"ಹೀರೊಗಳು ಹೊಟ್ಟೆಕಿಚ್ಚು ಪಡೋದನ್ನು ಬಿಟ್ಟುಬಿಡಿ": ಸ್ಟಾರ್‌ಗಳಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮನವಿ!
ಸ್ಯಾಂಡಲ್‌ವುಡ್ ಒಳ್ಳೆ ಕಾರಣಗಳಿಗೆ ಹೇಗೆ ಹೆಸರು ಮಾಡಿದೆಯೋ, ಹಾಗೇ ಕೆಲವು ಅಹಿತಕರ ಘಟನೆಗಳಿಗೂ ಸುದ್ದಿಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾ ಸದ್ದು ಮಾಡುತ್ತಿರುವಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್ ಶುರುವಾಗಿತ್ತು.
ಸೋಶಿಯಲ್ ಮೀಡಿಯಾಗಳಲ್ಲಿ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಒಬ್ಬರ ಮೇಲೆ ಮತ್ತೊಬ್ಬರು ಹೀನಾಯವಾಗಿ ಟೀಕೆ ಮಾಡಿದ್ದರು. ಇತ್ತೀಚೆಗೆ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಕಿತ್ತಾಟ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗಿತ್ತು. ಆ ಮಟ್ಟಿಗೆ ಇಬ್ಬರೂ ಕಿತ್ತಾಡಿದ್ದರು. ಇನ್ನೂ ಆ ಫ್ಯಾನ್ಸ್ ವಾರ್ ಮುಂದುವರೆದಿದೆ.

ಇನ್ನೊಂದು ಕಡೆ 'ಕ್ರಾಂತಿ' ಸಿನಿಮಾ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಕೂಡ ಈ ಫ್ಯಾನ್ಸ್‌ವಾರ್‌ಗೆ ಮತ್ತಷ್ಟು ತುಪ್ಪ ಸುರಿದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಸೂಪರ್‌ಸ್ಟಾರ್‌ಗಳಲ್ಲಿ ಇವೆಲ್ಲವನ್ನೂ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಹಿರಿಯ ನಟ ಸ್ಟಾರ್‌ಗಳಿಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಪ್ರತಿಯೊಬ್ಬ ಕಲಾವಿದನಿಗೂ ಹುಟ್ಟು ಸಾವು ಇದ್ದಿದ್ದೇ'
ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ನಡೀತಿರೋ ಕಿತ್ತಾಟಗಳಿಗೆ ಹಿರಿಯನಟ ಶ್ರೀನಿವಾಸ ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಕಲಾವಿದನೂ ಸಾವು ಖಚಿತ. ಆದರೆ, ಅವನ ಮಾಡುವ ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದಿದ್ದಾರೆ.
"ಪ್ರತಿಯೊಬ್ಬ ಕಲಾವಿದನಿಗೂ ಹುಟ್ಟು ಸಾವು ಇದ್ದಿದ್ದೇ. ಅವನು ಮೇಲಕ್ಕೆ ಬಂದು ಕಮರ್ಷಿಯಲ್ ಹೀರೊ ಆದ್ಮೇಲೆ ಅವನು ಎಷ್ಟು ವರ್ಷ ಇರುತ್ತಾನೋ ಗೊತ್ತಿಲ್ಲ. ಆದರೆ, ಅವನು ಮಾಡಿರುವ ಪಾತ್ರಗಳೇ ಚಿರಸ್ಥಾಯಿಯಾಗಿ ಉಳಿಯುವಂತಹದ್ದು. ನಾನು ಮೇಲೆ ಬಂದೆ. ಅವನು ಕೆಳಗೆ ಇದ್ದಾನೆ. ಅವನನ್ನು ಮೇಲಕ್ಕೆ ತರಬೇಕು. ಇವನನ್ನು ತುಳಿಯಬೇಕು ಅನ್ನೋ ಮನೋಭಾವನೆ ಬಿಟ್ಟು ನಾವೆಲ್ಲರೂ ಒಂದೇ. ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋದನ್ನು ತಿಳಿದುಕೊಂಡಾಗ ಮಾತ್ರ ಸುಖವಾಗಿರೋಕೆ ಸಾಧ್ಯ." ಎಂದು ಸ್ಟಾರ್‌ಗಳಿಗೆ ಸಲಹೆ ನೀಡಿದ್ದಾರೆ.

'ಎಲ್ಲಾ ಹೀರೊಗಳು ಹೊಟ್ಟೆಕಿಚ್ಚು ಪಡೋದನ್ನು ಬಿಟ್ಟುಬಿಡಿ'
"ಎಲ್ಲರೂ ಹೀರೊಗಳಾಗಲಿ ಬೇಡ ಅಂತ ಹೇಳಿಲ್ಲ. ಆದರೆ, ಇನ್ನೊಬ್ಬರ ಬಗ್ಗೆ ಮತ್ಸರ ಹೊಟ್ಟೆಕಿಚ್ಚು ಪಡೋದನ್ನು ಬಿಟ್ಟುಬಿಡಿ ಅಂತ ಎಲ್ಲಾ ಹೀರೊಗಳಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಒಳ್ಳೆಯ ಪಾತ್ರಗಳನ್ನು ಸೃಷ್ಟಿ ಮಾಡಿಸಿಕೊಳ್ಳಿ. ಇಬ್ಬರು ಹೀರೊಗಳಲ್ಲ, ಮೂರು ಹೀರೊಗಳು ಒಂದೇ ಸಿನಿಮಾದಲ್ಲಿ ಮಾಡಿ. ಅವನಿಗಿಂತ ನಾನು ಚೆನ್ನಾಗಿ ಮಾಡಿದ್ನಾ? ಅವನಿಗಿಂತ ನಾನು ಚೆನ್ನಾಗಿ ಮಾಡಬೇಕು ಅನ್ನೋ ಒಂದು ಶರತ್ತು ಕರಿಯರ್‌ನಲ್ಲಿ ಹಿಡಿದುಕೊಂಡು ಆ ಪಾತ್ರವನ್ನು ಮಾಡಿದ್ರೆ, ಸೈ ಎನಿಸಿಕೊಳ್ಳುತ್ತಾರೆ. ಜನ ಮೆಚ್ಚುತ್ತಾರೆ." ಎಂದು ಶ್ರೀನಿವಾಸ್ ಮೂರ್ತಿ ಸಲಹೆ ನೀಡಿದ್ದಾರೆ.
ಇನ್ನೊಂದು ಸೂಪರ್‌ಸ್ಟಾರ್ ಅಭಿಮಾನಿಗಳು ಕೂಡ ಮನಸ್ಸಿಗೆ ಬಂದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಮಾಡುತ್ತಾರೆ. ಕೆಟ್ಟ ಶಬ್ಧಗಳನ್ನು ಬಳಸಿ ನಿಂದಿಸುತ್ತಾರೆ. ಇವೆಲ್ಲದರ ಬಗ್ಗೆನೂ ಶ್ರೀನಿವಾಸ್ ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಎಲ್ಲಾ ಕಲಾವಿದರ ಮೇಲೂ ಪ್ರೀತಿ ತೋರಬೇಕು ಎಂದಿದ್ದಾರೆ.
"ಅಭಿಮಾನಿಗಳೂ ಅಷ್ಟೇ. ನಾನು ಆ ಹೀರೊ ಅಭಿಮಾನಿ.. ನಾನು ಈ ಹೀರೊ ಅಭಿಮಾನಿ ಅನ್ನೋದನ್ನು ಬಿಟ್ಟು, ನಾವೆಲ್ಲರೂ ಕಲಾವಿದರ ಅಭಿಮಾನಿಗಳು ಅನ್ನೋ ಪ್ರೀತಿ ತೋರಿಸಿ. ಆಗ ಹೀರೊಗಳಿಗೂ ಸಂತೋಷವಾಗುತ್ತೆ. ಕಲಾವಿದರಿಗೂ ಸಂತೋಷವಾಗುತ್ತೆ. ನಮಗೂ ಸಂತೋಷವಾಗುತ್ತೆ. ಅಭಿಮಾನಿಗಳಿಗೂ ಸಂತೋಷವಾಗುತ್ತೆ." ಎಂದು ಈಗ ನಡೆಯುತ್ತಿರುವ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಬಗ್ಗೆ ಚಿತ್ರರಂಗದ ಹಿರಿಯ ಕಲಾವಿದನಾಗಿ ಸಲಹೆ ನೀಡಿದ್ದಾರೆ.


Click it and Unblock the Notifications











