ಮಂಗಳೂರಲ್ಲಿ ಕಳೆದ ದಿನಗಳು ನೆನಪಿಲ್ಲ.. ಆದರೆ, ಸವಿನೆನಪುಗಳನ್ನು ತೆಗೆದುಕೊಂಡು ಹೋಗುತ್ತೇನೆ"-ಶಾರುಖ್ ಖಾನ್
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೂ ಮಂಗಳೂರಿಗೂ ಹಳೆಯ ನಂಟಿದೆ. ಅವರ ಬಾಲ್ಯದ ಕೆಲವು ದಿನಗಳಲ್ಲಿ ನಮ್ಮ ಕರಾವಳಿಯಲ್ಲಿಯೇ ಕಳೆದಿದ್ದರು. ಹಲವು ಸಂದರ್ಶನಗಳಲ್ಲಿ ಈ ಸಂಗತಿಯನ್ನು ಶಾರುಖ್ ಖಾನ್ ಹೇಳಿಕೊಂಡಿದ್ದರು. ಹೀಗಾಗಿ ಕಿಂಗ್ ಖಾನ್‌ಗೂ ಮಂಗಳೂರಿಗೂ ಬಿಡಲಾರದ ನಂಟು ಇದೆ. ಆದರೆ, ಶಾರುಖ್ ಖಾನ್ ತಾನು ಬೆಳೆದ ಊರಿಗೆ ಬಾರದೇ ಹಲವು ವರ್ಷಗಳೇ ಆಗಿತ್ತು.
ಈಗ ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಆಗಿ ಮರೆಯುತ್ತಿರುವ ಶಾರುಖ್ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಬಂದಿದ್ದರು. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇಂದು (ಜೂನ್ 25) ಮಧ್ಯಾಹ್ನವೇ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಜಮಾಯಿಸಿದ್ದರು. ಶಾರುಖ್ ಖಾನ್ ಅನ್ನು ನೋಡಿ ಥ್ರಿಲ್ ಆಗಿದ್ದರು.

ಮಂಗಳೂರಿನಲ್ಲಿ ನಡೆದ ಖಾಸಗಿ ಇವೆಂಟ್‌ನಲ್ಲಿ ಶಾರುಖ್ ಖಾನ್ ಮಂಗಳೂರಿನಲ್ಲಿ ಕಳೆದ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತುಳು ಭಾಷೆಯಲ್ಲಿಯೇ ಅಲ್ಲಿನ ಅಭಿಮಾನಿಗಳನ್ನು ಸ್ವಾಗತಿಸಿದ ಕಿಂಗ್ ಖಾನ್ ಮಂಗಳೂರು ಹಾಗೂ ಅವರ ನಂಟಿನ ಕುರಿತು ಹೆಮ್ಮೆಯಿಂದಲೇ ಮಾತಾಡಿದ್ದಾರೆ. ಅಷ್ಟಕ್ಕೂ ಶಾರುಖ್ ಖಾನ್ ಏನು ಮಾತಾಡಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಶಾರುಖ್ ಖಾನ್ ಮಂಗಳೂರು ಭೇಟಿಯ ಹಿಂದೆ ಬಲವಾದ ಕಾರಣವೊಂದಿದೆ. ಇಲ್ಲಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಿಂಗ್ ಖಾನ್ ಅವರನ್ನು ಕರೆಸಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗಾಗಿ ತನ್ನ ನೆಚ್ಚಿನ ನಟನನ್ನು ನೋಡುವುದಕ್ಕೆ ಮಂಗಳೂರಿನ ಜನತೆ ಅಪಾರ ಪ್ರಮಾಣದಲ್ಲಿ ಸೇರಿದ್ದರು.
ಇಂದು (ಜೂನ್ 25) ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ 'ಆ್ಯನ್ ಈವಿನಿಂಗ್ ವಿತ್ ಶಾರುಖ್ ಖಾನ್' ಎಂಬ ಇವೆಂಟ್ ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಶಾರುಖ್ ಖಾನ್ ಆಗಮಿಸಿದ್ದರು. ಈ ಸಂಸ್ಥೆಯ ಅಂಬಾಸಿಡರ್ ಆಗಿ ಇವೆಂಟ್‌ನಲ್ಲಿ ಭಾಗಿಯಾಗಿದ್ದು, ಮಂಗಳೂರಿನ ಜನರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮಂಗಳೂರಿಗೂ ತಮಗೂ ಇರುವ ಒಡನಾಟದ ಬಗ್ಗೆನೂ ಮಾತಾಡಿದ್ದಾರೆ.
"ನಾನು ಇಲ್ಲಿಗೆ ಬಂದಾಗ ನಿಮ್ಮ ಪ್ರೀತಿ ಹಾಗೂ ಇದೂವರೆಗೂ ನಾನು ನೋಡಿರದ ಸ್ವಾಗತವನ್ನು ಕಂಡೆ. ಅದಕ್ಕಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ. ರೋಹನ್ ಕಾರ್ಪೋರೇಷನ್‌ಗೆ ಧನ್ಯವಾದಗಳು. ನಾನು ನನ್ನ ಬಾಲ್ಯದ ಕೆಲವು ದಿನಗಳನ್ನು ಇಲ್ಲಿ ಕಳೆದಿದ್ದೇನೆ. ರೋಹನ್ ಅವರ ಸಹೋದರಿ ನಿಮಗೆ ಇಲ್ಲಿನ ಕಳೆದ ದಿನಗಳು ನೆನಪಿದೆಯೇ ಎಂದು ಕೇಳಿದ್ದರು. ಆದರೆ, ನಾನು ಆಗ ತುಂಬಾ ಚಿಕ್ಕವನಿದ್ದೆ. ಆದರೆ, ನನಗೆ ಮಂಗಳೂರಿಗೆ ಬರಬೇಕು ಕೆಲವು ಸವಿ ನೆನಪುಗಳನ್ನು ತೆಗೆದುಕೊಂಡು ಹೋಗಬೇಕು ಅನ್ನೋ ಆಸೆಯಿತ್ತು." ಎಂದು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹೇಳಿದ್ದಾರೆ.
ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರೋದಾರೆ, ಸದ್ಯ ಅವರ 'ಕಿಂಗ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ಹೋಮ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಅಲ್ಲದೇ ರಜನಿಕಾಂತ್ ಅವರ 'ಜೈಲರ್ 2' ಸಿನಿಮಾದಲ್ಲಿ ನಟಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇದೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಶಾರುಖ್ ಖಾನ್‌ಗೆ ಆಫರ್ ತಿರಸ್ಕರಿಸಿದ್ದಾರೆಂದು ಹೇಳಲಾಗಿದೆ. ಬ್ಯುಸಿಯಿದ್ದರೂ ಶಾರುಖ್ ಖಾನ್ ಬಿಡುವು ಮಾಡಿಕೊಂಡು ಮಂಗಳೂರಿಗೆ ಆಗಮಿಸಿದ್ದಾರೆ.


Click it and Unblock the Notifications
