ಹೆಚ್ಚು ಅಂದರೆ, ಎರಡು-ಮೂರು ಲಕ್ಷ ರೂಪಾಯಿ ಪೇಮೆಂಟ್ ಇತ್ತು. ಅಷ್ಟಕ್ಕೆ ಅಷ್ಟು ಖರ್ಚು ಮಾಡೋರು." ಎಂದಿದ್ದಾರೆ.
ಇನ್ನು ಅಂಬರೀಶ್ ಹಾಗೂ ಶಿವಣ್ಣ ಇಬ್ಬರಲ್ಲೂ ಒಂದೇ ಗುಣವಿದೆ. ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಇಬ್ಬರಿಗೂ ಕಾಳಜಿಯಿದೆ ಎಂದಿದ್ದಾರೆ. "ಶಿವಣ್ಣನೂ ಅಷ್ಟೇನೆ.. ಪ್ಯಾಕ್‌ಅಪ್ ಅಂದ ಕೂಡಲೇ ಎಲ್ಲರಿಗೂ ದುಡ್ಡನ್ನು ಅರೇಂಜ್ ಮಾಡಿಸುತ್ತಾರೆ. ಎಲ್ಲರಿಗೂ ಊಟವನ್ನು ಮಾಡಿಸಿ ಹೋಗುತ್ತಾರೆ. ಹಾಗೆ ಇಬ್ಬರು ಮೂವರನ್ನು ನೋಡಿದ್ದಷ್ಟೇ. ಇನ್ಯಾರು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ." ಎನ್ನುತ್ತಾರೆ.
ಅಣ್ಣಾವ್ರೇ ಕನ್ನಡ ಚಿತ್ರರಂಗದ ಸಾರ್ವಭೌಮ. ಅವರು ಹೋದ್ಮೇಲೆ ಕಲಾವಿದರಿಗೆ ಗೌರವ ಇಲ್ಲದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಅಣ್ಣಾವ್ರು ಇರೋವರೆಗೂ ಅವರೇ ಬಾಸ್. ಅವರು ಹೋದ್ಮೇಲೆ ಎಲ್ಲಾ ಬೇರೆ ಬೇರೆಯಾದರು. ಸಿನಿಮಾ ಮಾಡುವವರಿಗೆ ಗೌರವನೇ ಇಲ್ಲ ಅನ್ನೋ ಹಾಗೇ ಆಯ್ತು. ಆ ಶಿವರಾಮಣ್ಣ ಕಾರ್ಯದರ್ಶಿ ಆಗಿದ್ದರು. ಏನಾದರೂ ಆಗಬೇಕಾದರೆ, ಅವರನ್ನು ಕರೆಸಿ ಮಾತಾಡುತ್ತಿದ್ದರು. ಯಾರಿಗಾದರೂ ಬುದ್ಧಿವಾದ ಹೇಳಬೇಕು ಅಂದರೂ, ಯಾರಿಗೂ ನೋವಾಗುವಂತೆ ಮಾತಾಡುತ್ತಿರಲಿಲ್ಲ" ಎಂದು ಡಿಂಗ್ರಿ ನಾಗರಾಜ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications















