"ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿರುವುದರಿಂದ ಅವರ ಪಾತ್ರ ಏನೂ ಇಲ್ಲ"; ಸುಂದರ್ ರಾಜ್
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದಾಗಿತ್ತು. ಆದರೆ, ಚಿರಂಜೀವಿ ಸರ್ಜಾ ದಿಢೀರ್ ನಿಧನ ಎರಡೂ ಕುಟುಂಬದಲ್ಲಿ ಸೂತಕ ವಾತಾವರಣವನ್ನು ಸೃಷ್ಟಿಸಿಬಿಟ್ಟಿತ್ತು. ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಮುಂದಿನ ಬದುಕು ಹೇಗಿರುತ್ತೋ ಅಂತ ಮರುಕಪಟ್ಟವರಿಗೇನು ಕಮ್ಮಿಯಿರಲಿಲ್ಲ.
ಈಗ ಚಿರಂಜೀವಿಯನ್ನು ಕಳೆದುಕೊಂಡ ನೋವಿನಿಂದ ಮೇಘನಾ ರಾಜ್ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಬೆನ್ನೆಲುಬಾಗಿ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ನಿಂತಿದ್ದಾರೆ. ಮತ್ತೆ ಮಗಳ ಬದುಕಿಗೆ ಹೊಸ ರೂಪ ನೀಡುವುದಕ್ಕೆ ಹವಣಿಸುತ್ತಿದ್ದಾರೆ. ಇತ್ತೀಚೆಗೆ ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಂದರ್ ರಾಜ್ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ.

ಚಿರು ಅಗಲಿದ ಬಳಿಕ ಮೇಘನಾ ರಾಜ್ ಅವರ ಮನೆಯಲ್ಲೇ ಇದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾ ಜೊತೆ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮಿರ್ಚಿ ಕನ್ನಡದ ಸಂದರ್ಶನದಲ್ಲಿ ಸುಂದರ್ ರಾಜ್ ತಮ್ಮ ಮಗಳನ್ನು ತಾವೇ ನೋಡಿಕೊಳ್ಳುತ್ತಿದ್ದೇವೆ. ಮಗಳನ್ನು ಸ್ಟ್ರಾಂಗ್ ಮಹಿಳೆಯನ್ನಾಗಿ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸುಂದರ್ ರಾಜ್ ಮಗಳ ಭವಿಷ್ಯದ ಬಗ್ಗೆ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ಸೊಸೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು
ನಿರೂಪಕರು ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳನ್ನು ಹೇಗೆ ನೋಡಿಕೊಳ್ಳಬೇಕು? ಅನ್ನುವ ಪ್ರಶ್ನೆಗೆ ಸುಂದರ್ ರಾಜ್ ಕೊಟ್ಟ ಉತ್ತರ ಹೀಗಿತ್ತು. "ಸೊಸೆಯಾಗಿ ಬರುವ ಹೆಣ್ಣು ಮಗಳನ್ನು ಇನ್ನೂ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಯಾಕಂದ್ರೆ, ಒಂದು ಹೆಣ್ಣು ಎಲ್ಲವನ್ನೂ ಬಿಟ್ಟು ಗಂಡನ ಮನೆಗೆ ಬಂದಿರುತ್ತಾಳೆ. ಆ 20 ವರ್ಷ ಅವಳ ಎಲ್ಲವನ್ನೂ ನೋಡಿರುತ್ತಾಳೆ. ಸಾಕು-ಬೇಕುಗಳು, ನೋವು-ನಲಿವುಗಳು, ಚಿಕ್ಕ ಮಕ್ಕಳಾಗಿದ್ದಾಗ ಜ್ವರ ಬಂದಿರುತ್ತೆ. ಅಷ್ಟೆಲ್ಲ ನೋಡಿದ ಮೇಲೆ ಒಂದು ಅಲಂಕಾರದ ಗೊಂಬೆಯಾಗಿ ಮಾಡಿ ಕಳಿಸಿರುತ್ತೇನೆ. ನೀವು ಆ ಅಲಂಕಾರವನ್ನು ಕೀಳಬಾರದು. ಹಾಗೇ ಆ ಮನೆಗೆ ಹೋದ ಹೆಣ್ಣು ಮಗಳು ಕೂಡ ಶೋಭೆ ತರುವಂತೆ ಇರಬೇಕು." ಎಂದು ಹಿರಿಯ ನಟ ಸುಂದರ್ ರಾಜ್ ಹೇಳಿದ್ದಾರೆ.
ಆ ಮನೆಯಲ್ಲೂ ಒಬ್ಬಳು ಹೆಣ್ಣು ಇರುತ್ತಾಳೆ
ಇದೇ ವೇಳೆ ಮಗಳನ್ನು ಮದುವೆ ಮಾಡಿಕೊಟ್ಟ ಮನೆಯಲ್ಲೂ ಒಬ್ಬಳು ಹೆಣ್ಣು ಇರುತ್ತಾಳೆ ಎಂದು ಹೇಳುತ್ತಾ ಅತ್ತೆ ಹಾಗೂ ಸೊಸೆಯ ನಡುವಿನ ಬಂಧದ ಬಗ್ಗೆನೂ ಮಾತಾಡಿದ್ದಾರೆ. "ಮದುವೆಯಾಗಿ ಹೋದಾಗ ಅಲ್ಲೂ ಒಂದು ಹೆಣ್ಣು ಇರುತ್ತೆ. ಅತ್ತೆಗೆ ಸೊಸೆಗೆ ಯಾಕೆ ಜಗಳ ಆಗುತ್ತೆ ಅಂದರೆ, ಅತ್ತೆಗೆ ನನ್ನ ಮಗ ನಾನು ಹೇಳಿದಂತೆ ಮಾತು ಕೇಳಬೇಕು ಅಂತಿರುತ್ತೆ. ಹೆಂಡತಿಗೆ ನಾನು ಕಟ್ಟಿಕೊಂಡು ಬಂದಿದ್ದೇನೆ. ನಾನು ಹೇಳಿದ ಮಾತು ಕೇಳಬೇಕು ಅಂತಿರುತ್ತೆ. ಪಾಪ ಇವನು ಹೆಂಡತಿಯನ್ನು ನೋಡೋದಾ? ಅಮ್ಮನನ್ನು ನೋಡೋದಾ? ಅಂತಾಗುತ್ತೆ." ಎಂದಿದ್ದಾರೆ.

ಮೇಘನಾಳನ್ನು ನಾವೇ ನೋಡಿಕೊಳ್ತಿದ್ದೇವೆ
ಇನ್ನು ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಅಪ್ಪ-ಅಮ್ಮನ ಜೊತೆಯಲ್ಲಿ ಇದ್ದಾರೆ. ಈ ಸಂದರ್ಶನದಲ್ಲೂ ಸುಂದರ್ ರಾಜ್ ಮಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. "ನನಗೆ ಇಂತಹ ಪರಿಸ್ಥಿತಿ ಬರಲಿಲ್ಲ. ನನ್ನ ಮಗಳಿಗೆ ಆರಂಭದಲ್ಲಿಯೇ ಹೊರಟು ಹೋಯ್ತು. ಆ ಕಡೆಯಿಂದ ಟಾರ್ಚರ್ ಅದು ಇದೂ ಅನ್ನೋ ಮಾತನ್ನೇ ಉಪಯೋಗಿಸಬಾರದು. ಹೆಚ್ಚಾಗಿ ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿರುವುದರಿಂದ ಅವರ ಪಾತ್ರ ಏನೂ ಇಲ್ಲ ಇಲ್ಲಿ." ಎಂದು ಹೇಳಿದ್ದಾರೆ.
ಬಲಿಷ್ಠ ಮಹಿಳೆ ಮಾಡುತ್ತೇವೆ
ಹಾಗೇ ಮೇಘನಾ ರಾಜ್‌ರನ್ನು ಯಾರ ಮೇಲೂ ಡಿಪೆಂಡೆಂಟ್ ಆಗಿದೆ ಇರುವಂತೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. "ನಾವು ಈಗ ನಮ್ಮ ಮಗಳ ಬಗ್ಗೆ ಸಿಕ್ಕಾಪಟ್ಟೆ ಕೇರ್‌ಫುಲ್ ಆಗಿದ್ದೇವೆ. ಯಾವತ್ತೂ ಅವಳ ಯೋಗಕ್ಷೇಮವನ್ನು ನಾವೇ ನೋಡಿಕೊಳ್ಳಬೇಕು. ಎಷ್ಟು ವರ್ಷ ಇರುತ್ತೇವೋ ನಮಗೆ ಗೊತ್ತಿಲ್ಲ. ಆದರೆ, ನಾನು ಹೇಳೋದು ಅವಳನ್ನು ಬಲಿಷ್ಠವಾದ ಮಹಿಳೆ ಮಾಡಿ ಹೊರಟು ಹೋಗುತ್ತೇವೆ. ಯಾರ ಮೇಲೂ ಡಿಪೆಂಡ್ ಆಗಬಾರದು. ನೀನು ಒಂಟಿನೇ. ಒಂಟಿ ಸಲಗನೇ. ಆ ಒಂಟಿಯಲ್ಲೇ ಒಂದು ತಾಕತ್ತು ಬಂದು ಬಿಡಬೇಕು." ಎಂದಿದ್ದಾರೆ.


Click it and Unblock the Notifications











