"ನಾನು ಸರ್ವೆ ಇಲಾಖೆಯಲ್ಲಿದ್ದೆ.. ದೇವೇಗೌಡರು ರಾಜೀನಾಮೆ ಕೊಡಿಸಿದ್ರು": ಹಿರಿಯ ನಟ ಶ್ರೀನಿವಾಸ್ ಮೂರ್ತಿ
ಹಿರಿಯ ನಟ ಶ್ರೀನಿವಾಸ್ ಮೂರ್ತಿ ಯಾರಿಗೆ ಗೊತ್ತಿಲ್ಲ. ಇವರ ಸಹಜ ಅಭಿನಯಕ್ಕೆ ಮರುಳಾಗದವೇ ಇಲ್ಲ. ಸುಮಾರು 50 ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಇವರು ಅಭಿನಯದ ಬಗ್ಗೆ ಇದೂವರೆಗೂ ಒಂದೇ ಒಂದು ನೆಗೆಟಿವ್ ಕಮೆಂಟ್ ಬಂದ ಉದಾಹರಣೆ ಇಲ್ಲ.
ಪೋಷಕ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಶ್ರೀನಿವಾಸ್ ಮೂರ್ತಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಇತ್ತೀಚೆಗೆ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ತಮ್ಮ ಬದುಕಿನ ಕೆಲವು ಇಂಟ್ರೆಸ್ಟಿಂಗ್ ಅಧ್ಯಾಯಗಳನ್ನು ತೆರೆದಿಟ್ಟಿದ್ದಾರೆ.

ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದು, ಆಸ್ತಿ ಮಾರಿಕೊಂಡಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಹಾಗೇ ಸರ್ಕಾರಿ ನೌಕರಿಯಲ್ಲಿ ಇದ್ದಿದ್ದು, ದೇವೇಗೌಡರಿಂದ ರಾಜೀನಾಮೆ ಕೊಟ್ಟಿದ್ದು, ಬಂಗಾರಪ್ಪನವರ ಸಹಾಯ ಎಲ್ಲವನ್ನೂ ಮುಕ್ತವಾಗಿ ಹೊಗಳಿದ್ದಾರೆ.
"ದೇವೇಗೌಡರು ರಾಜೀನಾಮೆ ಕೊಡಿಸಿದ್ರು"
ಶ್ರೀನಿವಾಸ್ ಮೂರ್ತಿ ಚಿಕ್ಕಬಳ್ಳಾಪುರದ ಜಡಲತಿಮ್ಮನಹಳ್ಳಿಯವರು. 1973 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದರು. ಆಗ ಶ್ರೀನಿವಾಸ್ ಮೂರ್ತಿಯವರು ಸರ್ಕಾರಿ ನೌಕರಿಯಲ್ಲಿದ್ದರು. ಸರ್ವೆ ಇಲಾಖೆಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಜೊತೆ ಸಿನಿಮಾದಲ್ಲೂ ನಟಿಸಿದ್ದರು. ಈ ಸರ್ಕಾರಿ ಕೆಲಸವನ್ನು ಬಿಡಿಸಿದ್ದು ದೇವೇಗೌಡರು ಎಂದು ಹೇಳಿದ್ದಾರೆ.
"ಅವಾಗ ದೇವೇಗೌಡರು ಮಾಡಿದ ಕೆಲಸ. ಆಗ ನಾನು ಸರ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದೆ. ರಾಜೀನಾಮೆ ಕೊಡಿಸಿ, ದೊಡ್ಡಬಳ್ಳಾಪುರದಲ್ಲಿ ಎಂಎಲ್‌ಎಗೆ ನಿಲ್ಲಿಸಿ ಸೋಲಿಸಿದ್ರು. ಅವರು ನಮ್ಮ ಜಾತಿಯವರೆಲ್ಲಾ ಓಟು ಹಾಕುತ್ತಾರೆ ಅಂದ್ಕೊಂಡಿದ್ದರು. ಅಲ್ಲಿ ಇದ್ದಿದ್ದೆಲ್ಲಾ ನೇಕಾರರು. 17, 18 ಸಾವಿರ ವೋಟು ಇತ್ತು." ಎಂದು ಚುನಾವಣೆಗೆ ನಿಂತಿದ್ದ ಆ ದಿನಗಳನ್ನು ನೆನಪಿಸಿಕೊಂಡರು.

ಚುನಾವಣೆಯಲ್ಲಿ ಶ್ರೀನಿವಾಸ್ ಮೂರ್ತಿ ಸೋತಿದ್ದೇಕೆ?
ಶ್ರೀನಿವಾಸ್ ಮೂರ್ತಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಆದರೆ, ರಾಜಕೀಯದ ಅನುಭವವಿರಲಿಲ್ಲ. ಹೀಗಾಗಿ ತಮ್ಮ ಎದುರಾಳಿಯ ಆರ್ ಎಲ್ ಜಾಲಪ್ಪ ಅವರ ಬಗ್ಗೆ ಗೊತ್ತಿರಲಿಲ್ಲ. ಅದಾಗಲೇ ಅವರು ಅಲ್ಲಿನ ನೇಕಾರರಿಗೆಲ್ಲಾ ಸಹಾಯ ಮಾಡಿದ್ದರಿಂದ, ಅವರಿಗೆ ಒಲವಿತ್ತು ಎನ್ನುತ್ತಾರೆ ಶ್ರೀನಿವಾಸ್ ಮೂರ್ತಿ.
"ಆರ್ ಎಲ್ ಜಾಲಪ್ಪ ನನಗೇನು ಗೊತ್ತೇ ಇಲ್ಲ. ಅವರು ಅಲ್ಲಿ ನೇಕಾರರಿಗೆಲ್ಲಾ ಒಳ್ಳೆಯ ಅನುಕೂಲ ಮಾಡಿಕೊಟ್ಟಿದ್ದರು. ಅವರಿಗೆ ವೋಟು ಕೇಳುವುದಕ್ಕೆ ಹೋದರೆ, ನೀವ್ಯಾಕೆ ನಿಂತುಕೊಂಡ್ರಿ? ನಾನು ಜಾಲಪ್ಪನವರಿಗೆ ವೋಟು ಹಾಕೋದು ಬನ್ನಿ ಕಾಫಿ ಕುಡೀರಿ ಅಂತ ಅನ್ನೋರು." ಎಂದು ಮತ ಕೇಳುವುದಕ್ಕೆ ಹೋದಾಗಲೇ ಸೋಲಿನ ಅನುಭ ಆಗಿತ್ತಿ ಅನ್ನೋದನ್ನು ಹೇಳಿದ್ದಾರೆ.
ಬಂಗಾರಪ್ಪ ಅವರನ್ನು ನೆನೆದ ಶ್ರೀನಿವಾಸ್ ಮೂರ್ತಿ
ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರನ್ನು ಶ್ರೀನಿವಾಸ್ ಮೂರ್ತಿ ನೆನಪಿಸಿಕೊಂಡಿದ್ದಾರೆ. ಅವರ 'ಸದಾರಮೆ' ನಾಟಕ ನೋಡಲು ಬಂದಿದ್ದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. "ನಾನು ಬಂಗಾರಪ್ಪನವರಿಗೆ ನೆನಪಿಸಿಕೊಳ್ಳಬೇಕು. ಸದಾರಮೆ ಪಾತ್ರವನ್ನು 10 ನಿಮಿಷ ನೋಡುತ್ತೇನೆ ಅಂತ ಹೇಳೀ ಪೂರ್ತಿ ನೋಡಿ, ಏನು ಕೆಲಸ ಅವರಿಗೆ ಇಲ್ಲಿ? ಅಂತ ಕೇಳಿದ್ರು. ಅವರು ಸೆಕೆಂಡ್ ಡಿವಿಷನ್ ಕ್ಲರ್ಕ್ ಅಂದಾಗ, ಅವರಿಗೆ ಏನೂ ಕೆಲಸ ಕೊಡಬೇಡಿ ಅಂತ ಆರ್ಡರ್ ಮಾಡಿದ್ದರು." ಎಂದು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಅವತ್ತು ಕೆಲಸಕ್ಕೆ ರಾಜೀನಾಮೆ ಕೊಡದೆ ಇದ್ದಿದ್ದರೆ, ಇಂದು 35 ರಿಂದ 40 ಸಾವಿರ ರೂಪಾಯಿ ಪೆನ್ಷನ್ ಬರುತ್ತಿತ್ತು. 14 ವರ್ಷ ಸರ್ವಿಸ್ ಆಗಿದ್ದು, 15 ವರ್ಷ ಆಗಿದ್ದರೆ, ಪೆನ್ಷನ್ ಬರುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಎಲ್ಲೂ ಪಶ್ಚಾತ್ತಾಪ ಪಡುತ್ತಿದ್ದೇನೆ ಅನ್ನೋ ಮಾತನ್ನು ಮಾತ್ರ ಆಡಿಲ್ಲ.


Click it and Unblock the Notifications











